ಅಕ್ರಮ ದಾಸ್ತಾನಿರಿಸಿದ್ದ ಸ್ಫೋಟಕ ವಶ; ಒಬ್ಬ ಸೆರೆ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಇಳಂತಿಲ ಗ್ರಾಮದ ಕಡವಿನ ಬಾಗಿಲು ಎಂಬಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಸ್ಫೋಟಕವನ್ನು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಪತ್ತೆ ಹಚ್ಚಿ ಒಬ್ಬನನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಭಾನುವಾರ ದಾಳಿ ನಡೆಸಿದ ಇನ್ಸ್ಪೆಕ್ಟರ್ ಬಶೀರ್ ಅಹಮ್ಮದ್ ನೇತೃತ್ವದ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಕಡವಿನ ಬಾಗಿಲು ನಿವಾಸಿ ಇಬ್ರಾಹಿಂ ಎಂಬಾತನನ್ನು ಬಂಧಿಸಿ ಆತನಿಂದ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ಫೋಟಕಗಳನ್ನು ಯಾವ ಉದ್ದೇಶಕ್ಕಾಗಿ ದಾಸ್ತಾನು ಮಾಡಲಾಗಿತ್ತೆಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆಟೋ ಡಿಕ್ಕಿ; ಬಾಲಕ ಗಂಭೀರ
ಉಪ್ಪಿನಂಗಡಿ: ಇಲ್ಲಿನ ರಾ.ಹೆ. 75ರಲ್ಲಿ ಹೆದ್ದಾರಿ ದಾಟುತ್ತಿದ್ದ ಬಾಲಕನೊಬ್ಬನಿಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಹಮೀದ್ (12) ಎಂಬಾತ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಸಂಭವಿಸಿದೆ. ಗಾಯಾಳು ಇಳಮ್ತಿಲ ಗ್ರಾಮದ ಅಂಬೊಟ್ಟು ನಿವಾಸಿ ಎನ್ನಲಾಗಿದ್ದು, ಅಶ್ರಫ್ ಎಂಬವರ ಮಗನಾಗಿದ್ದಾನೆ. ಗಾಯಗೊಂಡ ಬಾಲಕನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವ್ಯಕ್ತಿ ಆತ್ಮಹತ್ಯೆ
ಪಡುಬಿದ್ರಿ: ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ನಡ್ಸಾಲು ಗ್ರಾಮದಲ್ಲಿ ಶನಿವಾರ ನಡೆದಿದೆ. ಬೋಜ ಕರ್ಕೇರಾ (60)ಮೃತರು. ಇವರು ಶರಾಬು ಕುಡಿಯುವ ಚಟ ಹೊಂದಿದ್ದು, ನಿರುದ್ಯೋಗಿಯಾಗಿದ್ದರು. ಇದೇ ಕಾರಣದಿಂದ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬುದಾಗಿ ಕರುಣಾಕರ್ ಪೂಜಾರಿ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಗಾರಿ ಅಡ್ಡೆಗೆ ದಾಳಿ; ಮೂವರ ಸೆರೆ
ಹಿರಿಯಡ್ಕ: ಪೆರ್ಡೂರು ಗ್ರಾಮದ ಬೊಬ್ಬರ್ಯ ದೈವಸ್ಥಾನದ ಬಳಿ ಜುಗಾರಿ ಆಟ ನಡೆಸುತ್ತಿದ್ದ ಮೂರು ಮಂದಿಯನ್ನು ಬಂಧಿಸಿರುವ ಘಟನೆ ಭಾನುವಾರ ನಡೆದಿದೆ. ಆಟಕ್ಕೆ ಬಳಸಿದ್ದ 3010, ಇನ್ನಿತರ ಪರಿಕರ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರಿಂದ ಹಲ್ಲೆ ಆರೋಪ; ಯುವಕ ಆಸ್ಪತ್ರಗೆ ದಾಖಲು
ಪುತ್ತೂರು: ನಗರದ ಹೊರವಲಯದ ಕೇಪುಳು ನಿವಾಸಿ ಕೊರಗಪ್ಪ ಮುಗೇರ ಎಂಬವರ ಪುತ್ರ ಹೇಮಚಂದ್ರ(26)ಎಂಬಾತ ತನ್ನ ಮೇಲೆ ಪುತ್ತೂರು ನಗರ ಠಾಣೆ ಪೊಲೀಸರು ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಘಟನೆ ನಡೆದಿದೆ.
ಕೇಪುಳು ದಲಿತ ಕಾಲೋನಿ ನಿವಾಸಿಯಾಗಿರುವ ಹೇಮಚಂದ್ರನ ಮೇಲೆ ಶನಿವಾರ ರಾತ್ರಿ ಜೀಪ್ನಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಹಲ್ಲೆ ನಡೆಸಿರುವುದಾಗಿ ಹೇಮಚಂದ್ರ ದೂರಿನಲ್ಲಿ ಆರೋಪಿಸಿದ್ದಾನೆ. ತಾನು ಕೂಲಿ ಕಾರ್ಮಿಕನಾಗಿದ್ದು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದೇನೆ. ಶನಿವಾರ ರಾತ್ರಿ ತಾನು ಹಾಗೂ ಪಕ್ಕದ ಮನೆಯವರಾದ ಯೋಗೀಶ ಮತ್ತು ಜನಾರ್ದನ ರಸ್ತೆ ಬದಿಯಲ್ಲಿದ್ದ ಮೋರಿಯ ಮೇಲೆ ಕುಳಿತು ಮಾತನಾಡುತ್ತಿದ್ದ ವೇಳೆಯಲ್ಲಿ ಅಲ್ಲಿಗೆ ಜೀಪ್ನಲ್ಲಿ ಆಗಮಿಸಿದ ಸುಮಾರು 4 ಮಂದಿ ಪೊಲೀಸರು ತಮ್ಮನ್ನು ಮನೆಗೆ ಹೋಗಿ ಎಂದು ಗದರಿಸಿದರು. ಬಳಿಕ ಪೊಲೀಸರಲ್ಲೊಬ್ಬರು ಕಾಲಿಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಪೈಂಟಿಂಗ್ ಕೆಲಸ ಮಾಡುತ್ತಿದ್ದಾಗ ತಾನು ಜಾರಿ ಬಿದ್ದು ಕಾಲಿಗೆ ಗಾಯವಾಗಿತ್ತು. ಇದೀಗ ಪೊಲೀಸರು ಇದೇ ಜಾಗಕ್ಕೆ ದೊಣ್ಣೆಯಿಂದ ಹೊಡೆದಿದ್ದಾರೆ. ಇದರಿಂದಾಗಿ ತನಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿರುವ ಹೇಮಚಂದ್ರ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು
ಮಣಿಪಾಲ: ಇಲ್ಲಿನ ಶಾಂಭವಿ ಸವರಿನ್ ಕಟ್ಟಡ ಕಾಮಗಾರಿ ಕೆಲಸ ಮಾಡಿ ಕಟ್ಟಡದಿಂದ ಕೆಳಗೆ ಇಳಿಯುತ್ತಿದ್ದ ಪುನಂದ ಜಿನ(26) ಎಂಬವರು ಆಕಸ್ಮಿಕವಾಗಿ ಕಾಲು ಜಾರಿ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ವರದಿಯಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

