ಕಾರ್ಮಿಕ ಪ್ರತಿಭಟಿಸಿದಕ್ಕೆ ಮಾಲೀಕರಿಗೆ ನೋಟಿಸ್!
ಮಂಗಳೂರು: ಮಂಗಳೂರಿನ ಇಎಸ್ಐ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಕಾರ್ಮಿಕ ಮುಖಂಡ ಪ್ರತಿಭಟಿಸಿದ್ದಕ್ಕೆ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಲೀಕರಿಗೆ ಇಎಸ್ಐ ನಿಗಮ ನೋಟಿಸ್ ಕಳುಹಿಸಿದೆ!
ಅವ್ಯವಸ್ಥೆ ವಿರುದ್ಧ ಸತತ ಉಪವಾಸ ಸತ್ಯಾಗ್ರಹ ನಡೆಸಿದ ಅಖಿಲ ಭಾರತ ಕಾರ್ಮಿಕ ಸಂಘ ಪ್ರಧಾನ ಕಾರ್ಯದರ್ಶಿ ಸುದತ್ ಜೈನ್ ವಿರುದ್ಧ ಇಎಸ್ಐ ನಿಗಮ ಸಾರ್ವಜನಿಕ ಕುಂದು ಕೊರತೆ ವಿಭಾಗ ಅಧಿಕಾರಿ ಸುದತ್ ಜೈನ್ ಅವರ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.
ಯಾಕೆ ಪ್ರತಿಭಟನೆ?: ಮಲೇರಿಯಾ ಜ್ವರದಲ್ಲಿ ಮಂಗಳೂರು ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಇದರಲ್ಲಿ ಕಾರ್ಮಿಕರದ್ದೇ ಸಿಂಹಪಾಲು. 2009ರಲ್ಲಿ ಇಎಸ್ಐ ಆಸ್ಪತ್ರೆಯಲ್ಲಿ ಮಲೇರಿಯಾ ಚಿಕಿತ್ಸೆ ಮದ್ದೇ ಇರಲಿಲ್ಲ. ಇಎಸ್ಐ ಡಿಸ್ಪೆನ್ಸರಿಯಿಂದ ಇಎಸ್ಐ ಆಸ್ಪತ್ರೆಗೆ ಹೋದ ಬಳಿಕ ಒಡಂಬಡಿಕೆಯ ಖಾಸಗಿ ಆಸ್ಪತ್ರೆಗೆ ಹೋಗಬೇಕಿತ್ತು. ಬಸ್ ವ್ಯವಸ್ಥೆ ಇರಲಿಲ್ಲ, ಪ್ರಯಾಣಕ್ಕಾಗಿ ರಿಕ್ಷಾಕ್ಕೆ 50 ನೀಡಬೇಕಿತ್ತು. ಸ್ವತಃ ಸಮಸ್ಯೆಗೆ ಸಿಲುಕಿದ ಹೊಟೇಲ್ ಉದ್ಯೋಗಿ ಸುದತ್ತ ಜೈನ್ ಸರ್ಕಾರದ ಸೌಲಭ್ಯ ಪಡೆಯಲೇ ಬೇಕು ಎಂಬ ಹಠದಿಂದ 2009ರಿಂದ ಪ್ರತಿಭಟನೆ ಆರಂಭಿಸಿದರು.
2010ರಲ್ಲಿ ಎರಡು ಬಾರಿ ನಿರಶನ ಮಾಡಿದರು. ಪರಿಣಾಮ ಮಲೇರಿಯಾ ರಕ್ತಪರೀಕ್ಷೆ, ಡಿಸ್ಪೆನ್ಸರಿಯಿಂದ ಆಸ್ಪತ್ರೆ ಪ್ರಯಾಣಕ್ಕೆ ಆ್ಯಂಬುಲೆನ್ಸ್, ಖಾಸಗಿ ಬಸ್ನಲ್ಲಿ ಉಚಿತ ಪ್ರಯಾಣಕ್ಕೆ ಸರ್ಕಾರ ವ್ಯವಸ್ಥೆ ಮಾಡಿತು.
ಉತ್ತಮ ಪ್ರತಿಕ್ರಿಯೆ ನೋಡಿ ಜೈನ್ ಉಪವಾಸ ಸರಣಿ ಮುಂದುವರಿಸಿದರು. ವೈದ್ಯರು ಎಲ್ಲ ಸಮಯದಲ್ಲಿ ಸಿಗಬೇಕು. ಜಿಲ್ಲೆಯ 9 ಡಿಸ್ಪೆನ್ಸರಿಯಲ್ಲಿ ರಕ್ತ ಪರೀಕ್ಷೆ ಮಾಡಬೇಕು ಎಂಬ ಬೇಡಿಕೆ ಮುಂದಿರಿಸಿ 2011ರಲ್ಲಿ ಪ್ರತಿಭಟಿಸಿದರು.
28 ವೈದ್ಯರು ಇರಬೇಕಾದಲ್ಲಿ 2 ವೈದ್ಯರಿದ್ದರು, ಪ್ರತಿಭಟನೆ ಬಳಿಕ ವೈದ್ಯರ ಸಂಖ್ಯೆ 5ಕ್ಕೆ ಏರಿತು. 2012ರಲ್ಲಿ ಮತ್ತೆ 8 ದಿನ ನಿರಶನ ಬಳಿಕ 7 ವೈದ್ಯರ ನೇಮಕ, ಸ್ಕ್ಯಾನಿಂಗ್ ಯಂತ್ರ ದುರಸ್ತಿ, ಎಕ್ಸರೆ ವ್ಯವಸ್ಥೆ ಬಂತು.
ಸ್ಕ್ಯಾನಿಂಗ್ ಯಂತ್ರಕ್ಕೆ ರೇಡಿಯಾಲಜಿಸ್ಟ್ ವ್ಯವಸ್ಥೆ ಮಾಡಿಸಿ ಇತ್ಯಾದಿ ಬಾಕಿ ಉಳಿದ ಬೇಡಿಕೆ ಈಡೇರಿಸಲು 2013ರಲ್ಲಿ ಸತತ 11 ದಿನ ನಿರಶನ ನಡೆಸಿದರು. ಕೇಂದ್ರ, ರಾಜ್ಯ ಜಂಟಿ ಅನುದಾನದಲ್ಲಿ ಇಎಸ್ಐ ಆಸ್ಪತ್ರೆ ನಿರ್ವಹಣೆ ಆಗುತ್ತಿದೆ. ಈ ಗೊಂದಲದಿಂದಾಗಿಯೇ ಅವ್ಯವಹಾರ, ಅವ್ಯವಸ್ಥೆ. ಕೇಂದ್ರ ಸರ್ಕಾರವೇ ಪೂರ್ಣ ವಹಿಸಿಕೊಳ್ಳಬೇಕು ಎಂಬುದು ಆಗ್ರಹವಾಗಿತ್ತು. ಇದರಿಂದ ಇಎಸ್ಐ ಆಸ್ಪತ್ರೆಯ ಎಲ್ಲರಿಗೂ ಕಿರಿಕಿರಿ ಆಗಿದೆ.
ಇಎಸ್ಐ ಆಸ್ಪತ್ರೆ ಮೂಲಕ ಪ್ರತಿ ವರ್ಷ ಚಿಕಿತ್ಸೆ ವೆಚ್ಚ ಎಂದು ಖಾಸಗಿ ಆಸ್ಪತ್ರೆಗಳಿಗೆ ಕೋಟಿಗಟ್ಟಲೆ ಹಣ ಸರ್ಕಾರ ನೀಡುತ್ತಿದೆ. ಇಎಸ್ಐ ಆಸ್ಪತ್ರೆಯನ್ನು ಕೇಂದ್ರ ಸರ್ಕಾರವೇ ನಿರ್ವಹಣೆ ಮಾಡಿದರೆ ಖಾಸಗಿ ಆಸ್ಪತ್ರೆಗಳಿಗೆ ಸಿಗುವ ಹಣಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಕಾರ್ಮಿಕ ಮುಖಂಡನ ಕೆಲಸದಿಂದ ತೆಗೆಯಲು ಇದು ಕೂಡಾ ಕಾರಣ ಇರಬಹುದು ಎಂದು ಕಾರ್ಮಿಕರು ಸಂಶಯ ವ್ಯಕ್ತಪಡಿಸುತ್ತಾರೆ.
'ಪ್ರತಿಭಟನೆ ಪರಿಣಾಮ ಆಸ್ಪತ್ರೆಯಲ್ಲಿ ಪ್ರಗತಿಯಾಗುತ್ತಿದೆ. ಮೊದಲು ಆರಾಮಾಗಿ ಮನೆಯಲ್ಲಿದ್ದು, ದಾದಿಯರು ಕರೆದಾಗ ಮಾತ್ರ ವೈದ್ಯರು ಬರುತ್ತಿದ್ದರು. ಆಸ್ಪತ್ರೆ ಅಧೀಕ್ಷಕರು 15 ವರ್ಷಗಳಿಂದ ಇಲ್ಲಿಯೇ ಠಿಕಾಣಿ ಹೂಡಿದ್ದಾರೆ. ಈಗ ಕುಂದು ಕೊರತೆ ಸಭೆ, ಪ್ರಗತಿ ಪರಿಶೀಲನೆ ಸಭೆ, ಅಭಿವೃದ್ಧಿ ಸಮಿತಿ ಸಭೆ ನಡೆಸಬೇಕಾಗಿದೆ. ನನ್ನನ್ನು ಓಡಿಸಿದರೆ ಕಿರಿಕಿರಿ ತಪ್ಪಬಹುದು ಎಂಬ ಉದ್ದೇಶದಿಂದ ಇಎಸ್ಐ ನಿಗಮ ಮೂಲಕ ನನ್ನ ಮಾಲೀಕರ ಮೇಲೆ ಒತ್ತಡ ಹಾಕುತ್ತಿದ್ದಾರೆ' ಎನ್ನುತ್ತಾರೆ ಸುದತ್ತ ಜೈನ್.
ನೋಟಿಸ್ನಲ್ಲಿ ಏನಿದೆ ?
ಅಧಿಕಾರಿ ನೀಡಿದ ನೋಟಿಸ್ ಹೀಗಿದೆ. 'ಸುದತ್ತ ಜೈನ್ ಅವರ ಹಲವು ಬೇಡಿಕೆ ಈಡೇರಿಸಿದರೂ ಆಸ್ಪತ್ರೆ ಮುಂದೆ ಠಿಕಾಣಿ ಹೂಡಿ ಮುಷ್ಕರ ನಡೆಸುತ್ತಾರೆ. ಇದರಿಂದ ವೈದ್ಯರಿಗೆ, ರೋಗಿಗಳಿಗೆ ಸಮಸ್ಯೆ ಆಗುತ್ತಿದೆ. ಆದ್ದರಿಂದ ನಿಮ್ಮ ಉದ್ಯೋಗಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ'. ಸೆ.26ರಂದು ಬರೆದ ಪತ್ರ ಎರಡು ದಿನಗಳ ಹಿಂದೆ ನ್ಯೂ ವಿಶ್ವಭವನ ಮಾಲೀಕ ಪ್ರಕಾಶ್ ಉಡುಪರಿಗೆ ಅಂಚೆ ಮೂಲಕ ಬಂದಿದೆ.
ಅಧಿಕಾರ ಇಲ್ಲ: 'ರಜೆ ಹಾಕಿ ಮುಷ್ಕರಕ್ಕೆ ಹೋಗುತ್ತಾರೆ, ಗೈರು ಹಾಜರಿಗೆ ಸಂಬಳ ಕೊಡುವುದಿಲ್ಲ. ಇದರಿಂದ ನಷ್ಟ ಉದ್ಯೋಗಿಗೆ, ನನಗೂ ಸ್ವಲ್ಪ ಕಷ್ಟ ಆಗುತ್ತದೆ. ಪ್ರತಿಭಟನೆಯಿಂದ ಜನ ಸಾಮಾನ್ಯರಿಗೆ ಲಾಭ ಆಗಿದೆ, ಅದು ಒಳ್ಳೆಯದೇ. ಪ್ರತಿಭಟಿಸುವುದು ಅವರ ಹಕ್ಕು, ಬೇಡ ಎನ್ನಲು ಸಾಧ್ಯವಿಲ್ಲ. ಉದ್ಯೋಗಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಇಎಸ್ಐನಿಂದ ಪತ್ರ ಬಂದಿದೆ. ನನಗೆ ಅಧಿಕಾರ ಇಲ್ಲ. ಆದರೂ ವಕೀಲರ ಸಲಹೆ ಪಡೆದು ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಪ್ರಕಾಶ್ ಉಡುಪ ತಿಳಿಸಿದ್ದಾರೆ.
ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

