ಹಂಪನಕಟ್ಟೆ ವೃತ್ತ ಇನ್ನು ಸಿಗ್ನಲ್ ಮುಕ್ತ ಸಂಚಾರ
ಮಂಗಳೂರು: ಮಹಾನಗರಗಳ ಕೂಡುರಸ್ತೆಗಳ ವೃತ್ತದಲ್ಲಿ ಒಂದು ಕಡೆಯಿಂದ ಆಗಮನ, ಇನ್ನೊಂದು ಕಡೆಯಿಂದ ನಿರ್ಗಮನ ಸಂಚಾರದಲ್ಲಿ ಟ್ರಾಫಿಕ್ ಸಿಗ್ನಲ್ ಸಾಮಾನ್ಯ. ಕೆಲವು ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಮುಕ್ತಗೊಳಿಸಿ ನಿರಂತರ ವಾಹನ ಸಂಚಾರಕ್ಕೆ ಏರ್ಪಾಡುಗೊಳಿಸುವುದಿದೆ. ದೊಡ್ಡ ಮಹಾನಗರಗಳಲ್ಲಿ ಇದ್ದ ಈ ವ್ಯವಸ್ಥೆ ಈಗ ಮಂಗಳೂರಿಗೆ ಕಾಲಿಟ್ಟಿದೆ. ಅಂದರೆ ಇಲ್ಲಿನ ಅಧಿಕಾರಿಗಳು ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದ್ದಾರೆ.
ಎಲ್ಲವೂ ನಿರೀಕ್ಷೆಯಂತೆ ಸಾಗಿದರೆ ನ.15ರ ವೇಳೆಗೆ ಸಿಗ್ನಲ್ ಮುಕ್ತ ಸಂಚಾರಕ್ಕೆ ಹಂಪನಕಟ್ಟೆ ಜಂಕ್ಷನ್ ತೆರೆದುಕೊಳ್ಳಲಿದೆ.
ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆ ಜಾರಿಗೆ ಬಂದ ಬಳಿಕ ಇಲ್ಲಿ ಟ್ರಾಫಿಕ್ ದೀಪಗಳಿಗೆ ಇಲ್ಲಿ ಕೆಲಸವಿಲ್ಲ, ವಾಹನಗಳ ಕ್ರಾಸಿಂಗ್ ಇಲ್ಲ, ಟ್ರಾಫಿಕ್ ಪೊಲೀಸರೂ ಅಗತ್ಯವಿಲ್ಲ.
ಸಿಗ್ನಲ್ ಫ್ರೀ ಸಂಚಾರ ಹೇಗೆ?: ಸ್ಟೇಟ್ಬ್ಯಾಂಕ್ನಿಂದ ಹಂಪನಕಟ್ಟೆ ಮೂಲಕ ಅಂಬೇಡ್ಕರ್ ವೃತ್ತ ಕಡೆ ಸಂಚರಿಸುವ ಹಾಗೂ ಅಂಬೇಡ್ಕರ್ ವೃತ್ತದಿಂದ ಸ್ಟೇಟ್ಬ್ಯಾಂಕ್ಗೆ ಸಂಚರಿಸುವ ವಾಹನಗಳು ಸಿಗ್ನಲ್ ಮುಕ್ತವಾಗಿ ನೇರ ಸಂಚಾರ ಕೈಗೊಳ್ಳುತ್ತವೆ.
ಇದೇ ವೇಳೆ ಕೆ.ಎಸ್.ರಾವ್ ವೃತ್ತದಿಂದ ಮಿಲಾಗ್ರಿಸ್ ಅಥವಾ ಸ್ಟೇಟ್ಬ್ಯಾಂಕ್ಗೆ ಸಂಚರಿಸುವ ವಾಹನಗಳು ಸಿಗ್ನಲ್ ಬಳಿ ಎಡಕ್ಕೆ ತಿರುಗಿ ಸಿಂಡಿಕೇಟ್ ಬ್ಯಾಂಕ್ ಬಳಿ ಬಲಕ್ಕೆ ತಿರುಗಿ ಮತ್ತೆ ಸಿಗ್ನಲ್ನತ್ತ ಸಂಚರಿಸುವುದು. ಮಿಲಾಗ್ರಿಸ್ಗೆ ಹೋಗುವುದಿದ್ದರೆ ಸಿಗ್ನಲ್ ಬಳಿ ಎಡಕ್ಕೆ ತಿರುಗುವುದು. ಅದೇ ರೀತಿ ಮಿಲಾಗ್ರಿಸ್ನಿಂದ ಕೆ.ಎಸ್.ರಾವ್ ವೃತ್ತ ಕಡೆಗೆ ಹೋಗುವ ವಾಹನಗಳು ಕ್ಲಾಕ್ ಟವರ್ ವರೆಗೆ ಸಾಗಿ ಅಲ್ಲಿಂದ ಬಲಕ್ಕೆ ಮುಂದುವರಿಯುವುದು. ಮಂಗಳಾದೇವಿ ಕಡೆಗೆ ಸಂಚರಿಸುವ ವಾಹನಗಳ ಕೂಡ ಸಿಗ್ನಲ್ನಲ್ಲಿ ಸಿಂಡಿಕೇಟ್ ಬ್ಯಾಂಕ್ ಬಳಿ ಬಲಕ್ಕೆ ತಿರುಗಿಯೇ ಮುಂದುವರಿಯಬೇಕು.
ಸಿಗ್ನಲ್ ಬಳಿ ಎರಡು ಕಡೆಗಳಲ್ಲಿ 30 ಸೆಕೆಂಡು ಪಾದಚಾರಿಗಳಿಗೆ ದಾಟಲು ಅವಕಾಶವಿರುತ್ತದೆ. ಆದರೆ ಸಿಗ್ನಲ್ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅವಕಾಶವಿಲ್ಲ, ಕ್ರಾಸಿಂಗ್ ಕೂಡ ಇಲ್ಲ. ಹಾಗೆಯೇ ಸಿಂಡಿಕೇಟ್ ಬ್ಯಾಂಕ್ ಬಳಿ ಮೇಲ್ಭಾಗದಲ್ಲಿ ಬಸ್ಬೇ ನಿರ್ಮಿಸಲಿದ್ದು, ಅಲ್ಲಿಯೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕಾಗುತ್ತದೆ.
ಪಾಲಿಕೆ ಅಸಡ್ಡೆ: ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಬೇಕಾದರೆ ಸಿಂಡಿಕೇಟ್ ಬ್ಯಾಂಕ್ ಬಳಿ ಸ್ಟೇಟ್ಬ್ಯಾಂಕ್ಗೆ ಹೋಗುವ ರಸ್ತೆ ಸಂಪರ್ಕಿಸುವಲ್ಲಿ ಯೂ ಟರ್ನ್ ತಿರುವು ರಚಿಸಬೇಕು. ಅದಕ್ಕಾಗಿ ಟ್ರಾಫಿಕ್ ಪೊಲೀಸರು ಮಹಾನಗರ ಪಾಲಿಕೆಗೆ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ 15 ದಿನ ಕಳೆದರೂ ಪಾಲಿಕೆ ಎಂಜಿನಿಯರ್ಗಳಿಂದ ತಾಂತ್ರಿಕ ವರದಿ ಸಿದ್ಧಗೊಂಡಿಲ್ಲ.
ಈ 30 ಮೀಟರ್ ಅಗಲ ರಸ್ತೆಯನ್ನು ಪಾಲಿಕೆಯೇ ರಚಿಸಬೇಕಿದ್ದು, ತಾಂತ್ರಿಕ ವರದಿ ಸಿದ್ಧಗೊಂಡ ಬಳಿಕ ಆಡಳಿತಾಧಿಕಾರಿಯ ಅನುಮೋದನೆ ಸಿಗಬೇಕು. ನಂತರ ಕಾಮಗಾರಿ ಆಗಬೇಕು.
ಮಂಗಳೂರಿನ ಪ್ರಾದೇಶಿಕ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕ ಚರಣ್ ಇಂಥ ವ್ಯವಸ್ಥೆ ಜಾರಿಗೆ ಪ್ರಸ್ತಾಪಿಸಿದ್ದು, ಟ್ರಾಫಿಕ್ ಪೊಲೀಸರು ಎರಡೆರಡು ಬಾರಿ ಸ್ಥಳ ಪರಿಶೀಲನೆ ನಡೆಸಿ ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದ ಬಹು ವರ್ಷಗಳಿಂದ ಚಾಲಕರಿಗೆ ಕಿರಿ ಕಿರಿ ಎನಿಸಿದ ಜನದಟ್ಟಣೆಯ ಸಿಗ್ನಲ್ ತೊಂದರೆಗೆ ಪರಿಹಾರ ಸಿಗುವ ನಿರೀಕ್ಷೆ ಹೊಂದಲಾಗಿದೆ.
ಪಂಪ್ವೆಲ್ನಲ್ಲಿ ಬಸ್ಬೇ: ನಗರದ ಪಂಪ್ವೆಲ್ನಲ್ಲೂ ಟ್ರಾಫಿಕ್ ತೊಂದರೆ ಇದೆ. ರಾಷ್ಟ್ರೀಯ ಹೆದ್ದಾರಿ 66 ಸಂಪರ್ಕಿಸುವ ಹಾಗೂ ಪಡೀಲು ರಸ್ತೆ ಸಂಪರ್ಕಿಸುವಲ್ಲಿ ಪಂಪ್ವೆಲ್ನ ಎಡ ಭಾಗದಲ್ಲಿ ಬಸ್ಬೇ ನಿರ್ಮಿಸಲು ಸಂಚಾರಿ ಪೊಲೀಸರು ನಿರ್ಧರಿಸಿದ್ದಾರೆ. ಪ್ರಸ್ತುತ ತಂಗುದಾಣದಲ್ಲಿ ಪಡೀಲ್ ಮೂಲಕ ಸಂಚರಿಸುವ ಬಸ್ಗಳನ್ನು ನಿಲ್ಲಿಸುವುದರಿಂದ ಸಂಚಾರ ಸಮಸ್ಯೆ ತಲೆದೋರುತ್ತದೆ. ಮುಂದೆ ಬಸ್ಬೇಯಲ್ಲಿ ಬಸ್ ನಿಲ್ಲಿಸಿದರೆ ಸಂಚಾರ ಸಮಸ್ಯೆ ಬಾರದು ಎನ್ನುವ ತರ್ಕಕ್ಕೆ ಸಂಚಾರಿ ಪೊಲೀಸರು ಬಂದಿದ್ದಾರೆ.
ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

