ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ಬಡವರಿಗೆ ಸೂರು: ಅಂಬರೀಷ್
ಮಂಗಳೂರು: ಬಡವರಿಗೆ ಸೂರು ಕಲ್ಪಿಸುವ ದಿಶೆಯಲ್ಲಿ ರಾಜ್ಯದಲ್ಲಿ ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ಕೈಗೆಟಕುವ ದರದಲ್ಲಿ ಗೃಹ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ವಸತಿ ಸಚಿವ ಅಂಬರೀಷ್ ಹೇಳಿದ್ದಾರೆ.
ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
40: 60 ಅನುಪಾತದಲ್ಲಿ ಭೂಮಾಲಿಕ ಅಥವಾ ಸರ್ಕಾರ ಹಾಗೂ ಖಾಸಗಿ ಬಿಲ್ಡರ್ಗಳು ಅಪಾರ್ಟ್ಮೆಂಟ್ ನಿರ್ಮಿಸಲು ಅವಕಾಶವಿದೆ. ಬಳಿಕ ಬಡವರಿಗೆ ರಿಯಾಯ್ತಿ ದರದಲ್ಲಿ ಸೂರು ಒದಗಿಸಬೇಕು. ಇದರಲ್ಲೇ ಇತರರೂ ಸೂರು ಹೊಂದಬಹುದು. ಈಗಾಗಲೇ ಸಂಪುಟ ಸಭೆಯ ಒಪ್ಪಿಗೆ ದೊರಕಿದ್ದು, ಯೋಜನೆ ಪ್ರಾಥಮಿಕ ಹಂತದಲ್ಲಿದೆ. ಸಹಭಾಗಿತ್ವ ಹೊಂದುವ ಬಿಲ್ಡರ್ಗಳ ಜತೆ ಮಾತುಕತೆ ನಡೆಸಿದ ಬಳಿಕ ಯೋಜನೆಗೆ ಅಂತಿಮ ರೂಪ ಸಿಗಲಿದೆ. ಇದರಲ್ಲಿ ಟಿಡಿಆರ್, ವಸತಿಗೆ ಸಬ್ಸಿಡಿ ಸಿಗಲಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ದುರ್ಬಲರನ್ನು ಕೇಂದ್ರೀಕರಿಸಿ ಈ ಯೋಜನೆ ಸಿದ್ಧಗೊಳಿಸಲಾಗಿದೆ ಎಂದರು.
ಬಸವ ವಸತಿ ಯೋಜನೆಯಲ್ಲಿ ಅನುಮತಿ ನೀಡಿದ 90 ದಿನದೊಳಗೆ ಮನೆ ನಿರ್ಮಾಣ ಪ್ರಾರಂಭಿಸದ 5 ಲಕ್ಷ ಫಲಾನುಭವಿಗಳಿಗೆ ವೆಬ್ಸೈಟ್ ಲಾಕ್ ಆಗಿದ್ದರಿಂದ ಯೋಜನೆ ಇದ್ದರೂ ಅನುಷ್ಠಾನಿಸಲು ಸಾಧ್ಯವಾಗದಿರುವುದು ಗಮನಕ್ಕೆ ಬಂದಿದೆ. ಇದು ಹಿಂದಿನ ಸರ್ಕಾರದ ಅವಧಿಯಲ್ಲಾದ ತೊಂದರೆ. ಈಗಿನ ಸರ್ಕಾರ ಮನೆ ನಿರ್ಮಿಸಲು ಇನ್ನೂ ಎರಡೂವರೆ ತಿಂಗಳಿಗೆ ಅವಧಿ ವಿಸ್ತರಿಸಿದೆ. ಪ್ರಸ್ತುತ ಎಲ್ಲ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿ ನೀಡಿದ್ದು ಸರಿಯಾಗಿ ಅನುಷ್ಠಾನಿಸುತ್ತಿದ್ದಾರೆ. ಈಗ ಹಣಕಾಸಿನ ತೊಂದರೆ ಇರುವುದರಿಂದ ತೊಂದರೆಗೊಳಗಾದ ಫಲಾನುಭವಿಗಳಿಗೆ ನಿಯಮ ಸಡಿಲಿಕೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು. 2015ರ ವೇಳೆಗೆ 8 ಲಕ್ಷ ವಸತಿ ನಿರ್ಮಾಣದ ಉದ್ದೇಶ ಹೊಂದಲಾಗಿದೆ. ರಾಜೀವ್ಗಾಂಧಿ ವಸತಿ ನಿಗಮಕ್ಕೆ ಈಗಾಗಲೇ 6 ಲಕ್ಷ ಅರ್ಜಿ ಬಂದಿದೆ ಎಂದರು. ವಸತಿ ಯೋಜನೆಗಳಲ್ಲಿ ದೊಡ್ಡ ಮನೆ ನಿರ್ಮಿಸಲು ಅವಕಾಶವಿಲ್ಲ, ನಿಯಮ ಪ್ರಕಾರವೇ ಗೃಹ ನಿರ್ಮಾಣವಾಗಬೇಕು. ಬ್ಯಾಂಕ್ಗಳು ಸಾಲ ನೀಡಲು ಹಿಂದೇಟು ಹಾಕುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ವಸತಿ ಯೋಜನೆಯಲ್ಲಿ ವಿವಿಧ ಸಮಸ್ಯೆ ನಿವಾರಣೆಗೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ನುಡಿದರು.
ಬೆಳ್ತಂಗಡಿ ಶಾಸಕ ವಸಂತ ಬಂಗೇರ, ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವಾ, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಕರ್ನಾಟಕ ಹೌಸಿಂಗ್ ಬೋರ್ಡ್ ಆಯುಕ್ತ ಡಾ.ರವಿಕುಮಾರ್, ರಾಜೀವ್ಗಾಂಧಿ ಗೃಹ ನಿರ್ಮಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್, ಜಿಲ್ಲಾಧಿಕಾರಿ ಪ್ರಕಾಶ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

