ದಕ್ಷಿಣ ಕನ್ನಡ

ಯೋಜನೆ ಜನರಿಗೆ ತಿಳಿಸುವುದು ಅಧಿಕಾರಿಗಳ ಹೊಣೆ: ರೈ

Published On :

ಮಂಗಳೂರು: 'ಸರ್ಕಾರ ಜನರ ಹಿತಕ್ಕಾಗಿ ರೂಪಿಸಿದ ಯೋಜನೆಗಳನ್ನು ಜನರಿಗೆ ತಿಳಿಸಿಕೊಡುವುದು ಮತ್ತು ಕಾರ್ಯಗತಗೊಳಿಸುವುದು ಇಲಾಖೆ ಅಧಿಕಾರಿಗಳ ಜವಾಬ್ದಾರಿ' ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರ ದ.ಕ. ಜಿಲ್ಲೆಗೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಎಂಡೋಸಲ್ಪಾನ್, ಕೊಳೆರೋಗಗಳಿಗೆ ವಿಶೇಷ ಪ್ಯಾಕೇಜ್, ಮನಸ್ವಿನಿ, ಸಂಜೀವಿನಿ ಯೋಜನೆಗಳನ್ನು ರೂಪಿಸಿದೆ. ಇದು ಜನರಿಗೆ ತಿಳಿಸಿಕೊಡುವುದು ಅಧಿಕಾರಿಗಳ ಹೊಣೆ ಎಂದರು.
ಅಡಕೆ ಕೊಳೆರೋಗ ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ಸರ್ಕಾರ ರು. 20 ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ಈಗಾಗಲೇ ಬಿಡುಗಡೆಗೊಂಡ ರು. 16 ಕೋಟಿ ಮೊತ್ತವನ್ನು ತಾಲೂಕು ಮಟ್ಟದ ರೈತರಿಗೆ ನೀಡಲಾಗಿದ್ದು, ಉಳಿದ ಮೊತ್ತವನ್ನು ಶೀಘ್ರದಲ್ಲಿ ನೀಡಲಾಗುವುದು ಎಂದು ಕೃಷಿ ಅಧಿಕಾರಿ ಹೇಳಿದರು.
ಜಿಲ್ಲೆಯ ಉಳ್ಳಾಲ, ಬೆಳ್ತಂಗಡಿಯ ವ್ಯಾಪ್ತಿಯಲ್ಲಿ 3 ದನಗಳು ಸಾವನ್ನಪ್ಪಿದೆ. ಒಟ್ಟು 2.16 ಲಕ್ಷ ದನಗಳಿಗೆ ಲಸಿಕೆ ನೀಡಲಾಗಿದೆ ಎಂದು ಪಶುಸಂಗೋಪನಾ ಅಧಿಕಾರಿ ಹೇಳಿದರು.
ಘಟ್ಟ ಪ್ರದೇಶದಿಂದ ಜಾನುವಾರು, ಬೈಹುಲ್ಲು, ಮೇಕೆಗಳ ಸಾಗಾಣಿಕೆಯಿಂದ ಈ ರೋಗ ಹರಡಿರುವ ಸಾಧ್ಯತೆಯಿದ್ದು, ಇವುಗಳನ್ನು ನಿಯಂತ್ರಿಸಿದ್ದಲ್ಲಿ ರೋಗವನ್ನು ಹತೋಟಿಗೆ ತರಬಹುದು ಎಂದು ಅಭಿಪ್ರಾಯಪಟ್ಟರು.
ದೇವರಾಜ್ ಅರಸ್ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸುಮಾರು 1,700 ಮಂದಿಗೆ ಹಕ್ಕುಪತ್ರ ಇಲ್ಲದ ಕಾರಣ ಮನೆ ನಿರ್ಮಿಸಿಕೊಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರೈ, ಜನರಿಗೆ ತಮಗೆ ದೊರಕಬೇಕಾದ ಮನೆಯ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. 1700 ಮಂದಿಗೆ ಮನೆ ನಿರ್ಮಿಸಿಕೊಡಲು ಇಷ್ಟು ಸಮಯ ಬೇಕಾಗಿತ್ತೇ? 7-8 ಬಾರಿ ಸಭೆ ಮಾಡಿದರೂ ಪ್ರಗತಿ ಕಂಡುಬಂದಿಲ್ಲ. ಈ ಕುರಿತು ಜಿಲ್ಲಾಧಿಕಾರಿ ವಿಶೇಷ ಜಾಗೃತಿ ವಹಿಸುವಂತೆ ಸೂಚಿಸಿದರು.
ಕಳೆದ 7-8 ವರ್ಷಗಳಿಂದ ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭ ಬಡವರ್ಗದವರಿಗೆ ನಿವೇಶನ ನೀಡುವ ಕಾರ್ಯಕ್ರಮ ನಿಂತುಹೋಗಿದೆ. ಕನಿಷ್ಠ 2 ಎಕರೆ ಜಾಗದ ಹಕ್ಕುಪತ್ರ ನೀಡುವ ಕುರಿತು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದರು.
ಅಪರ ಜಿಲ್ಲಾಧಿಕಾರಿ ದಯಾನಂದ, ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಎಪಿಎಲ್, ಬಿಪಿಎಲ್, ಅಂತ್ಯೋದಯ ಪಡಿತರ ವಿತರಣೆ ಬಗ್ಗೆ ಮಾಹಿತಿ ಇರುವ ನೋಟಿಸ್ ಹಾಕಲಾಗುವುದು ಎಂದರು.
ರಸ್ತೆ ಕಾಮಗಾರಿ:  ಬ್ರಹ್ಮರಕೋಟ್ಲು, ಕುಳಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ಗುಂಡಿಗಳಾಗಿದ್ದು, ಈ ಬಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಕಾಮಗಾರಿಯ ಅವ್ಯವಸ್ಥೆಯಿಂದ ಮರವೂರಿನಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಸಂಭವಿಸುತ್ತದೆ. ಜಿಲ್ಲೆಗೆ ಗಣ್ಯರು ಆಗಮಿಸುವ ಮುಖ್ಯ ಮಾರ್ಗ ಇದಾಗಿದ್ದು, ಟ್ರಾಫಿಕ್‌ನಿಂದ ಸಮಸ್ಯೆಗಳಾಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಎಂದು ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ನ್ನು ತರಾಟೆ ತೆಗೆದುಕೊಂಡರು.
ಮಳೆಗಾಲ ಮುಗಿದ ತಕ್ಷಣ ಎಲ್ಲ ರಸ್ತೆ ಅವ್ಯವಸ್ಥೆ ಸರಿಪಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಎಂ. ಹೆಗ್ಡೆ ಉತ್ತರಿಸಿದರು.
ನೇತ್ರಾವತಿ ಸೇತುವೆ ಕಾಮಗಾರಿ ಶೇ. 80 ಮುಗಿದಿದ್ದು, ಮಾರ್ಚ್ ಅಂತ್ಯದೊಳಗೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ನಂತೂರು-ಪಡೀಲ್ ಸರ್ವಿಸ್ ರಸ್ತೆಗಳು ಹಾಳಾಗಿದ್ದು, 15 ದಿವಸದೊಳಗೆ ರಸ್ತೆಯನ್ನು ಸರಿ ಮಾಡಿಕೊಡಲಾಗುವುದು ಎಂದರು.
ಏರ್‌ಪೋರ್ಟ್ ರಸ್ತೆಯ ಅಗಲ ಕಡಿಮೆಯಿದ್ದು, ರಸ್ತೆ ಅಗಲೀಕರಣಕ್ಕೆ ಕಟ್ಟಡಗಳ ಸಮಸ್ಯೆ ಎದುರಾಗಿದೆ. ಕೆಲವರು ರಸ್ತೆಗಾಗಿ ಜಾಗ ಬಿಟ್ಟುಕೊಟ್ಟರೆ, ಮತ್ತೆ ಕೆಲವರು ತಕಾರಾರು ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಕಾಮಗಾರಿಯಲ್ಲಿ ವಿಳಂಬವಾಗುತ್ತಿದೆ ಎಂದರು.
ಮೈಸೂರು ಕೆ.ಆರ್.ಡಿ.ಸಿ.ಎಲ್ ಕಾರ್ಯಪಾಲಕ ಎಂಜಿನಿಯರ್ ಮಾತನಾಡಿ, ಮಾಣಿ-ಮಡಿಕೇರಿ ರಸ್ತೆ ದುರಸ್ತಿ ಕಾಮಗಾರಿಯು 2013ರ ಮೇ ತಿಂಗಳಿಗೆ ಪೂರ್ಣಗೊಳಬೇಕಾಗಿತ್ತು. ಬಾಕಿ ಇರುವ 30 ಕಿ.ಮೀ. ರಸ್ತೆ ಕಾಮಗಾರಿಯನ್ನು 2014 ಮೇಯಲ್ಲಿ ಪೂರ್ಣಗೊಳಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ನಗರ ಪೊಲೀಸ್ ಕಮಿಷನರ್ ಮನೀಷ್ ಕರ್ಬೀಕರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊರಗಪ್ಪ ನಾಯ್ಕ್, ಉಪಾಧ್ಯಕ್ಷ ರಿತೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಮಂಗಳೂರು ಉತ್ತರ ಶಾಸಕ ಬಿ.ಎ. ಮೈದಿನ್ ಬಾವ ಇದ್ದರು.
ಮುಖ್ಯಾಂಶ...
 'ಕುಳಾಯಿನಲ್ಲಿ ಬಂದರು ನಿರ್ಮಾಣಕ್ಕಾಗಿ ಸರ್ಕಾರ ಮೀಸಲಿಟ್ಟ ಜಾಗದಲ್ಲಿ ಅಕ್ರಮವಾಗಿ ಆರ್‌ಸಿಸಿ 14 ಮನೆಗಳು ನಿರ್ಮಾಣಗೊಂಡಿದೆ. ಸರ್ಕಾರ ಕಾನೂನಿನ ಪ್ರಕಾರ ತೆರವುಗೊಳಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು' ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಹೇಳಿದರು.
ಸಮುದ್ರ ಕೊರೆತ ತಡೆಗಟ್ಟಲು ಎಡಿಬಿ ಯೋಜನೆ ಮೂಲಕ ಕಾಮಗಾರಿ ಕೈಗೆತ್ತಿಕೊಂಡಿದ್ದು, ಇಲಾಖೆ ಬದ್ಧತೆಯಿಂದ ಅವಧಿಯೊಳಗೆ ಕಾಮಗಾರಿ ಮುಗಿಸಬೇಕು ಎಂದು ಯುವಜನ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್  ಸೂಚಿಸಿದರು.
ಇಂದಿರಾ ಅವಾಸ್, ಬಸವ ವಸತಿ ಯೋಜನೆಗಳಡಿ ಮನೆ ನಿರ್ಮಾಣಕ್ಕೆ ಸೂಕ್ತ ಫಲಾನುಭವಿಗಳನ್ನು ಗುರುತಿಸುವುದು ಮತ್ತು ಯೋಜನೆಯ ಬಗ್ಗೆ ಜನರಿಗೆ ಸೂಕ್ತ ನಿರ್ದೇಶನ ನೀಡಬೇಕು. ಇದರಿಂದಾಗುವ ತಪ್ಪುಗಳಿಗೆ ನೇರವಾಗಿ ಪಿಡಿಒ ಮತ್ತು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳೇ ಜವಾಬ್ದಾರಿ ಎಂದು ರೈ  ಆದೇಶಿಸಿದರು.
ನರ್ಮ್ ಯೋಜನೆಯಡಿ ಅವಿಭಜಿತ ಜಿಲ್ಲೆಗೆ 65 ಬಸ್ ಪ್ರಸ್ತಾಪಗೊಂಡಿದೆ. ಇದರಲ್ಲಿ ಮಂಗಳೂರಿಗೆ 35 ಹಾಗೂ ಉಡುಪಿಗೆ 30 ಬಸ್ ಬಿಡುಗಡೆಯಾಗಿದೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗಾಧಿಕಾರಿ ಹೇಳಿದರು.
ಬಜ್ಪೆ, ಕಿನ್ನಿಗೋಳಿ, ಕಡಂದಲೆಗಳಲ್ಲಿ ಜಲ್ಲಿ ಕ್ರಸರ್‌ಗಳ ವಿದ್ಯುತ್ ಕಡಿತಗೊಳಿಸಿದ್ದು, ಸಮಸ್ಯೆಗೆ ಎಡೆ ಮಾಡಿಕೊಟ್ಟಿದೆ ಎಂದು ಜಿಲ್ಲಾ ಯುವಜನ ಕ್ರೀಡಾ ಸಚಿವ ಕೆ. ಅಭಯಚಂದ್ರ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸುಪ್ರೀಂ ಹಾಗೂ ಹೈಕೋರ್ಟ್‌ನ ಸುರಕ್ಷಿತ ವಲಯಕ್ಕೆ ವರ್ಗಾವಣೆ ಆದೇಶದಿಂದ ಈ ಸಮಸ್ಯೆ ಉಂಟಾಗಿದೆ. ಕಂದಾಯ, ಅರಣ್ಯ, ಪರಿಸರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂಲಕ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.