ಪಶ್ಚಿಮಘಟ್ಟದಲ್ಲಿ ಮತ್ತೆ ವಿದ್ಯುತ್ ಸ್ಥಾವರ
ಸುಬ್ರಹ್ಮಣ್ಯ: ಪಶ್ಚಿಮ ಘಟ್ಟದ ಮಲೆನಾಡಿನ ಉದ್ದಕ್ಕೂ ನೈಸರ್ಗಿಕವಾಗಿ ಹರಿಯುವ ನದಿಗಳು, ಹೊಳೆಗಳು, ಧುಮುಕುವ ಝರಿಗಳು, ಬೆಟ್ಟ, ಕಣಿವೆಗಳ ದಟ್ಟ ಕಾಡಿನ ಪರಿಸರದ ನೈಸರ್ಗಿಕ ಸಂಪತ್ತುಗಳ ಮೇಲೆ ವಿವಿಧ ಯೋಜನೆಗಳ ಹೇರಿಕೆಯಿಂದ ನಿತ್ಯವೂ ಅತ್ಯಾಚಾರ ನಡೆಯುತ್ತಿದೆ. ಇದರ ಸಾಲಿಗೆ ಇದೀಗ ಮತ್ತೊಂದು ಯೋಜನೆ ಸೇರ್ಪಡೆಯಾಗುತ್ತಿದ್ದು, ಕುಮಾರಧಾರ ನದಿ ನೀರನ್ನು ಬಳಸಿ ಕುಮಾರಪರ್ವತದ ತಪ್ಪಲಿನಲ್ಲಿನ ಹೆಗ್ಗಡ ಮನೆ ಎಂಬಲ್ಲಿ ಖಾಸಗಿ ಮಿನಿ ವಿದ್ಯುತ್ ಸ್ಥಾವರ ಸ್ಥಾಪಿಸಲಾಗುತ್ತಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆಯ ಸಮೀಪ ಖಾಸಗಿ ಸ್ಥಳದಲ್ಲಿ ಸ್ಥಾವರ ಸ್ಥಾಪಿಸಲಾಗುತ್ತಿದೆಯಾದರೂ ಕುಮಾರಧಾರ ನದಿಗೆ ಅಣೆಕಟ್ಟು ಕಟ್ಟಿ ನೀರನ್ನು ಅಡ್ಡಗಟ್ಟಿ ಪೈಪ್ನ ಮೂಲಕ ನೀರನ್ನು ಬಳಸಿಕೊಳ್ಳಲಾಗುತ್ತಿದೆ.ಪೈಪ್ಗಳನ್ನು ಜೋಡಿಸಲು ಭೂಮಿಯನ್ನು ಕೊರೆದು ಅರಣ್ಯ ನಾಶ ಮಾಡಿ ಈ ಯೋಜನೆ ಜಾರಿ ಮಾಡಲಾಗುತ್ತಿದೆ.
ಇಲ್ಲಿಯ ಖಾಸಗಿ ಭೂಮಿಯಲ್ಲಿ ಕೊಡಗು ಪವರ್ ಪ್ರಾಜೆಕ್ಟ್ ಹೆಸರಿನಲ್ಲಿ ಈ ಸ್ಥಾವರ ನಿರ್ಮಿಸಲಾಗುತ್ತಿದೆ. ಈ ಸ್ಥಳದ 1 ಕಿ.ಮೀ. ವ್ಯಾಪ್ತಿಯಲ್ಲಿ ಪುಷ್ಪಗಿರಿ ವನ್ಯಧಾಮವಿದ್ದು, ಸ್ಥಾವರ ಖಾಸಗಿಯಾಗಿ ನಿರ್ಮಿಸಲಾಗಿದ್ದರೂ ಕುಮಾರಧಾರ ನದಿಯನ್ನು ತಿರುಗಿಸಿ ಬಳಸಿಕೊಳ್ಳಲಾಗುತ್ತಿದೆ. ಸಂಪಾಜೆ ಅರಣ್ಯ ವ್ಯಾಪ್ತಿಗೆ ಬರುವ ಈ ಸ್ಥಾವರ ನಿರ್ಮಾಣದ ಸುತ್ತಲಿನ ಅರಣ್ಯ ಪ್ರದೇಶ ಸಂಪೂರ್ಣವಾಗಿ ನಾಶ ಮಾಡಲಾಗುತ್ತಿದ್ದು, ಬಂಡೆ ಕಲ್ಲುಗಳನ್ನು ಸ್ಥಾವರ ನಿರ್ಮಾಣಕ್ಕಾಗಿ ಒಡೆದು ರಾಶಿ ಹಾಕಲಾಗಿದೆ.
ಅಂದಾಜು 10 ಸಾವಿರ ಹೆಕ್ಟೇರ್ ಅರಣ್ಯ ನಾಶ: ಕೇರಿ ಹೊಳೆ, ಎತ್ತಿನ ಹೊಳೆ, ಹೊಂಗಡ ಹಳ್ಳ, ಮಾರುತಿ ಹೊಳೆ, ಕಾಡು ಮನೆ ಹೊಳೆ, ಕೆಂಪು ಹೊಳೆಗಳು ಕುಮಾರಧಾರ ಇವು ನೇತ್ರಾವತಿ ತಿರುವು ಯೋಜನೆಗಳಿಗೆ ಬಳಸುವ ನದಿಗಳಾಗಿದೆ. ನೇತ್ರಾವತಿ ಉಪನದಿಗಳಾದ ಕೆಂಪು ಹೊಳೆಗೆ ಐಪಿಸಿಎಲ್ ಜಲ ವಿದ್ಯುತ್ ಸ್ಥಾವರ ನಿರ್ಮಿಸಲಾಗಿದೆ. ಕಾಡು ಮನೆ ಹೊಳೆ ನಾಗಾರ್ಜುನ ಜಲ ವಿದ್ಯುತ್ ಸ್ಥಾವರ ಕಾಡು ಮನೆ ನಾಯ್ಕನ ಹೊಳೆಗೆ ನಾಗರ್ಜುನ 2 ಜಲ ವಿದ್ಯುತ್ ಯೋಜನೆ ನಿರ್ಮಿಸಲಾಗಿದೆ. ಹೊಂಗಡ ಹಳ್ಳ, ಎತ್ತಿನಹೊಳೆ ಜೊತೆ ಸೇರಿಸಿ ಇದೀಗ ಮಾರುತಿ ಜೆನ್ (ಮೌರ್ಯ)ಪ್ರಾಜೆಕ್ಟ್ ಯೋಜನೆ ಪ್ರಗತಿಯಲ್ಲಿದ್ದು ಅಲ್ಲಲ್ಲಿ 3- 4 ಸೇತುವೆಗಳನ್ನು ನಿರ್ಮಿಸಿ ಸಿದ್ಧತೆ ನಡೆದಿದೆ. ಈಗಾಗಲೇ ಹಲವಾರು ಸಾಮಗ್ರಿಗಳನ್ನು ತಂದು ಸಂಗ್ರಹಿಸಲಾಗುತಿದ್ದು, ನೂರಾರು ಕಿ.ಮೀ.ನಷ್ಟು ದೂರ ಅರಣ್ಯ ಜಾಗದಲ್ಲಿ ರಸ್ತೆ ಹಾಗೂ ವಿದ್ಯುತ್ ಸರಬರಾಜು ಮಾಡಲು ತಂತಿಗಳನ್ನು ಎಳೆಯಲು ಕಾಡಿನೊಳಗೆ ಮರ ಕಡಿದು ಅರಣ್ಯವನ್ನು ನಾಶ ಮಾಡಲಾಗಿದೆ.
ಹೀಗೆ ನೈಸರ್ಗಿಕವಾಗಿ ಸಹಜ ಸ್ಥಿತಿಯಲ್ಲಿ ಹರಿಯುವ ಹಲವಾರು ನದಿಗಳಿಗೆ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಿ ನದಿ ತಿರುವು ಯೋಜನೆಗಳನ್ನು ತಂದು ಸಹಜವಾಗಿ ಪ್ರಕೃತಿ ದತ್ತ ಸಂಪನ್ಮೂಲವನ್ನು ಸವೆಸಿ ಜೀವ ವೈವಿಧ್ಯಗಳ ಅಸ್ಥಿತ್ವವನ್ನು ನಿರಂತರವಾಗಿ ಬುಡಮೇಲು ಮಾಡಲಾಗುತ್ತಿದೆ. ಇನ್ನೊಂದು ಕಡೆ ಈ ಎಲ್ಲ ಯೋಜನೆಗಳು ದಟ್ಟ ಕಾಡಿನ ಮಧ್ಯೆ ಕಾರ್ಯಗತವಾಗುತ್ತಿರುವುದರಿಂದ ವನ್ಯ ಜೀವಿಗಳು ಕಾಡನ್ನು ತೊರೆದು ನಾಡಿನತ್ತ ಲಗ್ಗೆ ಇಡುವುದು ಕಂಡು ಬರುತ್ತಿದೆ.
ಬಾಲಕೃಷ್ಣ ಭೀಮಗುಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

