ಸಾರಿಕಾ ಸಂಶಯಾಸ್ಪದ ಸಾವು; ಹೆಚ್ಚಿನ ತನಿಖೆಗೆ ಮನವಿ
ಸುಬ್ರಹ್ಮಣ್ಯ: ನಿಗೂಢವಾಗಿ ನಾಪತ್ತೆಯಾಗಿ ನಂತರ ಹೊಳೆಯಲ್ಲಿ ಕಂಡು ಬಂದ ಚಾರ್ಮಾತದ ಸಾರಿಕಾ(2) ಎಂಬ ಹೆಣ್ಣು ಮಗುವಿನ ಸಾವಿನ ಪ್ರಕರಣ ಮತ್ತು ನಿಧಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವನ್ನು ವಾಮಾಚಾರಕ್ಕೆ ಉಪಯೋಗಿಸಿ ಬಲಿ ಕೊಟ್ಟ ಸಂಶಯವಿದ್ದು ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಿ ಕೊಡುವಂತೆ ಮಗುವಿನ ತಾಯಿ ಭವಾನಿ ಕೋಡ್ತುಗುಳಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಇತ್ತೀಚೆಗೆ ಮನವಿ ಮಾಡಿದ್ದಾರೆ.
ಆ.11ರಂದು ಮನೆಯ ಸಮೀಪದ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ಸಾರಿಕಾ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು. ಮಗು ಕಾಣೆಯಾದ ವಿಚಾರ ತಿಳಿದ ತಕ್ಷಣ ಸಂಬಂಧಿಕರು ಮತ್ತು ಊರವರು ಆಸುಪಾಸು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.
ಈ ಬಗ್ಗೆ ಸ್ಥಳೀಯ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿತ್ತು. 13 ದಿನಗಳ ಬಳಿಕ ಮಗುವಿನ ಶವ ಜೇನುಕೋಡಿ ಎಂಬಲ್ಲಿ ಹೊಳೆಯಲ್ಲಿ ಪತ್ತೆಯಾಯಿತು. ಮಗುವಿನ ಶವದಲ್ಲಿ ತಲೆ ಹಾಗೂ ಕೈ ಇರಲಿಲ್ಲ. ತಲೆ ಮತ್ತು ಕೈ ಕತ್ತರಿಸಿದ ರೀತಿಯಲ್ಲಿ ಕಂಡು ಬಂದಿತ್ತು. ಮಾತ್ರವಲ್ಲದೆ, ಕೆಲವೇ ದಿನಗಳ ಹಿಂದೆ ಸತ್ತಿರಬಹುದೆಂಬ ಗುಮಾನಿ ಕಂಡು ಬಂದಿತ್ತು.
ಆದರೆ ಪೊಲೀಸರು, ಶವ ಸಿಕ್ಕಿದ ತಕ್ಷಣ ನೀರಿನ ಸೆಳೆತಕ್ಕೆ ಸಿಕ್ಕಿ ಮಗು ಸಾವಿಗೀಡಾಗಿದೆ ಎಂದು ಕೇಸು ದಾಖಲಿಸಿ ಪ್ರಕರಣ ಮುಚ್ಚಿದ್ದಾರೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಮಗುವನ್ನು ನಿಧಿಯ ವಾಮಾಚರಕ್ಕಾಗಿ ಉಪಯೋಗಿಸಿ ಬಲಿ ಕೊಟ್ಟು ಕೊಲೆ ಮಾಡಲಾಗಿದೆ ಎಂಬ ಸಂಶಯ ಕಂಡು ಬರುತ್ತಿದೆ. ಈಗಾಗಲೇ ಕೆಲವು ವ್ಯಕ್ತಿಗಳನ್ನು ನಿಧಿ ವಿಚಾರವಾಗಿ ಬಂಧಿಸಲಾದಿದೆ. ಆದರೆ ಇನ್ನಷ್ಟು ಮಂದಿ ಇದರಲ್ಲಿ ಬಾಗಿಯಾಗಿರುವ ಬಗ್ಗೆ ಶಂಕೆ ಇದ್ದು ಅವರನ್ನು ತನಿಖೆಗೆ ಒಳಪಡಿಸಿದಲ್ಲಿ ಮಾತ್ರ ಸತ್ಯಾಂಶ ಹೊರ ಬೀಳುವುದು. ಸತ್ಯಾಸತ್ಯತೆ ಬಯಲಿಗೆಳೆದು ಹೆತ್ತವರಾದ ನಮಗೆ ನ್ಯಾಯ ದೊರಕಿಸಬೇಕೆಂದು ಅವರು ಮನವಿಯಲ್ಲಿ ವಿನಂತಿಸಿದ್ದಾರೆ.
10ಕ್ಕೂ ಹೆಚ್ಚು ಮಂದಿಗೆ 'ನೋವಿನ ದೀಪಾವಳಿ'
ಉಡುಪಿ: ಜಿಲ್ಲೆಯ ಸುಮಾರು 10 ಮಂದಿಗೆ ದೀಪಾವಳಿ ನೋವಿನ ಹಬ್ಬವಾಗಿ ಪರಿಣಮಿಸಿದೆ. ಇವರೆಲ್ಲಾ ಪಟಾಕಿ ಸಿಡಿಸಿ ಕಣ್ಣು, ಮುಖಕ್ಕೆ ಗಾಯ ಮಾಡಿಕೊಂಡಿದ್ದಾರೆ. ನಗರದ ಪ್ರಸಾದ್ ನೇತ್ರಾಲಯಕ್ಕೆ ಭಾನುವಾರ ರಾತ್ರಿ 4 ಮಂದಿ ಮತ್ತು ಸೋಮವಾರ ಬೆಳಗ್ಗೆ ಒಬ್ಬರು ಕಣ್ಣಿಗೆ ಗಾಯ ಮಾಡಿಕೊಂಡು ದಾಖಲಾಗಿದ್ದಾರೆ. ಅವರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಕಣ್ಣಿನೊಳಗೆ ರಕ್ತ ಹೆಪ್ಪುಗಟ್ಟಿ, ಮರಳಿ ಪೂರ್ತಿ ದೃಷ್ಟಿ ಪಡೆಯುವ ಸಾಧ್ಯತೆಗಳಿಲ್ಲ ಎಂದು ಡಾ. ಕೃಷ್ಣಪ್ರಸಾದ್ ತಿಳಿಸಿದ್ದಾರೆ. ಉಳಿದಂತೆ ಇತರ ಖಾಸಗಿ ಆಸ್ಪತ್ರೆಗಳಲ್ಲಿ 5 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ನಿಖರವಾದ ಸಂಖ್ಯೆ ಲಭ್ಯವಾಗದಿದ್ದರೂ ಅನೇಕ ಮಂದಿ ಪಟಾಕಿಯಿಂದಾಗಿ ಸಣ್ಣಪುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆದಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಾಯರಿ ತಿಳಿಸಿದ್ದಾರೆ.
ನಾಪತ್ತೆಯಾದ ವಿದ್ಯಾರ್ಥಿನಿ ಪತ್ತೆ
ಸುಳ್ಯ: ಸುಳ್ಯದ ತಾಂತ್ರಿಕ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ, ಜಯನಗರದ ಯುವತಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ಅ. 27ರಂದು ಆಕೆಯ ಮನೆಯಛವರು ಪೊಲೀಸರಲ್ಲಿ ದೂರು ನೀಡಿದ್ದು, ಇದೀಗ ಪೊಲೀಸರು ಆ ಯುವತಿಯನ್ನು ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ. ಮನೆಯಲ್ಲಿ ಮನಸ್ತಾಪವಾಗಿ ಆಕೆ ಮನೆ ಬಿಟ್ಟು ಸುಂಟಿಕೊಪ್ಪಕ್ಕೆ ಹೋಗಿದ್ದಳೆನ್ನಲಾಗಿದ್ದು, ಪೊಲೀಸರು ಆ ಯುವತಿಯನ್ನು ಪತ್ತೆ ಮಾಡಿ ಠಾಣೆಗೆ ಕರೆತಂದಿದ್ದು ಪೋಷಕರಿಗೆ ಒಪ್ಪಿಸಿದ್ದಾರೆ.
ಯುವಕ ಆತ್ಮಹತ್ಯೆ
ಸುಳ್ಯ: ಎಡಮಂಗಲ ಗ್ರಾಮದ ರಚ್ಚೋಡಿ ಮೋನಪ್ಪ ಗೌಡರ ಪುತ್ರ ರಾಜೇಶ್ (22) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ಮಧ್ಯಾಹ್ನ ಮನೆಯಿಂದ ದನ ಕರೆತರುವುದಾಗಿ ಹೇಳಿ ಹೋದಾತ ಮನೆಯ ಸಮೀಪವಿರುವ ಅರಣ್ಯ ಪ್ರದೇಶದಲ್ಲಿನ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಿಂದ ಹೋದಾತ ವಾಪಾಸ್ ಬಾರದಿರುವುದನ್ನು ಗಮನಿಸಿದ ಮನೆಯವರು ಹುಡುಕಿಕೊಂಡು ಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಐಸ್ ಕ್ರೀಂ ತಿಂದು ಮಕ್ಕಳು ಅಸ್ವಸ್ಥ
ಸುಳ್ಯ: ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಮತ್ತು ಕಲ್ಲುಗುಂಡಿ ಬಳಿ ವ್ಯಾನ್ವೊಂದರಿಂದ ಐಸ್ಕ್ರೀಂ ಖರೀದಿಸಿ ತಿಂದ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಘಟನೆ ಇತ್ತೀಚೆಗೆ ನಡೆದಿದೆ. ದಬ್ಬಡ್ಕದಲ್ಲಿ ನಡೆದ ಕ್ರೀಡಾಕೂಟವನ್ನು ವೀಕ್ಷಿಸಲು ಬಂದು ಐಸ್ಕ್ರೀಂ ತಿಂದ ಮಕ್ಕಳಲ್ಲಿ ಸುಮಾರು 20 ಮಂದಿ ಮಕ್ಕಳು ಅಸ್ವಸ್ಥಗೊಂಡಿದ್ದರು. ಆ ಮಕ್ಕಳನ್ನು ಕಲ್ಲುಗುಂಡಿಯ ಡಾ. ಶ್ಯಾಂ ಭಟ್ರಲ್ಲಿಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿಸಲಾಯಿತು. ಅವರು ಗುಣಮುಖರಾಗಿದ್ದಾರೆ. ಅದೇ ರೀತಿ ಸಂಪಾಜೆ ಯಕ್ಷಗಾನದ ಆವರಣದಲ್ಲಿ ನಿಂತಿದ್ದ ಅದೇ ಕಂಪನಿಯ ವ್ಯಾನ್ನಿಂದ ಐಸ್ ಕ್ರೀಂ ತಿಂದ ಕೆಲವು ಮಕ್ಕಳು ಕೂಡಾ ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.
ವಿದ್ಯುತ್ ಸ್ಪರ್ಶ: ಮಹಿಳೆ ಸಾವು
ಸುಳ್ಯ: ಕಟ್ಟಿಗೆ ತರಲು ಹೋದ ಮಹಿಳೆಗೆ ವಿದ್ಯುತ್ ಸ್ಪರ್ಶಿಸಿ ಮೃತ ಪಟ್ಟ ಘಟನೆ ಪಂಬೆತ್ತಾಡಿಯಲ್ಲಿ ಭಾನುವಾರ ನಡೆದಿದೆ. ಪಂಬೆತ್ತಾಡಿ ಗ್ರಾಮದ ಮಡಪ್ಪಾಡಿ ದಿ. ತಮ್ಮಯ್ಯ ಗೌಡರ ಪತ್ನಿ ಮೀರಮ್ಮ (75) ಮೃತರು. ವೀರಮ್ಮ ಮನೆಯಿಂದ ಭಾನುವಾರ ಹೊರಗೆ ಹೋದವರು ನಾಪತ್ತೆಯಾಗಿದ್ದರು. ಮನೆಯವರು ರಾತ್ರಿ ಇಡೀ ಹುಡುಕಾಟ ನಡೆಸಿದರು. ಮರುದಿನ ಮುಂಜಾನೆ ಮನೆ ಸಮೀಪ ಮರವೊಂದರ ಬಳಿ ಶವ ಪತ್ತೆಯಾಯಿತು. ಅವರು ಮರದಲ್ಲಿ ಕಟ್ಟಿಗೆಯನ್ನು ಎಳೆಯುವಾಗ ಸಮೀಪದಲ್ಲಿ ಹಾದು ಹೋದ ವಿದ್ಯುತ್ ತಂತಿ ಮೇಲೆ ಕಟ್ಟಿಗೆ ಬಿದ್ದುದ್ದರಿಂದ, ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೇಹದಲ್ಲಿ ಬೆಂದ ಗಾಯವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯುವಕರ ನಡುವೆ ಹೊಡೆದಾಟ
ಸುಳ್ಯ: ಐವರ್ನಾಡು ಗ್ರಾಮದ ಪರ್ಲಕಜೆ ತಿರುವಿನಲ್ಲಿ ಯುವಕರ ತಂಡದೊಳಗೆ ಹೊಡೆದಾಟವಾದ ಹಾಗೂ ಇತ್ತಂಡದವರು ಆಸ್ಪತ್ರೆಗ ದಾಖಲಾಗಿ ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ. ನಿಡುಬೆಯ ಕೆಲ ಯುವಕರು ಪರ್ಲಕಜೆ ತಿರುವಿನಲ್ಲಿ ನಮೋ ಬ್ರಿಗೇಡ್ ಬ್ಯಾನರ್ ಕಟ್ಟಿ, ಪಟಾಕಿ ಸಿಡಿಸಿ ಸಂಭ್ರಮ ಪಡುತ್ತಿದ್ದರು. ಆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಕೆಲ ಯುವಕರ ಮೇಲೆ ಸಿಡಿಸಿದ ಪಟಾಕಿ ಬಿತ್ತೆಂದೂ, ಇದನ್ನು ಪ್ರಶ್ನಿಸಿದ ಯುವಕನಿಗೆ ತಂಡದವರು ಹೊಡೆಯಲು ಬಂದರು ಎನ್ನಲಾಗಿದೆ. ಈ ವೇಳೆ ಎರಡೂ ತಂಡದೊಳಗೆ ಹೈ ಕೈ ನಡೆಯಿತು ಎನ್ನಲಾಗಿದೆ. ಈ ಕುರಿತು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಇತ್ತಂಡಗಳ ದೂರನ್ನು ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜೀಪ್-ಟಿಪ್ಪರ್ ಡಿಕ್ಕಿ: ಮೂವರಿಗೆ ಗಾಯ
ಉಪ್ಪಿನಂಗಡಿ: ಕಡಬ ಸಮೀಪದ ಬಲ್ಯ ತಿರುವಿನಲ್ಲಿ ಜೀಪ್ ಮತ್ತು ಟಿಪ್ಪರ್ ಲಾರಿ ಡಿಕ್ಕಿಯಾಗಿ ಜೀಪ್ ಚರಂಡಿಗೆ ಬಿದ್ದು, ಅದರಲ್ಲಿದ್ದ ಮೂವರು ಗಾಯಗೊಂಡ ಘಟನೆ ನಡೆದಿದೆ. ಜೀಪ್ ಚಾಲಕ ಟಿ.ಟಿ. ವರ್ಗಿಸ್, ಪ್ರಯಾಣಿಕರಾದ ವಿಶ್ವನಾಥ ಹಾಗೂ ಆನಂದ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಮಗುಚಿ ನಾಲ್ವರಿಗೆ ಗಾಯ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕಡಬದ ದೇರಾಜೆ ಎಂಬಲ್ಲಿ ಕಾರು ಮಗುಚಿ ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ಮಂಜೇಶ್ವರದ ಉಪ್ಪಳ ನಿವಾಸಿ ಕುಟುಂಬವೊಂದರ ಸದಸ್ಯರು ಕಾರ್ಯನಿಮಿತ್ತ ಕಡಬ ಪರಿಸರದಲ್ಲಿ ಸಂಚರಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆಯಿಷಾ ನಿಶಾ (17), ಖತಿಜತ್ ಫರ್ಝಾನಾ (16), ಮರಿಯಮತ್ ಶಬೀರಾ (19) ಅಬ್ದುಲ್ ಖಾದರ್ (23) ಎಂದು ತಿಳಿಯಲಾಗಿದೆ. ಗಾಯಾಳುಗಳು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಮುಖಾಮುಖಿ: ಸವಾರಗೆ ಗಾಯ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಗೋಳಿತೊಟ್ಟು ಎಂಬಲ್ಲಿ ದ್ವಿಚಕ್ರ ವಾಹನ ಪರಸ್ಪರ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡಿದ್ದಾರೆ. ಗಾಯಾಳು ಇಸುಬು ಮಠ ಕೊಪ್ಪಳ ನಿವಾಸಿ. ಅವರು ನೆಲ್ಯಾಡಿಯಿಂದ ಉಪ್ಪಿನಂಗಡಿಯತ್ತ ಸಂಚರಿಸುತ್ತಿದ್ದಾಗ ಎದುರುಗಡೆಯಿಂದ ಬಂದ ಬೈಕ್ ಪರಸ್ಪರ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲುಂಗಿಯಿಂದ ನೇಣು ಬಿಗಿದು ಆತ್ಮಹತ್ಯೆ
ಕಾರ್ಕಳ: ಇಲ್ಲಿನ ಎರ್ಲಪಾಡಿ ಗ್ರಾಮದ ಬಿಲ್ಲವ ಮಂದಿರ ಬಳಿ ನಿವಾಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಉಮಾನಾಥ ಶೆಟ್ಟಿಗಾರ್ (47) ಮೃತರು. ಅವರು ಅನೇಕ ವರ್ಷಗಳಿಂದ ವಿಪರೀತ ಹೊಟ್ಟೆನೋವು, ರಕ್ತಹೀನೆಯಿಂದಾಗಿ ಮಾನಸಿಕ ಖಿನ್ನತೆಯಿಂದ ನರಳುತ್ತಿದ್ದರು. ಇದೇ ಕಾರಣಕ್ಕೆ ಮನೆಯ ದೇವರ ಕೋಣೆಯಲ್ಲಿ ಕಬ್ಬಿಣದ ಜಂತಿಗೆ ಲುಂಗಿಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಭವಾನಿ ಶೆಟ್ಟಿಗಾರ್ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಬಿಗಿದು ಮಹಿಳೆ ಆತ್ಮಹತ್ಯೆ
ಬ್ರಹ್ಮಾವರ: ಇಲ್ಲಿನ ಹೊಸೂರು ಗ್ರಾಮದ ಕರ್ಜೆ ಎಂಬಲ್ಲಿನ ದರ್ಕಾಸು ಮನೆಯ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಗೀತಾ ಬಾಯಿ (58) ಮೃತರು. ಅವರು ತುರ್ತಿಗಾಗಿ ಕೈಸಾಲ ಮಾಡಿದ್ದು, ಅದನ್ನು ಹಿಂತಿರುಗಿಸಲಾಗದೆ ಚಿಂತಿಸುತ್ತಿದ್ದರು. ಜೊತೆಗೆ ಆರೋಗ್ಯ ಕೂಡ ಚೆನ್ನಾಗಿರಲಿಲ್ಲ. ಇದೆಲ್ಲದ್ದರಿಂದ ನೊಂದು ಸೋಮವಾರ ಮದ್ಯಾಹ್ನ 1 ಗಂಟೆ ಸುಮಾರಿಗೆ ಮನೆಯ ಸಮೀಪದ ಹಾಡಿಯಲ್ಲಿ ಮರಕ್ಕೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

