ದಕ್ಷಿಣ ಕನ್ನಡ

ಕುತ್ಲೂರು: ಕಾರು, ಬೈಕ್‌ಗೆ ಬೆಂಕಿ ಹಚ್ಚಿದ ಪ್ರಕರಣ- ಸಮಗ್ರ ತನಿಖೆಗೆ ಒತ್ತಾಯ

Published On :

ಬೆಳ್ತಂಗಡಿ: ನಾರಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುತ್ಲೂರು ರಾಮಚಂದ್ರ ಭಟ್ ಅವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರು ಮತ್ತು ಬೈಕ್‌ಗೆ ಬೆಂಕಿ ಹಚ್ಚಿದ ಪ್ರಕರಣವು ಜನತೆಯಲ್ಲಿ ಸಂಶಯವನ್ನುಂಟು ಮಾಡಿದ್ದು, ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆಯನ್ನು ಮಾಡಬೇಕು ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಸಮಿತಿ ಆಗ್ರಹಿಸಿದೆ.
ಗುರುವಾಯನಕೆರೆ- ಕಾರ್ಕಳ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಇರುವ ರಾಮಚಂದ್ರ ಭಟ್ಟರ ಮನೆಯಲ್ಲಿ ಈ ರೀತಿ ಘಟನೆ ಆಗಿರುವುದು ಮತ್ತು ರಾಮಚಂದ್ರ ಭಟ್ಟರ ಹೇಳಿಕೆಗಳು ಸಂಶಯವನ್ನು ಮೂಡಿಸಿದೆ.
ಅವರು ಹಲವಾರು ವರ್ಷಗಳಿಂದ ವಿದೇಶಿ ಅನುದಾನವನ್ನು ಪಡೆದು ಕಾರ್ಯನಿರ್ವಹಿಸುತ್ತಿರುವ ಎನ್‌ಜಿಒದ ಮೂಲಕ ಸ್ಥಳೀಯ ಮಲೆಕುಡಿಯ ಸಮುದಾಯವನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಬಲತ್ಕಾರವಾಗಿ ಹೊರತಳ್ಳಲು ಪ್ರಯತ್ನಿಸುತ್ತಿದ್ದ ವೇಳೆ ಮಲೆಕುಡಿಯರ ಮೇಲಿನ ಈ ರೀತಿಯ ದೌರ್ಜನ್ಯವನ್ನು  ಸಂಘಟನೆ ವಿರೋಧಿಸಿತ್ತು ಎಂದು ತಿಳಿಸಿದರು.
ಹೋರಾಟದಲ್ಲಿ ಸ್ಥಳೀಯ ಮಲೆಕುಡಿಯ ಕುಟುಂಬಗಳು ಸಕ್ರಿಯವಾಗಿ ಭಾಗವಹಿಸಿದ್ದು, ಇದರಿಂದಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಾಗದು ಎಂಬುವುದನ್ನು ಅರಿತ ರಾಮಚಂದ್ರ ಭಟ್ಟರು ಸರ್ಕಾರವನ್ನು ದಾರಿ ತಪ್ಪಿಸಲು ಈ ರೀತಿ ಮಾಡಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ರಾಮಚಂದ್ರ ಭಟ್ಟರ ಹೇಳಿಕೆಯ ಮೇರೆಗೆ ಸ್ಥಳಿಯರಿಗೆ, ಆದಿವಾಸಿಗಳಿಗೆ ದೌರ್ಜನ್ಯವೆಸಗಿದ್ದಲ್ಲಿ ಸಂಘಟನೆ ಸುಮ್ಮನಿರುವುದಿಲ್ಲ ಎಂದು ಸಂಘಟನೆಯ ಸಂಚಾಲಕ ಶೇಖರ ಎಲ್. ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿಷ್ಪಕ್ಷಪಾತ ತನಿಖೆಯಾಗಲಿ: ಕುತ್ಲೂರು ರಾಮಚಂದ್ರ ಭಟ್ ಅವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರು ಮತ್ತು ಬೈಕ್‌ಗೆ ಬೆಂಕಿ ಹಚ್ಚಿದ ಪ್ರಕರಣವು ಜನತೆಯಲ್ಲಿ ಸಂಶಯವನ್ನುಂಟು ಮಾಡಿದೆ. ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ಮಾಡುವುದು ಸೂಕ್ತ. ನಕ್ಸಲ್ ಕಾರ್ಯಾಚರಣೆ ಹೆಸರಲ್ಲಿ ಆದಿವಾಸಿಗಳಿಗೆ ಹಿಂಸೆ ನೀಡತೊಡಗಿದರೆ ಪಕ್ಷ ಹೋರಾಟ ನಡೆಸಬೇಕಾಗುತ್ತದೆ ಎಂದು ಭಾರತ ಕಮ್ಯೂನಿಷ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ   ತಾಲೂಕು ಕಾರ್ಯದರ್ಶಿ ಶಿವಕುಮಾರ್ ಹಾಗೂ ಮುಖಂಡ ಬಿ.ಎಂ. ಭಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
 


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.