ಮುಡಿಪು ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ದರೋಡೆ ಕೇಸ್ನಲ್ಲಿ ಸೆರೆ
ಮಂಗಳೂರು: ರೌಡಿಗಳು ಹಫ್ತಾಕ್ಕೆ ಬೇಡಿಕೆ ಇಡುತ್ತಿದ್ದರು, ಇದೀಗ ರಾಜಕಾರಣಿಗಳು, ಜನಪ್ರತಿನಿಧಿಗಳೇ ಹಫ್ತಾಕ್ಕೆ ಬೇಡಿಕೆ ಇಟ್ಟು ಬಂಧನಕ್ಕೆ ಒಳಗಾಗಿದ್ದಾರೆ!
ಇರಾ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ, ಮುಡಿಪು ವಲಯ ಯುವಕಾಂಗ್ರೆಸ್ ಅಧ್ಯಕ್ಷ ರಜಾಕ್ ಕುಕ್ಕಾಜೆನನ್ನು ಬಜಪೆ ದರೋಡೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಕುಪ್ಪೆಪದವು ಸಮೀಪ ಎಡಪದವು ಕುರ್ಲಿಪಾಡಿ ಅಬ್ದುಲ್ ಗಫೂರ್ ಕಲ್ಲಿನಕೋರೆಯಲ್ಲಿ ಕೋಟಿಗಟ್ಟಲೆ ಲಾಭ ಬರುತ್ತಿದೆ ಎಂಬ ಮಾಹಿತಿಯನ್ನು ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಹಸೈನಾರ್ ಎಂಬಾತನಿಂದಲೇ ಪಡೆದುಕೊಂಡ ರಜಾಕ್ ಕುಕ್ಕಾಜೆ ಗ್ಯಾಂಗ್, ವಿಜಿಲೆನ್ಸ್ ಸೋಗಲ್ಲಿ ವಿದೇಶದಲ್ಲಿರುವ ಮಾಲೀಕನಿಂದ 25 ಲಕ್ಷ ಪೀಕಿಸುವ ಯೋಜನೆ ರೂಪಿಸಿತ್ತು.
ಅ.8ರಂದು ವಿಜಿಲೆನ್ಸ್ ದಾಳಿ ಸೋಗಲ್ಲಿ ರಜಾಕ್, ಅನೀಶ್ ಶೆಟ್ಟಿ, ಕೇರಳ ಮೂಲದ ವ್ಯಕ್ತಿ ಸಹಿತ ನಾಲ್ಕು ಮಂದಿ ಕಾರ್ನಲ್ಲಿ ತೆರಳಿದ್ದರು. ಕಲ್ಲಿನಕೋರೆಗೆ ತೆರಳಿದ ರಜಾಕ್ ತಂಡ ಅಲ್ಲಿ ದಾಖಲೆ ಪರಿಶೀಲಿಸಿ, ಅನಧಿಕೃತ ಕೋರೆ, ಇದನ್ನು ಮುಚ್ಚುತ್ತೇವೆ ಎಂದು ಬೆದರಿಸಿದ್ದರು.
ಬಳಿಕ ರೈಟರ್ ಅನ್ವರ್ ಸಾದಾತ್ನನ್ನು ದಾಖಲೆ ಪರಿಶೀಲನೆ ನೆಪದಲ್ಲಿ ಕಾರ್ನಲ್ಲಿ ಕರೆದೊಯ್ದು ಅಜ್ಞಾತ ಸ್ಥಳದಲ್ಲಿ ಇಟ್ಟಿದ್ದರು. 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, 25 ಲಕ್ಷಕ್ಕೆ ಒಪ್ಪಂದವಾಗಿತ್ತು. ಹಣ ನೀಡುವುದಾಗಿ ಒಪ್ಪಿದಂತೆ ನಾಟಕವಾಡಿ ತಪ್ಪಿಸಿಕೊಂಡು ಬಂದಿದ್ದ. ಬಳಿಕ ವಿದೇಶದಲ್ಲಿರುವ ಮಾಲೀಕ ಗಫೂರ್ ಸೂಚನೆಯಂತೆ ಅ.24ರಂದು ಬಜಪೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ರಾಜಕೀಯ ರಕ್ಷೆ: ದೂರು ದಾಖಲಾದ ತಕ್ಷಣ ಕಲ್ಲುಕೋರೆ ಕಾರ್ಮಿಕ ಹಸೈನಾರ್ನನ್ನು ಪೊಲೀಸರು ಬಂಧಿಸಿದ್ದರು. ಆದರೆ ರಜಾಕ್ ಊರಲ್ಲಿಯೇ ತಿರುಗಾಡುತ್ತಿದ್ದರೂ ಬಂಧನವಾಗಿರಲಿಲ್ಲ.
ಆರೋಗ್ಯ ಸಚಿವ ಯು.ಟಿ.ಖಾದರ್ ಬಲಗೈ ಬಂಟನಾಗಿರುವ ರಜಾಕ್ ಕುಕ್ಕಾಜೆ, ಚುನಾವಣೆಯಲ್ಲಿ ಒಟ್ಟಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ರಾಜಕೀಯ ಕಾರಣಕ್ಕಾಗಿಯೇ ರಜಾಕ್ ಬಂಧನ ವಿಳಂಬವಾಗಿತ್ತು. ಗ್ರಾಮಪಂಚಾಯ್ತಿ ಅಧ್ಯಕ್ಷನಾಗಿದ್ದ ವೇಳೆ ಅವ್ಯವಹಾರದ ಬಗ್ಗೆ ಅನೇಕ ಪ್ರತಿಭಟನೆಗಳು ನಡೆದಿತ್ತು. ಜಿಲ್ಲಾ ಪಂಚಾಯ್ತಿ, ಅವ್ಯಹಾರಗಳ ತನಿಖೆಗೂ ಆದೇಶ ಮಾಡಿತ್ತು. ಬಜಪೆ ಇನ್ಸ್ಪೆಕ್ಟರ್ ನರಸಿಂಹಮೂರ್ತಿ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

