ಕಲ್ಲಡ್ಕದಲ್ಲಿ ಮಾತಿನ ಚಕಮಕಿ; ಪೊಲೀಸರಿಂದ ನಿಯಂತ್ರಣ
ಬಂಟ್ವಾಳ: ಗುಂಪುಗಳ ನಡುವೆ ಬುಧವಾರ ರಾತ್ರಿ ನಡೆದ ಮಾತಿನ ಚಕಮಕಿಯಿಂದಾಗಿ ಕಲ್ಲಡ್ಕದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ಬಳಿಕ ಪೊಲೀಸರ ಸಕಾಲಿಕ ಕ್ರಮದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಕೆ.ಸಿ.ರೋಡು ಸಮೀಪದ ರಾಯಪ್ಪಕೋಡಿ ಎಂಬಲ್ಲಿ ನಡೆದಿದೆ ಎನ್ನಲಾದ ಚುಡಾವಣೆ ಘಟನೆ ಹಿನ್ನೆಲೆಯಲ್ಲಿ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದಿದೆ. ಮಾಹಿತಿ ಪಡೆದ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು. ಮಾತಿನ ಚಕಮಕಿ ಹಾಗೂ ಹೊಯ್ಕೈಯಲ್ಲಿ ತೊಡಗಿದ್ದ ಇತ್ತಂಡಗಳೂ ಸ್ಥಳದಿಂದ ಪರಾರಿಯಾಗಿದ್ದಾರೆ. ಬಂಟ್ವಾಳ ವೃತ್ತನಿರೀಕ್ಷಕ ರಾಜಶೇಖರ್ ಮಿಸ್ತ್ರಿ ಹಾಗೂ ಬಂಟ್ವಾಳ ನಗರ ಠಾಣಾಧಿಕಾರಿ ಕಬ್ಬಾಳ್ರಾಜ್ ನೇತೃತ್ವದಲ್ಲಿ ಕಲ್ಲಡ್ಕದಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೆ ಈ ಬಗ್ಗೆ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಅನಾಥ ಬೈಕ್ ಪತ್ತೆ
ಬಂಟ್ವಾಳ: ಅರಳ ಗ್ರಾಮದ ಮುಲಾರ ಪಟ್ನ ಎಂಬಲ್ಲಿನ ಜೈನ ಬಸದಿ ಸಮೀಪ ಅನಾಥ ಬೈಕ್ ಮಂಗಳವಾರ ಪತ್ತೆಯಾಗಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ. ಸ್ಥಳೀಯರು ದನ ಹುಡುಕಿಕೊಂಡು ಹೋಗುತ್ತಿದ್ದ ವೇಳೆ ಇಲ್ಲಿನ ಪೊದೆಯೊಂದರಲ್ಲಿ ಪಲ್ಸರ್ ಬೈಕ್ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಟಿಪ್ಪರ್-ಸೈಕಲ್ ಡಿಕ್ಕಿ; ಸವಾರ ಗಾಯ
ಬ್ರಹ್ಮಾವರ: ಸೈಕಲಿಗೆ ಟಿಪ್ಪರ್ ಡಿಕ್ಕಿ ಹೊಡೆದು ಸೈಕಲ್ ಸವಾರ ಗಾಯಗೊಂಡ ಘಟನೆ ಇಲ್ಲಿನ ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆ ಮಾಲ್ಗುಡಿ ಬಾರ್ ಆಂಡ್ ರೆಸ್ಟೋರೆಂಟ್ ಎದುರು ಬುಧವಾರ ನಡೆದಿದೆ. ಗಾಯಗೊಂಡವರನ್ನು ಸುರೇಶ್ ಎಂದು ಗುರುತಿಸಲಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲೆ ಮರೆಸಿದ್ದ ಸುಲಿಗೆ ಆರೋಪಿ ಸೆರೆ
ಬ್ರಹ್ಮಾವರ: ಏಳು ವರ್ಷಗಳ ಹಿಂದೆ ಸುಲಿಗೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬ್ರಹ್ಮಾವರ ಪೋಲಿಸರು ಬುಧವಾರ ಬಂಧಿಸಿದ್ದಾರೆ. ಬಂಧಿತ ಚೇರ್ಕಾಡಿ ಗ್ರಾಮದ ಸಂತೋಷ ನಾಯ್ಕ. ಇವನು 7 ವರ್ಷಗಳ ಹಿಂದೆ ಬಹ್ಮಾವರ ಪೊಲೀಸ್ ಠಾಣಾ ಸರಹದ್ದಿನ ಚೇರ್ಕಾಡಿ ಗ್ರಾಮದ ಪೇತ್ರಿ ಎಂಬಲ್ಲಿ ಗೌರಿ ಬಾಯಿ ಮನೆಗೆ ಪ್ರವೇಶಿಸಿ ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಮನೆಯ ಒಳಗಡೆ ಕಟ್ಟಿ ಹಾಕಿ ಅವರ ಮೈಮೇಲಿದ್ದ ಚಿನ್ನಾಭರಣ ಹಾಗೂ ಮನೆಯ ಒಳಗಡೆ ಇರಿಸಿದ್ದ ಚಿನ್ನಾಭರಣ ಹಾಗೂ ನಗದು ರು. 1000 ಸುಲಿಗೆ ಮಾಡಿ ತಲೆ ಮರೆಸಿಕೊಂಡಿದ್ದ. ಬುಧವಾರ ಉಡುಪಿ ಜಿಲ್ಲಾ ಅಪರಾಧ ಗುಪ್ತವಾರ್ತಾ ವಿಭಾಗದ ಸಹಾಯಕ ಪೊಲೀಸ್ ಉಪನಿರೀಕ್ಷಕ ನಾರಾಯಣ ಹಾಗೂ ಸಿಬ್ಬಂದಿ ಸಂತೋಷ ನಾಯ್ಕನನ್ನು ಪತ್ತೆ ಮಾಡಿ ಸಂತೋಷ್ ಬಂಧಿಸಿ ಬ್ರಹ್ಮಾವರ ಠಾಣೆಗೆ ಹಸ್ತಾಂತರಿಸಿದ್ದಾರೆ.
ಪ್ರೇಮ ವೈಫಲ್ಯ: ಆತ್ಮಹತ್ಯೆಗೆ ಯತ್ನ
ಮಂಗಳೂರು: ಪ್ರೇಮಿ ಕೈಕೊಟ್ಟ ನೋವಿನಲ್ಲಿ ಹರೇಕಳ ಪ್ರೇಮನಾಥ(32) ನೋವು ನಿವಾರಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೊಬೈಲ್ನಲ್ಲಿ ಪರಿಚಿತಳಾದ ಸ್ವಜಾತಿಯ ಯುವತಿ ಜತೆ ಸರಸ ಸಲ್ಲಾಪ ನಡೆಸುತ್ತಿದ್ದರು. ಆದರೆ ಮದುವೆಗೆ ಪ್ರಸ್ತಾವ ಇಟ್ಟಾಗ ಯುವತಿ ನಿರಾಕರಿಸಿದ್ದಳು. ಇದರಿಂದ ನೊಂದ ಪ್ರೇಮನಾಥ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರೇಮನಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತ; ಗಾಯಾಳುಗಳು ಚೇತರಿಕೆ
ಉಪ್ಪಿನಂಗಡಿ: ಬುಧವಾರ ರಾತ್ರಿ ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿನ ಐತ್ತೂರು ಚಡವಿನಲ್ಲಿ ಮ್ಯಾಕ್ಸಿ ಕ್ಯಾಬ್ ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ಹನ್ನೆರಡು ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ. ಗುರುವಾರ ಧರ್ಮಸ್ಥಳದಲ್ಲಿ ನದೆಯಲಿದ್ದ ಮದುವೆ ಕಾರ್ಯಕ್ರಮದಕ್ಕೆ ವಧುವಿನ ಕಡೆಯವರನ್ನು ಕರೆದೊಯ್ಯುತ್ತಿದ್ದ ಮ್ಯಾಕ್ಸಿ ಕ್ಯಾಬ್ ಚಾಲಕನ ನಿಯಂತ್ರಣ ಕಳೆದುಕೊಂಡು, ರಸ್ತೆ ಬದಿಯ ಸುಮಾರು ಹನ್ನೆರಡು ಅಡಿ ಆಳದ ತೋಟಕ್ಕೆ ಬಿದ್ದಿತ್ತು. ಪರಿಣಾಮ ಚಾಲಕ ಗುರುರಾಜ್, ಅಂದಾನಯ್ಯ, ಗೌರಮ್ಮ, ಬೊಮ್ಮೇಶ್, ಜಯಂತ್, ಗೌರಮ್ಮ (ವಧುವಿನ ತಾಯಿ), ಭಾಗ್ಯ, ಶಿವಲಿಂಗಯ್ಯ, ಕಮಲಮ್ಮ, ಕುಮಾರ, ಸಿದ್ದಲಿಂಗಯ್ಯ, ಅನಿಲ್ ಕುಮಾರ್ ಗಾಯಗೊಂಡಿದ್ದರು. ಈ ಪೈಕಿ ಕೆಲವರನ್ನು ಮಂಗಳೂರು ಮತ್ತು ಇನ್ನು ಕೆಲವರನ್ನು ಉಜಿರೆಯ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿತ್ತು. ಗಾಯಾಳುಗಳ ಪೈಕಿ ಚಾಲಕನ ಸ್ಥಿತಿ ಗಂಭೀರವಾಗಿದ್ದರೆ, ಜಯಂತ್ನ ಎರಡೂ ಕಾಲುಗಳು ಜಖಂಗೊಂಡಿದೆ. ಕಮಲಮ್ಮನ ಕೈ ಕತ್ತರಿಸಲ್ಪಟ್ಟಿದ್ದು ಉಳಿದೆಲ್ಲ ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ. ಮ್ಯಾಕ್ಸಿ ಕ್ಯಾಬ್ ಬೆಂಗಳೂರಿನ ವಿಜಯನಗರದಿಂದ ಹೊರಟಿದ್ದು, ಮದ್ದೂರಿನಲ್ಲಿ ಸಂಬಂಧಿಕರನ್ನು ಕೂರಿಸಿಕೊಂಡು ಧರ್ಮಸ್ಥಳಕ್ಕೆ ಸಾಗುತ್ತಿದ್ದಾಗ ದಾರಿ ಮಧ್ಯೆ ಈ ಅವಘಡ ಸಂಭವಿಸಿದೆ. ಪುತ್ತೂರು ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಟೋ ಮಗುಚಿ ಪ್ರಯಾಣಿಕ ಸಾವು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕರಾಯ ಗ್ರಾಮದ ಕೊಲ್ಲಿ ಎಂಬಲ್ಲಿ ಆಟೋ ರಿಕ್ಷಾ ಮಗುಚಿ ಬಿದ್ದ ಪರಿಣಾಮ ರಿಕ್ಷಾ ಪ್ರಯಾಣಿಕ ಅಶೋಕ ಶೆಟ್ಟಿ (48) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ಸಂಭವಿಸಿದೆ. ಮೂಲತಃ ಹಿರೆಬಂಡಾಡಿ ಗ್ರಾಮದ ಅಡೆಕ್ಕಲ್ ನಿವಾಸಿಯಾಗಿರುವ ಅಶೋಕ ಶೆಟ್ಟಿ ಕೂಲಿ ಕಾರ್ಮಿಕರಾಗಿದ್ದು, ಕಕ್ಕೆಪದವಿನಲ್ಲಿರುವ ತನ್ನ ಮಾವನ ಮನೆಗೆ ಭೇಟಿ ನೀಡಿ ಆಟೋ ರಿಕ್ಷಾದಲ್ಲಿ ಹಿಂತಿರುಗುತ್ತಿದ್ದರು. ಈ ಸಂದರ್ಭ, ಎದುರಿನಿಂದ ಬಂದ ವಾಹನಕ್ಕೆ ಸೈಡ್ ಕೊಡಲೆಂದು ಹೋದ ರಿಕ್ಷಾ ಚಾಲಕನ ನಿಯಂತ್ರಣಕ್ಕೆ ಸಿಗದೇ ಆಟೋ ರಿಕ್ಷಾ ಮಗುಚಿ ಬಿತ್ತು. ಈ ಪರಿಣಾಮ ರಿಕ್ಷಾದಲ್ಲಿದ್ದ ಅಶೋಕ ಶೆಟ್ಟಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಅಶೋಕ್ ಶೆಟ್ಟಿ ಕಳೆದ 2 ತಿಂಗಳಿಂದ ಗೋಳಿತೊಟ್ಟು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರೆನ್ನಲಾಗಿದೆ. ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಾಲ ಬಾಧೆ; ಆತ್ಮಹತ್ಯೆ ಯತ್ನ ವಿಫಲ
ಉಪ್ಪಿನಂಗಡಿ: ಸಾಲ ತೀರಿಸಲು ಅಸಾಧ್ಯವೆಂದರಿತ ವ್ಯಕ್ತಿ ನೇತ್ರಾವತಿ ನದಿ ಸೇತುವೆಯಿಂದ ನದಿಗೆ ಧುಮುಕಿ ಆತ್ಮಹತ್ಯೆಗೆ ಯತ್ನಿಸಿ ವಿಫಲವಾದ ಘಟನೆ ಗುರುವಾರ ನಡೆದಿದೆ. ಇಳಂತಿಲ ಗ್ರಾಮದ ಪಾರಡ್ಕ ಮನೆ ನಿವಾಸಿಯಾಗಿರುವ ಚೆನ್ನಪ್ಪ ಕುಂಬಾರ (63) ತಾನು ಮಾಡಿರುವ ಲಕ್ಷಕ್ಕೂ ಮಿಗಿಲಾದ ಸಾಲ ಮರು ಪಾವತಿಸುವ ಮಾರ್ಗೋಪಾಯ ತಿಳಿಯದೇ, ಆತ್ಮಹತ್ಯೆಗೆ ನಿರ್ಧಾರ ತಳೆದಿದ್ದರು. ಗುರುವಾರ ಮದ್ಯ ಸೇವಿಸಿ ಉಪ್ಪಿನಂಗಡಿಗೆ ಬಂದವರೇ ನೇತ್ರಾವತಿ ಸೇತುವೆಯಿಂದ ನದಿಗೆ ಧುಮುಕಿದರು. ನದಿಯಲ್ಲಿ ನೀರಿನ ಹರಿವು ಮಂದಗತಿಯಲ್ಲಿದ್ದ ಕಾರಣ ತೇಲುತ್ತಾ ಸಾಗಿದ ಅವರನ್ನು ಸ್ಥಳೀಯರು ನೀರಿನಿಂದ ಮೇಲೆತ್ತಿ ರಕ್ಷಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

