ಕೊಳೆ ರೋಗ ಪರಿಹಾರ ಆಗ್ರಹಿಸಿ ಆಲಂಕಾರಿನಲ್ಲಿ ರಸ್ತೆ ತಡೆ ಪ್ರತಿಭಟನೆ
ಉಪ್ಪಿನಂಗಡಿ: ಅಡಕೆ ಕೊಳೆ ರೋಗದಿಂದ ಕಂಗೆಟ್ಟಿರುವ ಕೃಷಿಕರಿಗೆ ಸೂಕ್ತ ಪರಿಹಾರ ನೀಡಲು ಅಗ್ರಹಿಸಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿ ಹಾಗೂ ಸಾಂಕೇತಿಕ ರಸ್ತೆ ತಡೆ ಸೋಮವಾರ ಸಂಜೆ ಆಲಂಕಾರಿನಲ್ಲಿ ನಡೆಯಿತು.
ಸತತ ಮಳೆಯಿಂದಾಗಿ ಅಡಕೆ ಬೆಳೆಗಾರರು ಕೊಳೆ ರೋಗದಿಂದ ನಷ್ಟಕ್ಕೀಡಾಗಿದ್ದಾರೆ. ಶೇ. 90ರಷ್ಟು ಅಡಕೆ ಫಸಲು ಹಾನಿಗೀಡಾಗಿದೆ. ಅಡಕೆ, ತೆಂಗು, ಕಾಳುಮೆಣಸು ಕೂಡಾ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಪರಿಹಾರ ಕಾರ್ಯಕ್ಕೆ ಮುಂದಾಗಬೇಕು, ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ರೈತರ ಬೆಳೆಗೆ ಸೂಕ್ತ ಬೆಲೆ ನೀಡಬೇಕು ಮುಂತಾದ ಬೇಡಿಕೆ ಪ್ರತಿಭಟನಾಕಾರರಿಂದ ಕೇಳಿ ಬಂತು.
ಆಲಂಕಾರು ಸಿ.ಎ.ಬ್ಯಾಂಕ್ ಆವರಣದಿಂದ ಮೆರವಣಿಗೆಯಲ್ಲಿ ಸಾಗಿ ಆಲಂಕಾರು ಪೇಟೆಯಲ್ಲಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆಲಂಕಾರು ಪೇಟೆಯಲ್ಲಿ ರಸ್ತೆ ತಡೆ ನಡೆಸಲಾಯಿತು.
ಸಾಲ ಮನ್ನಾ ಆಗ್ರಹ: ಸುಳ್ಯ ಶಾಸಕ ಎಸ್ .ಅಂಗಾರ ಮಾತನಾಡಿ, ರೈತನ ನೆರವಿಗೆ ಸರ್ಕಾರ ಮುಂದಾಗ ಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು, ಕೊಳೆರೋಗಕ್ಕೆ ಎಕ್ರೆಗೆ ತಲಾ ರು. 50 ಸಾವಿರದಂತೆ ಪರಿಹಾರ ಘೋಷಿಸಬೇಕು ಎಂದು ಅಗ್ರಹಿಸಿದರು.
ಅಡಕೆ ಕೊಳೆ ರೋಗಕ್ಕೆ ಮುಖ್ಯಮಂತ್ರಿ ಇನ್ನೂ ಯಾವುದೇ ಪರಿಹಾರ ಘೋಷಿಸಿಲ್ಲ. ಆದರೆ ಸ್ಥಳೀಯ ಕಾಂಗ್ರೆಸಿಗರು ಮಾತ್ರ ಸುಳ್ಳು ಹೇಳಿಕೊಂಡು ರೈತರನ್ನು ದಾರಿತಪ್ಪಿಸುತ್ತಿದ್ದಾರೆ ಎಂಸಿದರು.
ರಾಜ್ಯದ ರೈತಾಪಿ ವರ್ಗವನ್ನು ನಿರ್ಲಕ್ಷ್ಯ ಮಾಡಿದರೆ, ರೈತರಿಗಾಗಿ, ಬಿಜೆಪಿ ವಿಧಾನಸೌಧ ಚಲೋ ಕಾರ್ಯಕ್ರಮದ ಮೂಲಕ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಆಲಂಕಾರು ಸಿ.ಎ ಬ್ಯಾಂಕ್ ನಿರ್ದೇಶಕ ದಯಾನಂದ ಕರ್ಕೇರ ಪ್ರಾಸ್ತಾವಿಕ ಮಾತನಾಡಿದರು.
ಸುಳ್ಯ ಮಂಡಲದ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜಿ.ಪಂ.ಸದಸ್ಯ ಬಾಲಕೃಷ್ಣ ಸುವರ್ಣ ಬಾಣಜಾಲು, ತಾ.ಪಂ ಸದಸ್ಯ ದಯಾನಂದ ಗೌಡ ಆಲಡ್ಕ, ಆಲಂಕಾರು ಗ್ರಾಮ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಕಯ್ಯಪ್ಪೆ, ಆಲಂಕಾರು ಶಕ್ತಿ ಕೇಂದ್ರದ ಅಧ್ಯಕ್ಷ ಧರ್ಮಪಾಲ್ ರಾವ್ ಕಜೆ, ರಾಮಕುಂಜ ಗ್ರಾ.ಪಂ. ಅಧ್ಯಕ್ಷೆ ಕೃಷ್ಣವೇಣಿ, ಆಲಂಕಾರು ಗ್ರಾ.ಪಂ ಅಧ್ಯಕ್ಷ ದಯಾನಂದ ಗೌಡ ಬಡ್ಡಮೆ, ಕೊಯ್ಲ ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಗೌಡ ಬಿ., ಸುಳ್ಯ ವಲಯಾಧ್ಯಕ್ಷ ರವಿಪ್ರಸಾದ್ ಶೆಟ್ಟಿ ಇದ್ದರು.
ಪ್ರತಿಭಟನೆ ಬಳಿಕ ಕಂದಾಯ ಇಲಾಖಾಧಿಕಾರಿ ಮೂಲಕ ಸರ್ಕಾರಕ್ಕೆ ಅಡಕೆ ಕೊಳೆರೋಗಕ್ಕೆ ಸೂಕ್ತ ಪರಿಹಾರ, ರೈತರ ಸಾಲ ಮನ್ನಾ ಹಾಗು ಇನ್ನಿತರ ಬೇಡಿಕೆಗಳನ್ನು ಆಗ್ರಹಿಸಿದ ಮನವಿ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

