ಹೊಳೆಗೆ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ದೇವಳದ ಮುಂಭಾಗದ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿದ ಯುವಕರಿಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಪ್ರಶಾಂತ್ (28) ಮತ್ತು ನಾರಾಯಣ ಸ್ವಾಮಿ(23) ಮೃತಪಟ್ಟವರು. ಬೆಂಗಳೂರು ಮೂಲದ ಮುನೇಶ್ವರ ನಗರ ಮಹಾಲಕ್ಷ್ಮಿ ಲೇಔಟ್ನ ನಿವಾಸಿಗಳಾದ ನರಸಿಂಹ, ವರದರಾಜ್, ಪ್ರಶಾಂತ್ ಮತ್ತು ನಾರಾಯಣ ಸ್ವಾಮಿ ಎಂಬವರು ಆಟೋದಲ್ಲಿ ಸೋಮವಾರ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದರು. ಮಂಗಳವಾರ ಬೆಳಗ್ಗೆ ದೇವರ ದರ್ಶನದ ಬಳಿಕ ಕುಮಾರಧಾರ ನದಿಯ ಸಮೀಪ ನೇತು ಹಾಕಲಾಗಿದ್ದ 'ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಏನೆಕಲ್ಲು' ಎಂಬ ಫಲಕದ ಕುರಿತು ಸ್ಥಳೀಯರಿಂದ ಈ ಕ್ಷೇತ್ರದ ಬಗ್ಗೆ ಮಾಹಿತಿ ಪಡೆದು ಏನೆಕಲ್ಲಿಗೆ ತೆರಳಿದ್ದರು. ದೇವಸ್ಥಾನದ ಎದುರಿನ ಹೊಳೆಯಲ್ಲಿ ಮೀನುಗಳಿಗೆ ಅಕ್ಕಿ ಹಾಕಿ ಯುವಕರು ಸ್ನಾನಕ್ಕೆಂದು ನೀರಿಗಿಳಿದಿದ್ದಾರೆ. ಈ ಪೈಕಿ ನಾರಾಯಣಸ್ವಾಮಿ ನೀರಿನಲ್ಲಿ ಮುಳುಗಿದ್ದು ಆತನನ್ನು ರಕ್ಷಿಸಲು ಮುಂದಾದ ಪ್ರಶಾಂತ್ ಕೂಡ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಬೈಕ್ ಮುಖಾಮುಖಿ; ಇಬ್ಬರಿಗೆ ಗಾಯ
ಸುಳ್ಯ: ಬೈಕ್ ಪರಸ್ಪರ ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ಕಲ್ಲುಗುಂಡಿಯ ಕಡಪಾಲದಲ್ಲಿ ನಡೆದಿದೆ. ಅರಂಬೂರಿನ ಅಕ್ಬರ್ ಎಂಬವರು ಬೈಕ್ನಲ್ಲಿ ಸುಳ್ಯ ಕಡೆಗೆ ಬರುತ್ತಿದ್ದಾಗ ರಸ್ತೆಗುಂಡಿ ತಪ್ಪಿಸಲು ಹೋಗಿ ಹರ್ಷಿತ್ ಅನ್ಯಾಳ ಎಂಬವರು ಚಲಾಯಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ರಭಸಕ್ಕೆ ಅಕ್ಬರ್ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹರ್ಷಿತ್ ಅವರ ಕಾಲು ಹಾಗೂ ಕೈಗೆ ಗಾಯವಾಗಿದ್ದು ಅವರು ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ
ಸುಬ್ರಹ್ಮಣ್ಯ: ನಡುಗಲ್ಲು ಸಮೀಪದ ಮರಕತ ನಿವಾಸಿ ಗಿರಿಯಪ್ಪ ಗೌಡರ ಪತ್ನಿ ಲೀಲಾವತಿ(52) ಮನೆಯಲ್ಲಿ ವಿಷ ಸೇವಿಸಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಿರಿಯಪ್ಪ ಗೌಡರು ಕೊಲ್ಲಮೊಗ್ರದ ಸಂಬಂಧಿಕರ ಮನೆಯಲ್ಲಿ ನಡೆದ ಮದುವೆ ನಿಶ್ಚಯ ಕಾರ್ಯಕ್ರಮಕ್ಕೆ ತೆರಳಿದ್ದಾಗ ಲೀಲಾವತಿ ಮನೆಯ ಮುಂಬಾಗಿಲಿಗೆ ಬೀಗ ಹಾಕಿ ಕೀಯನ್ನು ಹೊರಗೆ ಇಟ್ಟು ಹಿಂಬದಿಯ ಬಾಗಿಲಿನಿಂದ ಒಳಗೆ ಹೋಗಿ ಚಿಲಕ ಹಾಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಿರಿಯಪ್ಪ ಗೌಡರು ವಾಪಸ್ ಮನೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂತು. ದಂಪತಿಗೆ ಮಕ್ಕಳಿಲ್ಲ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವತಿ ನಾಪತ್ತೆ
ಕಾರ್ಕಳ: ಇಲ್ಲಿನ ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ಎಂಬಲ್ಲಿನ ಶಾಂತಿ ಎಂಬಾಕೆ ಕಾಣೆಯಾದ ಪ್ರಕರಣ ಬುಧವಾರ ವರದಿಯಾಗಿದೆ. ಈಕೆ ಮಂಗಳವಾರ ಡಾಟ್ನೆಟ್ ಕಂಪ್ಯೂಟರ್ ತರಬೇತಿಗೆಂದು ಹೋಗಿದ್ದು, ಇದುವರೆಗೆ ವಾಪಾಸ್ ಮನೆಗೆ ಬಾರದೆ ಕಾಣೆಯಾಗಿದ್ದಾಳೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೊಯನಾಡಿನಲ್ಲಿ ಇನೋವಾ ಪಲ್ಟಿ
ಸುಳ್ಯ: ಮೈಸೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಇನೋವಾ ಕಾರೊಂದು ಕೊಯನಾಡು ಬಳಿ ಬರೆಗೆ ಗುದ್ದಿ ಪಲ್ಟಿಯಾದ ಘಟನೆ ಸಂಭವಿಸಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರು ಮಾಲೀಕ ಆನಂದ ರಾವ್ ಮತ್ತು ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.
ಹಲ್ಲೆ, ಜೀವ ಬೆದರಿಕೆ
ಕುಂದಾಪುರ: ಹೆಮ್ಮಾಡಿ ಗ್ರಾಮದ ರಾಜೇಶ್ ಎಂಬವರು ಮಂಗಳವಾರ ಸಾರ್ವಜನಿಕ ಶಾರದೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿ ರಾತ್ರಿ ಹೊತ್ತು ಮನೆಗೆ ಹಿಂತಿರುಗುತ್ತಿದ್ದಾಗ ಮೂವರು ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಇಲ್ಲಿನ ಗೋಪಾಲಕೃಷ್ಣ ದೇವಸ್ಥಾನದ ಹತ್ತಿರ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ರಾಜೇಶ್ ಹಿಂದಿನಿಂದ ಪರಿಚಯದವರೇ ಆದ ಹರೀಶ, ಪ್ರಕಾಶ, ರಂಜು ಯಾನೆ ರಂಜಿತ್ ಎಂಬವರು ಜೋರಾಗಿ ಮಾತನಾಡಿಕೊಂಡು ಬರುತ್ತಿದ್ದರು. ಇದನ್ನು ಕೇಳಿ ರಾಜೇಶ್ ಹಿಂದೆ ತಿರುಗಿ ನೋಡಿದ್ದಾರೆ. ಇದರಿಂದ ಕೋಪಗೊಂಡು ಮೂವರು ಆರೋಪಿಗಳು ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ರಾಜೇಂದ್ರ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ
ಕಾಪು: ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪ್ರಕರಣ ಕಟಪಾಡಿ ಜಂಕ್ಷನ್ ಬಳಿ ನಡೆದಿದೆ. ಬುಧವಾರ ಬೆಳಗ್ಗೆ ಲಾರಿಯನ್ನು ಅಜಾಗರೂಕತೆಯಿಂದ ಚಲಾಯಿಕೊಂಡು ಬಂದ ಚಾಲಕ ಕಟಪಾಡಿ ಜಂಕ್ಷನ್ ಬಳಿಯಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ವಿದ್ಯುತ್ ಕಂಬ ಮತ್ತು ಲೈನ್ಗಳಿಗೆ ಹಾನಿ ಉಂಟಾಗಿದ್ದು, ಮೆಸ್ಕಾಂ ಇಲಾಖೆಗೆ ಸುಮಾರು ರು. 20 ಸಾವಿರು ನಷ್ಟ ಸಂಭವಿಸಿದೆ ಎಂಬುದಾಗಿ ಕಟಪಾಡಿಯ ಮೆಸ್ಕಾಂ ನಿಯಮಿತ ಶಾಖಾ ಕಚೇರಿಯ ಶಾಖಾಧಿಕಾರಿ ಸುರೇಶ ಬಾಬು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿ ಆಕಸ್ಮಿಕ ಬೆಂಕಿ; ವ್ಯಕ್ತಿಗೆ ಗಾಯ
ವಿಟ್ಲ: ಬೆಂಕಿ ಅವಘಡದಿಂದಾಗಿ ಮನೆ ಮಾಲೀಕ ಸುಟ್ಟು ಗಾಯಕ್ಕೊಳಗಾದ ಘಟನೆ ಮಾಣಿಲದ ಭಟ್ಯಡ್ಕದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಸೋಮವಾರ ರಾತ್ರಿ ಮಾಣಿಲದ ಭಟ್ಯಡ್ಕ ನಿವಾಸಿ ಸೀನ ಕುಡಿಯ (55) ಎಂಬವರು ಮನೆಯಲ್ಲಿ ಮಲಗಿದ್ದು, ಮಂಗಳವಾರ ಬೆಳಗ್ಗೆ ಮನೆ ಉರಿಯುತ್ತಿದ್ದನ್ನು ಕಂಡು ಹೊರಗೆ ಓಡಿ ಬಂದಿದ್ದಾರೆ. ಈ ಸಂದರ್ಭ ಅವರಿಗೆ ಸುಟ್ಟ ಗಾಯಗಳಾಗಿದ್ದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೀನ ಕುಡಿಯ ಅವರ ಪತ್ನಿ ಮತ್ತು ಮೂವರು ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದು, ಇವರೊಬ್ಬರೇ ಮನೆಯಲ್ಲಿದ್ದರು. ದೇವರ ಮುಂದೆ ಇಟ್ಟಿದ್ದ ದೀಪ ಅಥವಾ ಬಚ್ಚಲು ಮನೆಯ ಒಲೆಗೆ ಹಾಕಿದ್ದ ಬೆಂಕಿಯಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಮನೆ ಸಂಪೂರ್ಣ ಸುಟ್ಟು ಹೋಗಿದ್ದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

