ಅರ್ಹ ಅಭ್ಯರ್ಥಿಗೆ ಆರ್ಸೆಟಿ ಮೂಲಕ ಬ್ಯಾಂಕ್ಗಳು ಆರ್ಥಿಕ ಸಹಾಯ ನೀಡಲಿ: ಡಾ. ವೀರೇಂದ್ರ ಹೆಗ್ಗಡೆ
ಬೆಳ್ತಂಗಡಿ: ಆರ್ಸೆಟಿ (ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಗಳು) ಮೂಲಕ ಬ್ಯಾಂಕ್ಗಳು ತರಬೇತಿ ಹೊಂದಿದ ಅರ್ಹ ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯ ನೀಡಿ ತನ್ನ ಕಾಲ ಮೇಲೆ ನಿಲ್ಲುವಂತೆ ಮಾಡಬೇಕು ಎಂದು ಆರ್ಸೆಟಿಗಳ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಗುರುವಾರ ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ವತಿಯಿಂದ ನಡೆದ ಆರ್ಸೆಟಿ ದಿವಸ್ನಲ್ಲಿ ರಾಷ್ಟ್ರೀಯ ಆರ್ಸೆಟಿಯಲ್ಲಿ ಉತ್ತಮ ಸಾಧನೆ ಮಾಡಿದ ಅಧಿಕಾರಿ ವರ್ಗದವರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ರುಡ್ಸೆಟ್ ಸಂಸ್ಥೆ 1982ರಲ್ಲಿ ನಿರ್ದಿಷ್ಟ ಉದ್ದೇಶದಿಂದ ಸ್ಥಾಪನೆಯಾಗಿ ಇದೀಗ ಗ್ರಾಮೀಣಾಭಿವೃದ್ಧಿ ಸಚಿವಾಲಯ ಗುರುತಿಸುವಂತಾಗಿದೆ ಮತ್ತು ದೇಶದ ಆರ್ಸೆಟಿಗಳ ಮುಂದಾಳತ್ವವನ್ನು ವಹಿಸಿದೆ ಎಂದು ಸಂತಸ ವ್ಯಕ್ತ ಪಡಿಸಿದ ಅವರು, ಸಚಿವಾಲಯ ಹಮ್ಮಿಕೊಂಡಿರುವ ಇಂದಿನ ಸಮಾರಂಭ ರುಡ್ಸೆಟ್ ನಿರ್ದೇಶಕರುಗಳಿಗೆ ಮಾತ್ರವಲ್ಲದೆ ಆರ್ಸೆಟಿಯ ಎಲ್ಲಾ ನಿರ್ದೇಶಕರಿಗೂ ಪ್ರೇರಣೆ ಮತ್ತು ಶಕ್ತಿ ನೀಡಲಿ ಎಂದು ಆಶಿಸಿದರು.
ಪ್ರಶಸ್ತಿ ವಿತರಿಸಿ ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜಯರಾಂ ರಮೇಶ್, ಆರ್ಸೆಟಿಗಳಿಗೆ ವಿವಿಧ ಬ್ಯಾಂಕ್ಗಳು ಪ್ರಾಯೋಜಕತ್ವ ವಹಿಸಿಕೊಳ್ಳುವುದು ಮಾತ್ರವಲ್ಲದೆ ಅದನ್ನು ತಮ್ಮ ಕಾರ್ಯಕ್ರಮದ ಮುಖ್ಯ ಚಟುವಟಿಕೆಗಳಲ್ಲೊಂದಾಗುವಂತೆ ನೋಡಿಕೊಂಡಾಗ ಅವು ಸಾಧನೆ ಮಾಡುತ್ತವೆ ಎಂದರು.
ಸಿಂಡಿಕೇಟ್ ಬ್ಯಾಂಕ್ನ ಸಿ.ಎಂ.ಡಿ. ಸುಧೀರ್ ಕುಮಾರ್ ಜೈನ್ ಆರ್ಸೆಟಿ ಆಂದೋಲನದಲ್ಲಿ ಬ್ಯಾಂಕ್ಗಳ ಪಾತ್ರದ ಕುರಿತು ಮಾತನಾಡಿ, ಸಮಾಜದ ಕಟ್ಟ ಕಡೆಯ ನಿರುದ್ಯೋಗಿಗೆ ಸೂಕ್ತ ತರಬೇತಿ ಮತ್ತು ಆರ್ಥಿಕ ಸ್ವಾವಲಂಬನೆಗೆ ಆರ್ಸೆಟಿಯ ಪಾತ್ರ ಮುಖ್ಯವಾದದ್ದು ಎಂದರು.
ವಾರ್ಷಿಕೋತ್ಸವ, ಹೊತ್ತಗೆ ಬಿಡುಗಡೆ: ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ರುಡ್ಸೆಟ್ ನಡುವಿನ ಒಪ್ಪಂದದ ಎರಡನೇ ವಾರ್ಷಿಕೋತ್ಸವ ಆಚರಿಸಲಾಯಿತಲ್ಲದೆ ವಾರ್ಷಿಕ ವರದಿ, ದೇಶದ ಆರ್ಸೆಟಿ ನಿರ್ದೇಶಕರ ಮಾಹಿತಿ ಪುಸ್ತಕ ಮತ್ತು ದೇಶದ ವಿವಿಧ ಆರ್ಸೆಟಿ ಮೂಲಕ ತರಬೇತಿ ಹೊಂದಿ ಉದ್ಯೋಗಿಗಳಾಗಿರುವ ಅನುಭವಗಳುಳ್ಳ ಯಶೋಗಾಥಾ ಎಂಬ ಹೊತ್ತಗೆ ಬಿಡುಗಡೆಗೊಳಿಸಲಾಯಿತು.
ಸಚಿವಾಲಯದ ಕಾರ್ಯದರ್ಶಿ ಎಲ್.ಸಿ. ಗೋಯಲ್, ಕೆನರಾ ಬ್ಯಾಂಕಿನ ಸಿಎಮ್ಡಿ ಆರ್.ಕೆ. ದುಬೆ, ವಿಜಯ ಬ್ಯಾಂಕ್, ಇಂಡಿಯನ್ ಓವರಸೀಸ್ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲಾ ಬ್ಯಾಂಕಿನ ಅಧ್ಯಕ್ಷರು, ಮುಖ್ಯ ಮಹಾ ಪ್ರಬಂಧಕರು, ರಾಜ್ಯದ ನಿರ್ದೇಶಕರು, ಉನ್ನತ ಮಟ್ಟದ ಅಧಿಕಾರಿಗಳು ಇದ್ದರು.
ಸಚಿವಾಲಯದ ಜೊತೆ ಕಾರ್ಯದರ್ಶಿ ಟಿ. ವಿಜಯ ಕುಮಾರ್ ಸ್ವಾಗತಿಸಿದರು. ಆರ್ಸೆಟಿಗಳ ಮೇಲ್ವಿಚಾರಣಾ ಘಟಕದ ಮುಖ್ಯ ಯೋಜನಾ ಸಮನ್ವಯಾಧಿಕಾರಿ ಕೆ.ಎನ್. ಜನಾರ್ದನ್ ವಂದಿಸಿದರು.
ರುಡ್ಸೆಟ್ ರಾಷ್ಟ್ರೀಯ ಅಕಾಡೆಮಿಯ ಮುಖ್ಯ ನಿರ್ದೇಶಕ ಎಚ್. ಸೋಮಶೇಖರ್, ಉನ್ನತ ಸಾಧನೆ ಮಾಡಿದ ಬ್ಯಾಂಕ್ಗಳು ಮತ್ತು ರಾಜ್ಯ ಸರ್ಕಾರ ಹಾಗೂ ವಿವಿಧ ಕಡೆಗಳಲ್ಲಿನ ರುಡ್ಸೆಟ್ ಮತ್ತು ಆರ್ಸೆಟಿಗಳ ನಿರ್ದೇಶಕರಿಗೆ ಪ್ರಶಸ್ತಿ ಸ್ಮರಣಿಕೆ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

