ದಕ್ಷಿಣ ಕನ್ನಡ

ಶಿಕ್ಷಣ ವಂಚಿತ ಮಕ್ಕಳಿಗೆ ಗೃಹಬಂಧನ- ಕ್ಷೀಣಿಸುತ್ತಿರುವ ಆರೋಗ್ಯ: ಸದಾಶಿವ

Published On :

ಸುಳ್ಯ: ತಾಯಿ - ತಂದೆಯ ವಿರಸದಿಂದ ಶಿಕ್ಷಣದಿಂದ ವಂಚನೆಗೊಳಗಾಗಿರುವ ಮಕ್ಕಳನ್ನು ತಾಯಿ ಗೃಹಬಂಧನ ದಲ್ಲಿರಿಸಿದ್ದು ಮಕ್ಕಳ ಆರೋಗ್ಯ ಕ್ಷೀಣಿಸುತ್ತಿದೆ. ಇಲಾಖೆಯವರು ಮಕ್ಕಳನ್ನು ಬಂಧ ಮುಕ್ತಗೊಳಿಸಲು ಸೂಕ್ತ ಕ್ರಮಕೈಗೊಳ್ಳದಿದ್ದರೆ ಬೊಳ್ಳಾಜೆ ಶಾಲಾ ಆಡಳಿತ ಮಂಡಳಿ ವತಿಯಿಂದ ನೇರ ಕ್ರಮ ಜರುಗಿಸಲಾಗುತ್ತದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಬಿ. ಸದಾಶಿವ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆಯ ಬೊಮ್ಮಾರು ವಾಸು ನಾಯ್ಕ - ವಂಸತಿ ದಂಪತಿ ನಡುವೆ ವಿರಸ ಏರ್ಪಟ್ಟು ಗಂಡ ಮೂರು ಮಕ್ಕಳೊಂದಿಗೆ ಮನೆಬಿಟ್ಟು ಹೋದರು. ಇತ್ತ 4 ಮಕ್ಕಳನ್ನು ತಾಯಿ ತನ್ನ ಬಳಿಯಲ್ಲಿಟ್ಟುಕೊಂಡರು. ಆದರೆ, ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಈ ಪ್ರಕರಣ ಕಳೆದ ವರ್ಷ ಬೆಳಕಿಗೆ ಬಂದು ಇಲಾಖೆಯವರು ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪ್ರಯತ್ನ ಕೈಗೊಂಡರಾದರೂ ಅದು ಫಲಪ್ರದವಾಗಿರಲಿಲ್ಲ. ಈ ಶೈಕ್ಷಣಿಕ ವರ್ಷದಿಂದ ಇಲಾಖೆ ಮತ್ತೆ ತಾಯಿಯೊಂದಿಗೆ ಮಾತುಕತೆ ನಡೆಸಿದಾಗ ಮಕ್ಕಳನ್ನು ಕಲಿಸುತ್ತೇನೆ ಎಂದು ಹೇಳಿದರಾದರೂ ಮಕ್ಕಳು ಶಾಲೆಗೆ ಬರುತ್ತಿರಲಿಲ್ಲ.
ನ. 1ರಂದು ಇಲಾಖೆಯ ಕ್ಷಸ್ಟರ್ ಅಧಿಕಾರಿ ರೂಪವಾಣಿ, ಶಾಲಾಡಳಿತ ಮಂಡಳಿ ಅಧ್ಯಕ್ಷ ಎಂ.ಬಿ. ಸದಾಶಿವ, ಪಂಚಾಯಿತಿ ಅಧ್ಯಕ್ಷೆ ರಾಧಾ, ಮುಖ್ಯೋಪಾಧ್ಯಾಯಿನಿ ಶ್ಯಾಮಲಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಯಾನಂದ ಮಾಪಲ ಕಜೆ, ಮೋಹನ ಕಲ್ಲುಗದ್ದೆ, ಸದಸ್ಯರಾದ ಆಶಾಲತಾ, ಹೇಮಾ ಹೈದಂಗೂರು, ಶಾಲಾ ಮಕ್ಕಳ ಕ್ಲಬ್ ಮೀನಾ ತಂಡದ ಸದಸ್ಯರು ಜಾಥಾ ನಡೆಸಿ ಮನೆಗೆ ಭೇಟಿ ನೀಡಿದಾಗ ಶಿಕ್ಷಣ ವಂಚಿತ ಮಕ್ಕಳನ್ನು ತಾಯಿ ಗೃಹ ಬಂಧನದಲ್ಲಿರಿಸಿರುವುದು ಕಂಡು ಬಂತು. ಮಕ್ಕಳನ್ನು ಕೋಣೆಯೊಳಗೆ  ಹಾಕಿ ಎದುರು ಬೀಗ ಹಾಕಿ ಹಿಂದೆ ಚಿಲಕ ಹಾಕಿ ತಾಯಿ ಹೋಗಿದ್ದರು. ಮನೆಯೊಳಗೆ ಮಕ್ಕಳು ಅಳುತ್ತಿರುವುದು ಕಿಟಕಿಯ ಮೂಲಕ ಕಂಡುಬಂತು. ಬಳಿಕ ಚಿಲಕ ತೆಗೆದು ಮನೆಯೊಳಗಿದ್ದ ತೇಜಸ್ವಿನಿ (12), ಮಮತಾ (9), ಶೋಬಿತಾ (7)ರನ್ನು ಹೊರಗೆ ಕರೆಯಲಾಯಿತು. ಮಕ್ಕಳ ಆರೋಗ್ಯ ಕ್ಷೀಣಿಸಿದ್ದು ಕಂಡುಬಂತು.
ಈ ಪರಿಸ್ಥಿತಿಯನ್ನು ಕಂಡ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದು ನ. 13ರೊಳಗೆ ಇಲಾಖೆಯವರು ಕ್ರಮಕೈಗೊಳ್ಳದಿದ್ದರೆ, ನ. 14ರಂದು ಶಾಲಾ ಆಡಳಿತ ಮಂಡಳಿಯೇ ನೇರ ಕಾರ್ಯಾಚರಣೆ ಮೂಲಕ ಮಕ್ಕಳನ್ನು ಬಂಧನದಿಂದ ಹೊರ ತರಲು ನಿರ್ಧರಿಸಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.