ಕೋಟಿ ಚೆನ್ನಯ ಜನ್ಮಸ್ಥಳ ಅಭಿವೃದ್ಧಿಗೆ ಕಾಲಮಿತಿ ಕ್ರಿಯಾ ಯೋಜನೆ: ಸಚಿವ ರೈ
ಮಂಗಳೂರು: ತುಳುನಾಡಿನ ಚಾರಿತ್ರಿಕ ಪುರುಷರಾದ ಕೋಟಿ ಚೆನ್ನಯ ಸಹೋದರರ ನೆಲೆವೀಡಾದ ಪುತ್ತೂರಿನ ಪಡುಮಲೆ, ಸುಳ್ಯದ ಎಣ್ಮೂರು ಹಾಗೂ ಪಂಜದಲ್ಲಿನ ಇತಿಹಾಸ ಸ್ಥಳಗಳ ಅಭಿವೃದ್ಧಿಗೆ ಕಾಲಮಿತಿಯಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲು ನಿರ್ಧರಿಸಲಾಗಿದೆ.
ನಗರದ ಕಂಕನಾಡಿ ಗರೋಡಿಯಲ್ಲಿ ಭಾನುವಾರ ಜರುಗಿದ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
23 ಕೋಟಿ ಬೇಕು: ರಾಜ್ಯ ಸರ್ಕಾರ ಈ ಬಾರಿ ಬಜೆಟ್ನಲ್ಲಿ ಕೋಟಿ ಚೆನ್ನಯ ಜನ್ಮಸ್ಥಾನದ ಪಳೆಯುಳಿಕೆ ಸಂರಕ್ಷಣೆಗೆ ರು. 5 ಕೋಟಿ ನೀಡಿದ್ದು, ಸಮಗ್ರ ಕ್ಷೇತ್ರ ಅಭಿವೃದ್ಧಿಪಡಿಸಲು ರು. 23 ಕೋಟಿ ಬೇಕಾಗಿದೆ. ಹಾಗಾಗಿ ಇದರ ಬಗ್ಗೆ ರೂಪುರೇಷೆ ಸಿದ್ಧಪಡಿಸುವಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕಾರ್ಕಳ ಥೀಮ್ ಪಾರ್ಕ್ ಅಭಿವೃದ್ಧಿಯಾಗುತ್ತಿದ್ದು, ಕೊಡಗು, ಕಾಸರಗೋಡು, ಮುಂಬೈ ಭಕ್ತರ ಆರಾಧನಾ ಕೇಂದ್ರವಾದ ಕರಾವಳಿಯ 230ಕ್ಕೂ ಅಧಿಕ ಗರೋಡಿಗಳ ಪುನರುತ್ಥಾನ ಆಗಬೇಕು. ಇವೆಲ್ಲದರ ಕುರಿತು ಸಮಗ್ರ ಕ್ರಿಯಾ ಯೋಜನೆಯ ಅಗತ್ಯವಿದೆ ಎಂದರು.
ಸಚಿವ ರಮಾನಾಥ ರೈ ಮಾತನಾಡಿ, ಈ ಕಾರಣಿಕ ಪುರುಷರ ವೃತ್ತಾಂತಕ್ಕೆ ಮಹತ್ವ ನೀಡಲು ಸರ್ಕಾರ ನಿರ್ಧರಿಸಿದೆ. ಇದರ ಅಭಿವೃದ್ಧಿಗೆ ಬೇಕಾದ ಅಗತ್ಯ ಅನುದಾನ, ಅವರ ಪ್ರದೇಶದ ಅಭಿವೃದ್ಧಿಗೆ ಯೋಜನೆ ಹಾಕಿಕೊಳ್ಳಬೇಕು ಎಂದರು.
ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಈಗ ಸರ್ಕಾರ ಬಿಡುಗಡೆ ಮಾಡಿರುವ ಮೊತ್ತ ಕೋಟಿ ಚೆನ್ನಯರ ಪಳೆಯುಳಿಕೆ ಸಂರಕ್ಷಣೆಗೆ. ಪಡುಮಲೆ ರಸ್ತೆ ಅಭಿವೃದ್ಧಿಯಾಗಬೇಕು, ಅಲ್ಲಿರುವ ಸ್ಮಾರಕಗಳ ರಕ್ಷಣೆಯಾಗಬೇಕು. ಪಂಜ, ಎಣ್ಮೂರುಗಳಲ್ಲಿ ಐತಿಹಾಸಿಕ ಅಧ್ಯಯನ ನಡೆಯಬೇಕು ಎಂದರು.
ಟ್ರಸ್ಟ್ ಹಲವು ಯೋಜನೆ: ಕೋಟಿ ಚೆನ್ನಯ ಸಂವರ್ಧನಾ ಟ್ರಸ್ಟ್ ಅಧ್ಯಕ್ಷ ರಘುನಾಥ ರೈ ಮಾತನಾಡಿ, ಕೋಟಿ ಚೆನ್ನಯರು ಜನಿಸಿದ ಪಡುಮಲೆ, ಮತ್ತು ಓಡಾಡಿದ ಎಣ್ಮೂರು, ಪಂಜದಲ್ಲಿ ಸಮಗ್ರ ಅಭಿವೃದ್ಧಿಯ ಕಲ್ಪನೆ ಹಾಕಿಕೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿ ಪ್ರಕಾಶ್, ಅಪರ ಜಿಲ್ಲಾಧಿಕಾರಿ ದಯಾನಂದ್, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಪ್ರಭು, ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಜಿತೇಂದ್ರನಾಥ, ಪುತ್ತೂರು ತಹಸೀಲ್ದಾರ್ ಕುಳ್ಳೇ ಗೌಡ, ಮಾಜಿ ಶಾಸಕ ರುಕ್ಮಯ ಪೂಜಾರಿ, ಕನ್ನಡ ಸಂಸ್ಕೃತಿ ಇಲಾಖೆ ಪ್ರಭಾರ ಅಧಿಕಾರಿ ಚಂದ್ರಹಾಸ ರೈ, ಕಂಕನಾಡಿ ಗರೋಡಿ ಸಮಿತಿ ಅಧ್ಯಕ್ಷ ನಾರಾಯಣ ರೈ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

