ಪೌಷ್ಟಿಕ ಆಹಾರದಿಂದ ಅಂಗನವಾಡಿ ಪುಟಾಣಿಗಳ ತೂಕ ಹೆಚ್ಚಳ
ಮಂಗಳೂರು: ಅಂಗನವಾಡಿ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಿರುವ ಪರಿಣಾಮ ದ.ಕ. ಜಿಲ್ಲೆಯಲ್ಲಿ ಕೇವಲ 6 ತಿಂಗಳಲ್ಲಿ ಮಕ್ಕಳ ತೂಕ ಹೆಚ್ಚಾಗಿದ್ದು, ಹೆತ್ತವರು ಖುಷಿ ಪಡುವಂತಾಗಿದೆ.
ಅಪೌಷ್ಟಿಕತೆಯಿಂದ ಮಕ್ಕಳ ತೂಕ ಕಡಿಮೆಯಾಗಿದ್ದು, ಎಪ್ರಿಲ್ 2013ರಲ್ಲಿ ಮಾಡಿದ ಸರ್ವೆ ಪ್ರಕಾರ ಕಡಿಮೆ ತೂಕದ ಮಕ್ಕಳ ಸಂಖ್ಯೆ 841 ಆಗಿತ್ತು. ಆದರೆ ಮಕ್ಕಳಿಗೆ ಪ್ರತಿ ದಿನ ಹಾಲು, ಬೇಳೆಕಾಳು, ಮೊಟ್ಟೆ ನೀಡಿದ ಪರಿಣಾಮ ನವೆಂಬರ್ನಲ್ಲಿ ಕಡಿಮೆ ತೂಕದ ಮಕ್ಕಳ ಸಂಖ್ಯೆ 581 ಆಗಿದೆ. ಅಂದರೆ ಒಟ್ಟು 260 ಮಕ್ಕಳ ತೂಕ ಹೆಚ್ಚಾಗಿ ಆರೋಗ್ಯವಂತರಾಗಿದ್ದಾರೆ.
ರಾಜ್ಯದ ಇತರ ಜಿಲ್ಲೆಯಲ್ಲಿ ಮಕ್ಕಳು ಅಪೌಷ್ಟಿಕತೆಗೆ ಒಳಗಾಗಿದ್ದರೆ, ದ.ಕ. ಜಿಲ್ಲೆಯಲ್ಲಿ ಮಾತ್ರ ಮಕ್ಕಳ ತೂಕ ಕಡಿಮೆಯಾಗಿತ್ತು. ಇದಕ್ಕಾಗಿ ಮಕ್ಕಳಿಗೆ ಬೇಳೆಕಾಳು, ಮೊಟ್ಟೆ, ಹಾಲು ನೀಡಲು ಸರ್ಕಾರ ಯೋಜನೆ ರೂಪಿಸಿತು.
3 ವರ್ಷದಲ್ಲಿ ಹೆಣ್ಣು ಮಕ್ಕಳ ತೂಕ 14.1 ಕಿಲೋ ಹಾಗೂ ಗಂಡು ಮಕ್ಕಳ ತೂಕ 14.6 ಕಿಲೋ ಇರಬೇಕು. ಆದರೆ ಗರ್ಭಿಣಿಯರು ತಮ್ಮ ಆರೋಗ್ಯವನ್ನು ಸಮರ್ಪಕವಾಗಿ ನೋಡಿಕೊಳ್ಳದ ಪರಿಣಾಮ ಹುಟ್ಟಿದ ಮಗುವಲ್ಲಿಯೇ ತೂಕ ಕಡಿಮೆಯಾಗಿರುತ್ತದೆ.
ಅಂಗನವಾಡಿಯ ಒಬ್ಬ ಮಗುವಿಗೆ 100 ಗ್ರಾಂ ನಂತೆ ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಹಾಲು ನೀಡಲಾಗುತ್ತದೆ. ಇದಲ್ಲದೆ ಮಕ್ಕಳಿಗೆ ಆಟದ ಜತೆಗೆ ಸಂಜೆಯವರೆಗೆ ಸರಿಯಾದ ನಿದ್ದೆ ಮಾಡಿಸಲಾಗುತ್ತದೆ. ಇದು ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದೆ.
ಬೆಳಗ್ಗಿನ ಹೊತ್ತು ಗೋಧಿ ಪಾಯಸ, ಮಧ್ಯಾಹ್ನ ಹುರುಳಿ ಚಟ್ನಿ, ಗಂಜಿ ಊಟ ಮಕ್ಕಳಿಗೆ ನೀಡಲಾಗುತ್ತದೆ. ಮನೆಯಲ್ಲಿ ಒಂದು ತುತ್ತು ಊಟ ಮಾಡಲು ಹರಸಾಹಸ ಪಡುವ ಅಮ್ಮಂದಿರಿಗೆ ಇಲ್ಲಿ ಊಟ ಮಾಡುವುದನ್ನು ನೋಡಿ ಸಂತೃಪ್ತಗೊಂಡಿದ್ದಾರೆ.
2012ರ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 2082 ಅಂಗನವಾಡಿಗಳಿದ್ದು, ಇಲ್ಲಿ ಸುಮಾರು 53,172 ಮಕ್ಕಳಿದ್ದಾರೆ. ಇದರಲ್ಲಿ 3 ರಿಂದ 6 ವರ್ಷದ ಸುಮಾರು 44,583 ಮಕ್ಕಳಿದ್ದಾರೆ.
ಮಕ್ಕಳ ಆಹಾರದ ಕುರಿತು ಹೆತ್ತವರಿಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮಾಹಿತಿ ನೀಡಿ ಜಾಗೃತಿ ಮೂಡಿಸುತ್ತಿದ್ದರು. ಮನೆಯಲ್ಲಿ ಮಕ್ಕಳಿಗೆ ಮತ್ತು ಗರ್ಭಿಯಣಿಯರಿಗೆ ನೀಡಬೇಕಾದ ಪೌಷ್ಟಿಕ ಆಹಾರದ ಕ್ರಮದಿಂದಾಗಿ ಮಕ್ಕಳ ತೂಕ ಮತ್ತು ಆರೋಗ್ಯ ಹೆಚ್ಚಾಗಿದೆ.
ಇದು ಅಂಗನವಾಡಿ ಕಾರ್ಯಕರ್ತೆಯರ ಶ್ರಮದ ಫಲವಾಗಿದೆ. ಆದರೆ ಸರ್ಕಾರ ಇವರ ಶ್ರಮಕ್ಕೆ ತಕ್ಕಂತೆ ವೇತನ ನೀಡುವಲ್ಲಿ ಕ್ರಮ ಕೈಗೊಂಡಿದ್ದರೆ ಮಾಡಿದ ಕೆಲಸಕ್ಕೆ ಪ್ರತಿಫಲ ದೊರಕಿದಂತಾಗುತ್ತಿತ್ತು ಎನ್ನುವುದು ಇವರ ಅಂಬೋಣ.
ವಜ್ರಾಕ್ಷಿ ಬಂಟ್ವಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

