ಉತ್ತರಾಖಂಡ ಜಲಪ್ರಳಯದ ಮಾನಸಿಕ ಆಘಾತ ಇನ್ನೂ ಮಾಸಿಲ್ಲ್ಲ...
ಮಂಗಳೂರು: ರೋಶನಿ ನಿಲಯದ ಎಂಎಸ್ಡಬ್ಲ್ಯೂ 13 ವಿದ್ಯಾರ್ಥಿಗಳ ತಂಡ ಉತ್ತರಾಖಂಡದ 40 ಹಳ್ಳಿಗಳಿಗೆ ಭೇಟಿ ನೀಡಿ 1 ತಿಂಗಳ ಅಧ್ಯಯನ ನಡೆಸಿದ್ದು, 120 ಮಂದಿಗೆ ಮಾನಸಿಕ ಚಿಕಿತ್ಸೆಯ ಅಗತ್ಯತೆಯ 'ಇಂಪಾಕ್ಟ್ ಆಫ್ ಇವೆಂಟ್ ಸ್ಕೇಲ್' ಎಂಬ ವರದಿಯನ್ನು ಉತ್ತರಾಖಂಡ ನೋಡಲ್ ಅಧಿಕಾರಿಗಳಿಗೆ ಸಲ್ಲಿಸಿದೆ.
ಬೆಂಗಳೂರು ನಿಮ್ಹಾನ್ಸ್ ಸಹಯೋಗದಲ್ಲಿ 13 ಮಂದಿಯ ತಂಡ ನಾಲ್ಕು ತಂಡದಂತೆ ಕಾಳಿಮಠ, ಗುಪ್ತಕಾಶಿ, ಉಕ್ಕಿಮಠ, ಅಗಸ್ತಮುನಿ, ಪ್ಹಾಟಾ ಪ್ರದೇಶಗಳ 40 ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದೆ. ಇಲ್ಲಿನ ಪ್ರಾಕೃತಿಕ ಸ್ಥಿರತೆಗಿಂತಲೂ ಜನರ ಮನಸ್ಥಿತಿ ಇನ್ನೂ ಭೀಕರ ಪ್ರವಾಹದ ಆಘಾತದಿಂದ ಹೊರಬಂದಿಲ್ಲ ಎಂದು ಆಪ್ತಸಮಾಲೋಚಕ ತಂಡದ ವಿದ್ಯಾರ್ಥಿ ನಾಯಕ ಚೊಂಗತಮ್ ಒಡಿಸ್ಸಿ ಸಿಂಗ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿ ಮಾತನಾಡಿದ ಅವರು, ಒಬ್ಬ 7 ವರ್ಷದ ಮಗು ಈಗಲೂ ಶಾಲೆಯಲ್ಲಿ ಪ್ರವಾಹದ ದೃಶ್ಯವನ್ನು ನೆನಪಿಸುತ್ತಾ ಕನವರಿಸುತ್ತಾ ಬೆಚ್ಚಿ ಬೀಳುತ್ತಿದೆ. ಸಣ್ಣ ಗಾಳಿ, ಮಳೆ ಬಂದರೂ ಪ್ರವಾಹ ಬಂತೆಂದು ಭಾವಿಸಿ ಹೆದರುತ್ತಿದ್ದಾನೆ ಎಂದರು.
ಈ ಬಾಲಕ ಪ್ರವಾಹದ ಸಂದರ್ಭ ತನ್ನ ಕಣ್ಣೆದುರೇ ಎಲ್ಲ ಕೊಚ್ಚಿ ಹೋಗುತ್ತಿರುವುದನ್ನು ಕಂಡು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದಾನೆ. ನಮ್ಮ ತಂಡ ಭೇಟಿ ನೀಡಿದ ಸಂದರ್ಭದಲ್ಲಿಯೂ ವಿಚಿತ್ರವಾಗಿ ವರ್ತಿಸುತ್ತಿದ್ದ ಎಂದರು.
ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡವರು ಸುಮಾರು 15 ರಿಂದ 45 ವರ್ಷದೊಳಗಿನ ಯುವಕರು ಎಂಬ ಮಾಹಿತಿ ಅಲ್ಲಿ ಭೇಟಿ ನೀಡಿದ ಸಂದರ್ಭ ತಿಳಿದು ಬಂದಿದೆ ಎಂದರು.
ವಿದ್ಯಾರ್ಥಿ ಸಲ್ಮಾನ್ ಖಾನ್ ಮಾತನಾಡಿ, ಅಗಸ್ತಮುನಿ ಪ್ರದೇಶದ 10 ಹಳ್ಳಿಗಳಲ್ಲಿ ಆಸ್ತಿ ಪಾಸ್ತಿಗೆ ಹಾನಿಯುಂಟಾಗಿದ್ದು, ಪ್ರಾಣ ಹಾನಿ ಸಂಭವಿಸಿಲ್ಲ. ಆಶಾ ಕಾರ್ಯಕರ್ತೆಯರ ಸಹಾಯದಿಂದ ಅಲ್ಲಿನ ಅವಶ್ಯಕತೆ ತಿಳಿದು ಕಾರ್ಯಾಚರಿಸಿದ್ದೇವೆ. ಕೇದಾರನಾಥದಲ್ಲಿದ್ದ ಪದವಿ ಕಾಲೇಜು ಹಾಗೂ ಒಂದು ಆಂಗ್ಲಮಾಧ್ಯಮ ಶಾಲೆ ಸಂಪೂರ್ಣ ನಾಶವಾಗಿದೆ. ಈಗ ರೆಡ್ಕ್ರಾಸ್ ಸಂಸ್ಥೆಯ ಸಹಕಾರದಿಂದ ಮಕ್ಕಳು ಟೆಂಟ್ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ವಿದ್ಯಾರ್ಥಿ ಅವಿನಂದ್ ಅಚ್ಚನಹಳ್ಳಿ ಮಾತನಾಡಿ, ಸಮುದ್ರ ಮಟ್ಟದಿಂದ 11 ರಿಂದ 16 ಸಾವಿರ ಅಡಿ ಎತ್ತರದ ಪ್ರದೇಶವಾದ ಉತ್ತರಖಂಡದಲ್ಲಿ ಸಂಭವಿಸಿದ ಜಲಪ್ರಳಯ ಪ್ರಾಣಹಾನಿ ಮಾತ್ರವಲ್ಲದೆ ಅಲ್ಲಿನ ಜನರ ಜೀವನಾಧಾರವನ್ನೇ ಕಿತ್ತುಕೊಂಡಿದೆ. ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡವರು ಬಹುತೇಕರು ಯುವಕರಾಗಿದ್ದು, 20 ರಿಂದ 29 ಹರೆಯದ ಯುವತಿಯರು ಪತಿಯನ್ನು ಕಳೆದುಕೊಂಡು ಮಾನಸಿಕವಾಗಿ ನೊಂದಿದ್ದಾರೆ. ತಮ್ಮ ನಾಲ್ಕು ಜನರ ತಂಡ ಕಾಳಿಮಠ ಪ್ರದೇಶದ 11 ಹಳ್ಳಿಗಳಿಗೆ ಭೇಟಿ ನೀಡಿದ್ದೆವು ಎಂದರು.
ಮಾನಸಿಕವಾಗಿ ಕೊರಗುತ್ತಿರುವ ಮಂದಿ ತಮ್ಮ ಮನಸ್ಸಿನ ನೋವನ್ನು ಹಂಚಿಕೊಳ್ಳಲು ಅವಕಾಶ ನೀಡುವ ಮೂಲಕ ಅವರಿಗೆ ಮಾನಸಿಕ ಸ್ಥೈರ್ಯ ತುಂಬು ಪ್ರಯತ್ನ ಮಾಡಿದ್ದೇವೆ ಎಂದು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

