ಪೊಲೀಸ್ ಸಿಬ್ಬಂದಿ, ಗ್ರಾಮ ಕರಣಿಕ ದಂಪತಿ ಮನೆಯಲ್ಲಿ ಬಾಲಕರ್ಮಿ ಪತ್ತೆ
ಮಂಗಳೂರು: ಚೈಲ್ಡ್ಲೈನ್, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಂಯುಕ್ತ ಕಾರ್ಯಾಚಾರಣೆಯಲ್ಲಿ ಬಂಟ್ವಾಳ ಬಿ.ಸಿ.ರೋಡ್ನ ಅಜ್ಜಿಬೆಟ್ಟು ಬಳಿ ಮನೆ ಕೆಲಸ ಮಾಡುತ್ತಿದ್ದ 8 ವರ್ಷದ ಬಾಲಕಿಯನ್ನು ಶನಿವಾರ ರಕ್ಷಣೆ ಮಾಡಲಾಗಿದೆ.
ಬಾಲಕಿ ಕೆಲಸ ಮಾಡುತ್ತಿದ್ದ ಮನೆ ಕದ್ರಿ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ಈರೂ ನಾಯಕ್ ಮತ್ತು ಬಂಟ್ವಾಳ ಗ್ರಾಮ ಕರಣಿಕ ಜ್ಯೋತಿಬಾಯಿ ದಂಪತಿಗೆ ಸೇರಿದ್ದು ಎಂದು ತಿಳಿದುಬಂದಿದ್ದು, ಕಾರ್ಮಿಕ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
10 ವರ್ಷದೊಳಗಿನ ಮಗುವನ್ನು ಕೆಲಸ ಮಾಡಿಸುತ್ತಿದ್ದಾರೆ ಎಂಬ ಮಾಹಿತಿ ಶಿಕ್ಷಣ ಇಲಾಖೆಯಿಂದ ಚೈಲ್ಡ್ಲೈನ್ಗೆ ಬಂದ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಅಜ್ಜಿಬೆಟ್ಟುವಿನ ಸಂಚಯಗಿರಿಯ ಮೂರನೇ ಅಡ್ಡರಸ್ತೆಯಲ್ಲಿ ವಾಸವಿರುವ ಈರೂ ನಾಯಕ್ ಮತ್ತು ಜ್ಯೋತಿಬಾಯಿ ದಂಪತಿ ಮನೆಯಲ್ಲಿ ಈ ಪ್ರಕರಣ ಪತ್ತೆಯಾಗಿದೆ.
ಮೂಲತಃ ಬಳ್ಳಾರಿ ನಿವಾಸಿಯಾದ ಬಾಲಕಾರ್ಮಿಕೆ ಮನಿಷಾ(ಹೆಸರು ಬದಲಿಸಲಾಗಿದೆ)ಳನ್ನು ಈ ದಂಪತಿಯ ಒಂದೂವರೆ ವರ್ಷದ ಮಗುವನ್ನು ನೋಡಿಕೊಳ್ಳಲು ನೇಮಿಸಲಾಗಿತ್ತು. ಜತೆಗೆ ಮನಿಷಾ ಮನೆಯ ಕೆಲಸವನ್ನೂ ಮಾಡುತ್ತಿದ್ದಳು.
ಕಾರ್ಯಾಚರಣೆ ವೇಳೆ ಮನೆಯಲ್ಲಿ ಮನಿಷಾ ಮತ್ತು ಮಗು ಮಾತ್ರ ಇದ್ದಿತು. ಮನಿಷಾಳನ್ನು ವಿಚಾರಿಸಿದಾಗ ಆಕೆಯ ತಂದೆ ಮತ್ತು ತಾಯಿ ತಮಿಳ್ನಾಡಿನಲ್ಲಿ ಉಳಿದ ಮೂವರು ಮಕ್ಕಳೊಂದಿಗೆ ವಾಸವಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು.
ಮನಿಷಾಳನ್ನು ಶಾಲೆಗೆ ಕಳುಹಿಸದೆ, ಮೂಲಭೂತ ಸೌಕರ್ಯ ಒದಗಿಸದೆ ಮಕ್ಕಳ ಹಕ್ಕನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಈ ಬಗ್ಗೆ ಮನೆ ಮಾಲೀಕ ದಂಪತಿಯನ್ನು ದೂರವಾಣಿ ಮೂಲಕ ತಂಡ ಸಂಪರ್ಕಿಸಿದರೂ ಸರಿಯಾದ ಪ್ರತಿಕ್ರಿಯೆ ನೀಡಿರಲಿಲ್ಲ. ಕೊನೆಗೆ ಮನಿಷಾಳ ಹೇಳಿಕೆ ಪಡೆದುಕೊಂಡು ದಂಪತಿಯನ್ನು ಸ್ಥಳಕ್ಕೆ ಕರೆಸಿಕೊಂಡು ಹೇಳಿಕೆ ಪಡೆಯಲಾಯಿತು.
ಬಾಲಕಾರ್ಮಿಕ ನಿಯಂತ್ರಣ ಕಾಯ್ದೆಯನ್ವಯ ಬಾಲಕಿ ಮತ್ತು ಮನೆ ಮಾಲೀಕನ ವಿಚಾರಣೆ ನಡೆಸಿ ಬಾಲಕಿಯನ್ನು ವಶಕ್ಕೆ ಪಡೆದುಕೊಂಡು ಪುನರ್ವಸತಿ ಮತ್ತು ಮುಂದಿನ ಶಿಕ್ಷಣಕ್ಕೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಆಶಾ ನಾಯಕ್ ಎದುರು ಹಾಜರುಪಡಿಸಲಾಯಿತು.
ಕಾರ್ಮಿಕ ಇಲಾಖೆ ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸಲಿದೆ. ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಬಾಲಕಿಯ ವಯೋವುತಿ ಪರಿಶೀಲನೆ ನಡೆಸಿ ಬಾಲಕಿಗೆ 8ರಿಂದ 9 ವರ್ಷ ಪ್ರಾಯವಾಗಿರಬಹುದು ಎಂದು ದೃಢಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಚೈಲ್ಡ್ಲೈನ್ ನಿರ್ದೇಶಕ ರೆನ್ನಿ ಡಿಸೋಜ, ಕಾರ್ಮಿಕ ನಿರೀಕ್ಷಕ ಪ್ರಸನ್ನ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ, ಶಿಕ್ಷಣ ಇಲಾಖೆ ಸಿಬ್ಬಂದಿ ಫ್ಲೇವಿಯಾ, ಚೈಲ್ಡ್ಲೈನ್ ಸಿಬ್ಬಂದಿ ಸರಿತಾ, ಅಶುಂತಾ ಡಿಸೋಜ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರದ ದಿನಕರ್, ಪೊಲೀಸ್ ಸಿಬ್ಬಂದಿಗಳಾದ ಕೃಷ್ಣಕುಲಾಲ್, ಒಮನ್ ಕುಟ್ಟಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

