ದಕ್ಷಿಣ ಕನ್ನಡ

ನೇತ್ರಾವತಿ ತಿರುವು ಯೋಜನೆ ವಿರೋಧಿಸಲು ಹಿಂದೇಟು ಇಲ್ಲ: ಶಾಸಕ ಬಂಗೇರ ಘೋಷಣೆ

Published On :

ಉಪ್ಪಿನಂಗಡಿ: ಕರಾವಳಿ ಜಿಲ್ಲೆಯ ಜನತೆಗೆ  ಬರಡು ಭೂಮಿ ನೀಡಿ ನೇತ್ರಾವತಿ ನದಿ ತಿರುವು ಯೋಜನೆ ಅನುಷ್ಠಾನಿಸುವ ಕಾರ್ಯ ನಡೆದರೆ ಆಡಳಿತ ಪಕ್ಷದ ಶಾಸಕನಾಗಿದ್ದರೂ ಪ್ರತಿಭಟಿಸುವುದರಲ್ಲಿ ಹಿಂದೇಟು ಹಾಕುವುದಿಲ್ಲ ಎಂದು ಬೆಳ್ತಂಗಡಿ ಶಾಸಕ ವಸಂತ ಬಂಗೇರ ಘೋಷಿಸಿದ್ದಾರೆ.
 ಬುಧವಾರ ಉಪ್ಪಿನಂಗಡಿಯ ನಾಡ ಕಚೇರಿ ಬಳಿ, ನೇತ್ರಾವತಿ ನದಿ ತಿರುವು ಯೋಜನೆಯ ವಿರೋಧಿ ಹೋರಾಟ ಸಮಿತಿಯ ಆಶ್ರಯದಲ್ಲಿ ನಡೆದ ಯೋಜನೆಯ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಅರ್ಥಹೀನ ಯೋಜನೆ: ಕರಾವಳಿ ಜಿಲ್ಲೆಯಲ್ಲಿ ಸತತ ಮಳೆಯಾಗುತ್ತದೆ ಎಂದು ನೇತ್ರಾವತಿ ನದಿ ತಿರುಗಿಸುವುದರಲ್ಲಿ ಅರ್ಥವಿಲ್ಲ. ನದಿ ನೀರು ಸಮುದ್ರ ಸೇರುವ ಬಗ್ಗೆ ನೀರು ಪೋಲಾಗುವ ಧ್ವನಿ ಅರ್ಥಹೀನ. ಮೀನುಗಾರಿಕೆಗೆ ಪೂರಕವಾಗಿ ಸಮುದ್ರಕ್ಕೂ ನೀರು ಸೇರಬೇಕಾದ ಅಗತ್ಯ ಇದೆ ಎಂದು ಬಂಗೇರ ಪ್ರತಿಪಾದಿಸಿದರು.
 ಜಿಲ್ಲೆಯ ಧಾರಣಾ ಸಾಮರ್ಥ್ಯ ಅಧ್ಯಯನ ಮಾಡದೆ ಯೋಜನೆಗಳನ್ನು ಅನುಷ್ಠಾನಿಸ ಹೊರಟರೆ ಜಿಲ್ಲೆಯ ಜನತೆಯನ್ನು ಬಲಿಕೊಟ್ಟ ಸ್ಥಿತಿ ಉದ್ಬವಿಸುತ್ತದೆ. ನದಿ ತಿರುವು ಯೋಜನೆಯಾಗಲಿ, ನಿಡ್ದೋಡಿ ಉಷ್ಣ ವಿದ್ಯುತ್ ಯೋಜನೆಯಾಗಲಿ ಜಿಲ್ಲೆಯ ಜನತೆಗೆ ಪೂರಕವಾದ ಯೋಜನೆಗಳಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಡೀವಿ ಕನಸಿನ ಕೂಸು: ಎತ್ತಿನಹೊಳೆ ಯೋಜನೆ ಜಿಲ್ಲೆಯ ಸುಪುತ್ರರೆಂದೇ ಕರೆಯಲ್ಪಡುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಕನಸಿನ ಕೂಸು ಎಂದು ವಿಶ್ಲೇಷಿಸಿದ ಅವರು, ಜಿಲ್ಲೆಯ ಸೂಕ್ಷ್ಮ ಅರಿಯದೆ ಜಾರಿಗೊಳಿಸಿದ ಈ ಯೋಜನೆಯಿಂದ ಜಿಲ್ಲೆಗೆ ಘೋರ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿದರು.  
ಸಂರಕ್ಷಣ ವಲಯ ಘೋಷಣೆ: ಮಂಗಳೂರಿನ ವನ್ಯ ಚಾರಣ ಬಳಗದ ಸಂಚಾಲಕ ದಿನೇಶ್ ಹೊಳ್ಳ ಮಾತನಾಡಿ, ಪಶ್ಚಿಮಘಟ್ಟ ಹಾಗೂ ಕರಾವಳಿ ಪ್ರದೇಶಗಳನ್ನು ನೇತ್ರಾವತಿ ನದಿ ಸಂರಕ್ಷಣ ವಲಯವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ, ಇಲ್ಲವಾದರೆ ಬಗೆ ಬಗೆಯ ಹೆಸರಿನಿಂದ ನೇತ್ರಾವತಿ ನದಿಯ ಒಡಲಿಗೆ ಕನ್ನ ಹಾಕುವ ಯತ್ನಗಳು ನಿರಂತರವಾಗಿ ನಡೆಯುವ ಸಾಧ್ಯತೆಗಳಿದೆ ಎಂದರು.
ಜನತೆ ಭಾವಶೂನ್ಯ: ಹಾಸನದ ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎ. ಕಿಶೋರ್ ಕುಮಾರ್ ಮಾತನಾಡಿ, ಇಡೀ ಕರಾವಳಿ ಜಿಲ್ಲೆಗೆ ಸಂಚಕಾರ ಮೂಡಿಸುವ ನದಿ ತಿರುವು ಯೋಜನೆಯ ಬಗ್ಗೆ ಜಿಲ್ಲೆಯ ಜನತೆಯಿಂದ ಭಾವಶೂನ್ಯ ಸ್ಪಂದನ ವ್ಯಕ್ತವಾಗಿರುವುದು ಕಳವಳ ತಂದಿದೆ. ಇದೀಗ ಎಚ್ಚೆತ್ತು ಅಲ್ಲಲ್ಲಿ ಸಣ್ಣಪುಟ್ಟ ಪ್ರತಿಭಟನೆಯ ಕೂಗು ಕೇಳಿಸಿಕೊಳ್ಳುತ್ತಿರುವುದು ನಿರಾಸೆ ಮಧ್ಯೆ ವಿಶ್ವಾಸ ಮೂಡಿಸಿದೆ ಎಂದು ತಿಳಿಸಿದರು. ನಿಡ್ಡೋಡಿಯ ಮಾತೃಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಲ್ಫಾನ್ಸ್ ಡಿ'ಸೋಜಾ ಇದ್ದರು.
ಪ್ರತಿಭಟನಾಕಾರರ ಮನವಿಯನ್ನು ಶಾಸಕ ವಸಂತ ಬಂಗೇರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಉಪ್ಪಿನಂಗಡಿಯ ಹೋರಾಟ ಸಮಿತಿ ಸಂಚಾಲಕ  ಡಾ. ನಿರಂಜನ್ ರೈ ಸ್ವಾಗತಿಸಿದರು. ಡಾ. ರಾಜಾರಾಮ್ ನಿರೂಪಿಸಿದರು. ಗಣ್ಯರಾದ ಕಜೆ ಈಶ್ವರ ಭಟ್, ಜಯಂತ ಪುರೋಳಿ, ಲೋಕೇಶ್ ಬತ್ತೋಡಿ, ಕೇಶವ ಗೌಡ ಬಜತ್ತೂರು,ಎನ್ ಉಮೇಶ್ ಶೆಣೈ, ನಳಿನಾಕ್ಷಿ ಶೆಟ್ಟಿ, ಯು. ರಾಮ, ಮಹೇಂದ್ರ ವರ್ಮ, ಅಶ್ರಫ್ ಬಸ್ತಿಕಾರ್, ಯು.ಟಿ.ಇರ್ಷಾದ್, ಅಸ್ಕರಾಲಿ, ಕೈಲಾರ್ ರಾಜಗೋಪಾಲ ಭಟ್, ಎಂ.ಕೆ. ಸಾಲಿಯಾನ್, ಪ್ರಶಾಂತ್ ಡಿ'ಕೋಸ್ಟ, ಕಿಶೋರ್ ಅಧಿಕಾರಿ, ಕರುಣಾಕರ ಸುವರ್ಣ, ಸಚಿನ್ ಸುಂದರ ಗೌಡ, ಕಂಗ್ವೆ ವಿಶ್ವಾನಾಥ ಶೆಟ್ಟಿ, ಇಸುಬು ಇಳಂತಿಲ, ಸಾಹುಲ್ ಹಮೀದ್, ಕೆ.ಜಗದೀಶ್ ಶೆಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.