ರಸ್ತೆ ಕೆಸರುಮಯ: ಸಂಚಾರ ಸ್ಥಗಿತ
ವಿಟ್ಲ: ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ವಿಟ್ಲ ಪಡ್ನೂರು ಗ್ರಾಮ ಹಾಗೂ ವೀರಕಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜ್ಜೋನಿ- ತಾಳಿತ್ತನೂಜಿ- ಕರೈ ಸಂಪರ್ಕ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಕೆಸರುಮಯವಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ಬುಧವಾರ ರಾತ್ರಿ ಹಾಗೂ ಗುರುವಾರ ಮುಂಜಾನೆ ಸುರಿದ ಮಳೆಯ ಅಬ್ಬರದಿಂದ ಇಲ್ಲಿಯ ನಿವಾಸಿಗಳು ಹಾಗೂ ವಾಹನ ಚಾಲಕರು ಈ ರಸ್ತೆಯಲ್ಲಿ ನಡೆದಾಡಲು ಕೂಡ ಪರದಾಡುತ್ತಿದ್ದರು. ಕೆಲವು ಮಂದಿ ಬನಾರಿ ರಸ್ತೆ ಮೂಲಕ ವಿಟ್ಲ ಪೇಟೆ ಕಡೆ ತೆರಳಿದ್ದಾರೆ. ಮಜ್ಜೋನಿ, ಕೋಡಪದವು, ಕುಕ್ಕಿಲ, ತಾಳಿತ್ತನೂಜಿ, ಕರೈ, ಸಾಲೆತ್ತೂರು ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದು, ಕೆಸರುಗದ್ದೆಯಾಗಿ ಪರಿಣಮಿಸಿದ ಪರಿಣಾಮ ನೂರಾರು ಮಂದಿ ಕೆಲಸಕ್ಕೆ ಹಾಗೂ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳದೆ ಮನೆಯಲ್ಲಿಯೇ ಉಳಿಯುವಂತಾಯಿತು. ಕೆಲವು ವರ್ಷಗಳಿಂದ ಈ ಪ್ರದೇಶದ ನಿವಾಸಿಗಳು ಹಾಳಾದ ಈ ರಸ್ತೆಗೆ ಡಾಂಬರಿಕರಣ ನಡೆಸಬೇಕೆಂದು ಜನಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಅಧಿಕಾರಿಗಳು ಮಾತ್ರ ಭರವಸೆ ನೀಡಿದ್ದು ಬಿಟ್ಟರೆ ಈ ಬಗ್ಗೆ ಯಾವುದೇ ತೀರ್ಮಾನ ಕೈ ಗೊಂಡಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರಿಂದ ಬೇಸತ್ತ ಸ್ಥಳೀಯರು ಈ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಲು ಬುಧವಾರ ರಸ್ತೆಯ ಹೊಂಡಗಳಿಗೆ ಮಣ್ಣುಗಳು ಹಾಕಿ ದುರಸ್ತಿಗೊಳಿಸಿದ್ದರು. ದುರದೃಷ್ಟದಿಂದ ಬುಧವಾರ ರಾತ್ರಿ ಸುರಿದ ಮಳೆಯಿಂದ ಇಡೀ ರಸ್ತೆ ಕೆಸರುಮಯವಾಗಿ ಸಂಚಾರ ಸ್ಥಗಿತಗೊಂಡಿದೆ. ಒಂದು ವಾರದೊಳಗೆ ಈ ರಸ್ತೆಯನ್ನು ದುರಸ್ತಿಗೊಳಿಸದಿದ್ದರೆ ರಸ್ತೆ ತಡೆ ನಡೆಸಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

