ದಕ್ಷಿಣ ಕನ್ನಡ

ಐವತ್ತು ಶುದ್ಧಗಂಗಾ ಘಟಕ ಸ್ಥಾಪನೆಗೆ ರು. 1.86 ಕೋಟಿ

Published On :

ಬೆಳ್ತಂಗಡಿ; ಶುದ್ಧಗಂಗಾ ಯೋಜನೆಯಡಿ ಪ್ರಸ್ತುತ ವರ್ಷದಲ್ಲಿ ವಿವಿಧ ಜಿಲ್ಲೆಗಳಿಂದ ಘಟಕ ಸ್ಥಾಪಿಸಲು ಬಂದಿರುವ ಬೇಡಿಕೆಗಳನ್ನು ಪರಿಗಣಿಸಿ, ನೂತನ 50 ಶುದ್ಧಗಂಗಾ ಘಟಕಗಳನ್ನು ಸ್ಥಾಪಿಸಲು ಡಾ. ಹೆಗ್ಗಡೆಯವರು 1.86 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
 ಪ್ಲೋರೈಡ್, ಕ್ಲೋರೈಡ್, ಆರ್ಸಿನಿಕ್ ಮುಂತಾದ ಲವಣಾಂಶದಿಂದ ಕೂಡಿದ ನೀರಿನ ಸೇವನೆಯಿಂದ ಕೀಲು ನೋವು, ರಕ್ತದೊತ್ತಡ, ಕಿಡ್ನಿ ತೊಂದರೆ, ಪಾರ್ಶ್ವವಾಯು, ಮಾನಸಿಕ ತೊಂದರೆ, ಮೂಳೆ ಸೆಳೆತ, ಚರ್ಮರೋಗ, ಗರ್ಭದಲ್ಲಿನ ಶಿಶುವಿನ ನ್ಯೂನತೆ, ನರ ರೋಗಗಳು ಮುಂತಾದ ಸಾಂಕ್ರಾಮಿಕ ರೋಗಗಳು ಮುಖ್ಯವಾಗಿ ಬಯಲು ಪ್ರದೇಶದಲ್ಲಿ ಕಂಡುಬರುತ್ತಿರುವ ನಿಟ್ಟಿನಲ್ಲಿ ಇದರ ಗಂಭೀರತೆಯನ್ನು ಮನಗಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶುದ್ಧಗಂಗಾ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ.
ಘಟಕಗಳ ಮುಖಾಂತರ ನಿಗದಿತ ಕ್ಯಾನ್ಗಳಲ್ಲಿ ಶುದ್ಧಗಂಗಾ ನೀರನ್ನು ಮನೆ ಮನೆಗೆ ಪೂರೈಸಲಾಗುತ್ತಿದ್ದು ಪ್ರತಿ ಲೀ. 10 ಪೈಸೆಯಂತೆ 20 ಲೀ.ಗೆ 2 ಆಗಿದ್ದು, ಪ್ರತಿ ತಿಂಗಳು ಗ್ರಾಹಕರು 60 ಮೊತ್ತವನ್ನು ಪಾವತಿಸುತ್ತಿದ್ದಾರೆ. 35000 ಕ್ಕೂ ಅಧಿಕ ಕುಟುಂಬಗಳಿಗೆ ಸುಮಾರು 10 ಲಕ್ಷ ಲೀಟರ್ಗೂ ಹೆಚ್ಚು ಶುದ್ಧನೀರನ್ನು ವಿತರಿಸಲಾಗುತ್ತಿದೆ. ಪ್ರತಿ ನಿತ್ಯ 2 ಲಕ್ಷ ಜನರು ಈ ನೀರನ್ನು ಬಳಸುತ್ತಿದ್ದಾರೆ.
ಚಿಕ್ಕಮಗಳೂರು, ಗದಗ, ಹಾವೇರಿ, ಧಾರವಾಡ, ಹಾಸನ, ತುಮಕೂರು ಮುಂತಾದ ಜಿಲ್ಲೆಗಳ 20 ತಾಲೂಕುಗಳ 200 ಗ್ರಾಮದಲ್ಲಿ 60 ಶುದ್ಧಗಂಗಾ ಘಟಕಗಳು ಇದೀಗ ಕಾರ್ಯಾಚರಿಸುತ್ತಿವೆ.
ಇದುವರೆಗೆ ಶುದ್ಧಗಂಗಾ ಘಟಕಗಳಿಗೆ 5.97 ಕೋಟಿ ತಗುಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 3.56 ಕೋಟಿ, ಜಿಪಂನಿಂದ 15 ಲಕ್ಷ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯಿಂದ  80 ಲಕ್ಷ ಹಾಗೂ ಸಂಸದರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಗ್ರಾಪಂ, ನಗರ ಪಂಚಾಯಿತಿ, ಪುರಸಭೆ ಮುಂತಾದವುಗಳಿಂದ 1.46 ಕೋಟಿ ಮೊತ್ತವನ್ನು ಭರಿಸಲಾಗಿದೆ.
 ಶುದ್ಧೀಕರಣ ಘಟಕಕ್ಕೆ ಬೇಕಾಗುವ ಯಂತ್ರೋಪಕರಣವನ್ನು ನಾರ್ವೆಯ ಮಾಲ್ತೆವಿಂಜೆ ಮತ್ತು ಅಮೆರಿಕದ ಎಚ್ಟುಒ ಫಾರ್ ಹ್ಯೂಮನಿಟಿ ಸಂಸ್ಥೆಯಿಂದ ಭರಿಸಲಾಗಿದೆ. ಶುದ್ಧಗಂಗಾ ಯೋಜನೆಯಲ್ಲಿ 6 ಮಂದಿ ಮೇಲ್ವಿಚಾರಕರು, ಪ್ರತಿ ಘಟಕದ ನಿರ್ವಹಣೆಗೆ 2 ಮಂದಿಯಂತೆ ಒಟ್ಟು 110 ಮಂದಿ ಪ್ರೇರಕರು, ನಿರ್ವಾಹಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ ಮತ್ತು ಶುದ್ಧಗಂಗಾ ಕಾರ್ಯಕ್ರಮ ಯೋಜನಾಧಿಕಾರಿ ಜಿ. ನವೀನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.