ಪಂಜಿಮೊಗರು ಕೊಲೆ ಪ್ರಕರಣ:ಮಂಪರು ಪರೀಕ್ಷೆಗೆ ಸಿದ್ಧ
ಮಂಗಳೂರು: '2 ವರ್ಷದ ಹಿಂದೆ ಪಂಜಿಮೊಗರು ಬಳಿ ಮನೆಯಲ್ಲಿ ಜೋಡಿ ಕೊಲೆ ನಡೆದಿದ್ದು, ಈ ಪ್ರಕರಣದಲ್ಲಿ ತನ್ನ ಕುಟುಂಬ ತನ್ನನ್ನು ಆರೋಪಿ ಸ್ಥಾನದಲ್ಲಿ ನೋಡುತ್ತಿದೆ. ಇದಕ್ಕಾಗಿ ತಾನು ಮಂಪರು ಪರೀಕ್ಷೆಗೂ ಸಿದ್ಧ' ಎಂದು ಮೃತ ರಝಿಯಾ ಅವರ ಪತಿ ಹಮೀದ್ ಪಿ.ಎಂ. ಹೇಳಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2011 ಜು. 28 ರಂದು ಮಧ್ಯಾಹ್ನ ಅಕ್ರಮವಾಗಿ ನುಗ್ಗಿದ ಹಂತಕ ಚೂರಿಯಿಂದ ತಿವಿದು ತಾಯಿ ಮತ್ತು ಮಗಳನ್ನು ಕೊಲೆ ಮಾಡಿರುತ್ತಾನೆ. ಕೊಲೆ ನಡೆದು 2 ವರ್ಷ ಕಳೆದಿದೆ. ಹಂತಕನನ್ನು ಹಿಡಿಯುವಂತೆ ಹಲವು ಪ್ರತಿಭಟನೆಗಳು ನಡೆದಿವೆ. ಆದರೂ ಆರೋಪಿ ಇನ್ನು ಪತ್ತೆಯಾಗಿಲ್ಲ. ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದೆ. ಈ ನಡುವೆ ಏಕಾಏಕಿ ತಮ್ಮ ಕುಟುಂಬದ ಸದಸ್ಯನೊಬ್ಬ ತನ್ನನ್ನು ಕೊಲೆ ಪಾತಕಿ ಎಂದು ಬಿಂಬಿಸಿ ಮಾಧ್ಯಮದಲ್ಲಿ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾನೆ ಎಂದು ಆರೋಪಿಸಿದರು. ಆದ್ದರಿಂದ ಕೊಲೆ ಆರೋಪಿಯ ಪತ್ತೆಗಾಗಿ ಪ್ರಕರಣವನ್ನು ಸಿಬಿಐ ವಶಕ್ಕೆ ಒಪ್ಪಿಸುವಂತೆ ಕೋರಿ 2013 ಜೂ. 2 ರಂದು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ. ಮಂಪರು ಪರೀಕ್ಷೆಗೆ ತನನ್ನು ಆರೋಪಿಸುತ್ತಿರುವ ಕುಟುಂಬದವರನ್ನು ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮೃತ ರಝಿಯಾ ಸಹೋದರರಾದ ಮಯ್ಯದ್ಧಿ, ಅಬ್ದುಲ್ ರಝಾಕ್, ಅಬ್ದುಲ್ ಸತ್ತಾರ್ ಹಾಜರಿದ್ದರು.
ಅರ್ಜಿ ಆಹ್ವಾನ
ಮಂಗಳೂರು: ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಸಂಶೋಧನೆಗಾಗಿ ಕಿರಿಯ ಸಂಶೋಧಕ ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಈ ವೇತನವು 3 ವರ್ಷ ಅವಧಿಗೆ ಪರಿಶಿಷ್ಟ ಜಾತಿ ಪಂಗಡದವರಿಗೆ ಮೀಸಲಾಗಿದೆ. ಅಭ್ಯರ್ಥಿಯು ಭೌತಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಶೇ. 50 ಅಂಕ ಗಳಿಸಿರಬೇಕು. ಸೆ. 21 ಕೊನೆ ದಿನ. ಸಂಶೋಧನೆಗೆ ಮಂಗಳೂರು ವಿಶ್ವವಿದ್ಯಾಲಯ ಭೌತಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ರಾಜಶೇಖರ್ ಭಜಂತ್ರಿ ಮಾರ್ಗದರ್ಶನ ನೀಡುವರು. ಹೆಚ್ಚಿನ ಮಾಹಿತಿಗೆ ಢಿಢಿಢಿ.ಟಛಟ್ಜಿಛಟ್ಟ್ಠಜ್ಡಟ್ಝಿಢಜ್ಠಡ್ಝಡಿಣ.ಛ್ಛ.್ಝಟಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಉಡುಪಿ ಜಿಲ್ಲೆಗೆ ರಾಜ್ಯ ಶಿಕ್ಷಕ
ಅವಳಿ ಪ್ರಶಸ್ತಿ
ಉಡುಪಿ: ಶಿಕ್ಷಕ ದಿನಾಚರಣೆಯ ಪ್ರಯುಕ್ತ ನೀಡಲಾಗುವ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಉಡುಪಿ ಜಿಲ್ಲೆಯಿಂದ ಇಬ್ಬರು ಶಿಕ್ಷಕರು ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಸಂತಿ ಎನ್. ಆಯ್ಕೆಯಾಗಿದ್ದು, ಅವರು ಅತ್ಯಂತ ಗ್ರಾಮೀಣ ಪ್ರದೇಶದ ಮಾಳ ಅನುದಾನಿತ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ಕೊಳಲಿಗಿರಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪುತ್ತು ನಾಯ್ಕ್ ಎಚ್. ಅವರಿಗೆ ಪ್ರಶಸ್ತಿ ದೊರೆತಿದೆ. ರಾಜ್ಯ ಶಿಕ್ಷಕ ದಿನಾಚರಣೆ ಸಂದರ್ಭದಲ್ಲಿ ಇವರಿಬ್ಬರಿಗೂ ಶಿವಮೊಗ್ಗದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸ್ವ ಸಹಾಯ ಸಂಘದ ಸದಸ್ಯರಿಗೆ ವಂಚನೆ: ದೂರು
ಸುಳ್ಯ: ತಾಲೂಕಿನ ಕಾಯರ್ತೋಡಿ ಸೂರ್ತಿಲ ಶ್ರೀನಿಧಿ ಸ್ವಸಹಾಯ ಸಂಘದಲ್ಲಿ ಪ್ರತಿನಿಧಿಯೊಬ್ಬರು ಹಣ ದುರುಪಯೋಗ ಪಡಿಸಿ ಸದಸ್ಯರಿಗೆ ವಂಚಿಸಿದ್ದಾರೆಂದು ಸಂಘದ ಇತರ ಸದಸ್ಯೆಯರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶ್ರೀನಿಧಿ ಸ್ವಸಹಾಯ ಸಂಘದ ಪ್ರತಿನಿಧಿಯೋರ್ವವರು 2005ರಲ್ಲಿ ಇತರ ಸದಸ್ಯರ ಗಮನಕ್ಕೆ ತಾರದೇ ಅವರ ಸಹಿಗಳನ್ನು ಪೋರ್ಜರಿ ಮಾಡಿ ಸುಳ್ಯ ಸಿಂಡಿಕೇಟ್ ಬ್ಯಾಂಕ್ನಿಂದ ರು. 2.5 ಲಕ್ಷ ಸಾಲ ಪಡೆದಿದ್ದಾರೆ. ಆ ಬಳಿಕವೂ ಯಾರಲ್ಲೂ ಹೇಳದೆ ಹಣವನ್ನು ತಾವೊಬ್ಬರೇ ಉಪಯೋಗಿಸಿಕೊಂಡಿದ್ದಾರೆ. ಅವರು ಸಾಲ ಮರುಪಾವತಿ ಮಾಡದಿರುವುದರಿಂದ ಈಗ ಅದು ರು. 3,37,006 ಆಗಿದ್ದು ಸಂಘದ ಇತರ 19 ಸದಸ್ಯರಿಗೂ ನೊಟೀಸು ಬಂದಿದೆ. ಪ್ರತಿನಿಧಿ ನಮ್ಮನ್ನು ವಂಚಿಸಿದ್ದಾರೆ ಎಂದು ಚಿತ್ರಾವತಿ ಎಂಬವರು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಇತರ 15 ಮಂದಿ ಸದಸ್ಯೆಯರು ಚಿತ್ರಾವತಿಯವರು ನೀಡಿದ ದೂರಿಗೆ ಸಾಕ್ಷಿ ನೀಡಿದ್ದಾರೆ.
ಸುಳ್ಯದಲ್ಲಿ ಹಣ ದುರುಪಯೋಗ: ಅಧಿಕಾರಿ ದೂರು
ಸುಳ್ಯ: ಪಟ್ಟಣದ ಗಾಂಧಿನಗರದಲ್ಲಿರುವ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗವಾಗಿರುವ ಬಗ್ಗೆ ಸಂಸ್ಥೆಯ ಸಹಾಯಕ ವಸೂಲಾತಿ ಅಧಿಕಾರಿ ಎಚ್.ಎಸ್. ಚಂದ್ರ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುಳ್ಯ ಗಾಂಧಿನಗರದಲ್ಲಿರುವ ನಿಗಮದ ಮೀನು ಮರಾಟ ಮಳಿಗೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ವ್ಯವಹಾರ ನೋಡಿಕೊಳ್ಳುತ್ತಿದ್ದವರು 1.4.2013ರಿಂದ 18.8.2013 ರವರೆಗೆ ಮೀನು ಮಾರಾಟದ ಹಣ 4.38,147ವನ್ನು ನಿಗಮಕ್ಕೆ ನೀಡದೆ ದುರುಪಯೋಗ ಪಡಿಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಇವರಿಬ್ಬರನ್ನು ಆ.19ರಿಂದ ಕರ್ತವ್ಯದಿಂದ ಬಿಡಲಾಗಿದ್ದು ಇವರನ್ನು ಕೆಲಸಕ್ಕೆ ಒದಗಿಸಿದ ಮಂಗಳೂರಿನ ಪ್ರೀಮಿಯರ್ ಸೆಕ್ಯುರಿಟಿ ಸರ್ವಿಸ್ನ ಮಾಲಕರಿಂದ ನಷ್ಟ ಭರಿಸಲು ಆದೇಶಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸುಳ್ಯ ಪೋಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ವಿಷ ಸೇವಿಸಿ
ಯುವಕ ಆತ್ಮಹತ್ಯೆ
ಕಾರ್ಕಳ: ಇಲ್ಲಿನ ಎರ್ಲಪಾಡಿ ಗ್ರಾಮದ ಚೆಂಡೆಬೈಲು ಎಂಬಲ್ಲಿ ಯುವಕನೊಬ್ಬ ಗೆಳೆಯನೊಂದಿಗೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ. ಮೃತ ಪ್ರವೀಣ್ ಪೂಜಾರಿ (28) ಭಾನುವಾರ ತನ್ನ ಸ್ನೇಹಿತ ಸಂದೀಪನೊಂದಿಗೆ ಸಾಲದ ವಿಚಾರವಾಗಿ ಹಿರಿಯಡ್ಕದ ಪಂಚನಬೆಟ್ಟು ಎಂಬಲ್ಲಿ ಜಗಳವಾಡಿದ್ದು, ಗಾಯಗೊಂಡ ಸಂದೀಪನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಇದರಿಂದ ಮನನೊಂದ ಪ್ರವೀಣ ರಾತ್ರಿ ಮನೆಯ ಬಳಿ ಇರುವ ಪಾದೆಕಲ್ಲಿನ ಬಳಿ ಯಾವುದೋ ವಿಷಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮೃತರ ಸಹೋದರ ಪ್ರದೀಪ್ ಪೂಜಾರಿ ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಣಗಳ ಅಕ್ರಮ ಸಾಗಾಟ: ಇಬ್ಬರ ಬಂಧನ
ಕುಂದಾಪುರ: ಇಲ್ಲಿನ ಕಸಬ ಗ್ರಾಮದ ಎಂಕೊಂಡಿ ಎಂಬಲ್ಲಿ 2 ಕೋಣಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಪೊಲೀಸರು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಭಾನುವಾರ ಬೆಳಗ್ಗೆ ಕುಂದಾಪುರ ಪೊಲೀಸ್ ಎಸ್ಐ ರೇವತಿ ಅವರಿಗೆ ದೊರೆತ ಖಚಿತ ವರ್ತಮಾನದಂತೆ ಸಿಬ್ಬಂದಿಯೊಂದಿಗೆ ಎಂಕೋಡಿಯ ಸೌಹಾರ್ದ ಭವನದ ಬಳಿ ಏಸ್ ವಾಹನದಿಂದ 2 ಕೋಣಗಳನ್ನು ಇಬ್ಬರು ವ್ಯಕ್ತಿಗಳು ಇಳಿಸುತ್ತಿದ್ದಾಗ ದಾಳಿ ನಡೆಸಿ, ಆರೋಪಿಗಳಾದ ಅಬ್ದುಲ್ ಸಮದ್ ಎಂಕೋಡಿ, ಚಾಲಕ ಚಂದ್ರ ಕಾವ್ರಾಡಿ ಅವರನ್ನೂ ಬಂಧಿಸಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುಷ್ಕರ್ಮಿಗಳಿಂದ ಗೂಡಂಗಡಿಗೆ ಬೆಂಕಿ
ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕದ ಹೊಸಗದ್ದೆ ಎಂಬಲ್ಲಿ ದುಷ್ಕರ್ಮಿಗಳು ಗೂಡಂಗಡಿಯೊಂದಕ್ಕೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ತನಿಯಪ್ಪ ಗೌಡ ಎಂಬವರ ಗೂಡಂಗಡಿ ಬೆಂಕಿಗಾಹುತಿಯಾಗಿದ್ದು, ಕೃತ್ಯದಿಂದಾಗಿ ಗೂಡಂಗಡಿಯು ಭಾಗಶಃ ಸುಟ್ಟು ಹೋಗಿದೆ. ಅಗ್ನಿ ಸ್ಪರ್ಶಕ್ಕೆ ಸೀಮೆ ಎಣ್ಣೆ ಸುರಿದಿರುವುದೇ ಕಾರಣವೆನ್ನಲಾಗಿದೆ. ಘಟನೆಯಿಂದ ಸಾವಿರಾರು ರುಪಾಯಿ ನಷ್ಟದ ಅಂದಾಜು ಮಾಡಲಾಗಿದೆ. ಕೆಲ ಸಮಯದ ಹಿಂದೆ ಕಾಲೇಜು ವಿದ್ಯಾರ್ಥಿನಿಯ ಆತ್ಯಾಚಾರಕ್ಕೆ ಯತ್ನಿಸಿದ ಘಟನೆ ಇದೇ ಸ್ಥಳದಲ್ಲಿ ನಡೆದಿದ್ದು, ಈ ಪ್ರಕರಣದ ಆರೋಪಿಯನ್ನು ಹಿಡಿದುಕೊಟ್ಟ ಕೋಪದಲ್ಲಿ ಈ ಕೃತ್ಯವೆಸಗಿರುವ ಸಾಧ್ಯತೆಯನ್ನು ಶಂಕಿಸಲಾಗಿದೆ. ಮಾತ್ರವಲ್ಲದೆ ಪೆರಿಯಡ್ಕದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಶುಭಾಶಯ ಕೋರಿ ಹಾಕಲಾಗಿದ್ದ ಫ್ಲೆಕ್ಸ್ ಬ್ಯಾನರ್ನ್ನು ದುಷ್ಕರ್ಮಿಗಳು ಕದ್ದೊಯ್ದ ಘಟನೆಯೂ ನಡೆದಿದ್ದು, ಕೋಮು ವಿದ್ವೇಷದ ಪ್ರಚೋದನೆಯ ಹಿನ್ನೆಲೆಯನ್ನು ಅಂದಾಜಿಸಲಾಗಿದೆ. ವರ್ಗಾವಣೆಯ ಭರಾಟೆಗೆ ಸಿಲುಕಿರುವ ಉಪ್ಪಿನಂಗಡಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ.
ಮರಳು ಅಕ್ರಮ
ಸಾಗಾಟ; ಲಾರಿ ವಶಕ್ಕೆ
ಉಪ್ಪಿನಂಗಡಿ: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಭೂ ಗಣಿ ವಿಜ್ಞಾನ ಇಲಾಖಾಧಿಕಾರಿಗಳು ವಶಪಡಿಸಿಕೊಂಡ ಘಟನೆ ಸೋಮವಾರ ಚಾರ್ವಾಕ ಗ್ರಾಮದ ಗುಜ್ಜರ್ಮೆ ಎಂಬಲ್ಲಿ ನಡೆದಿದೆ. ಗುಜ್ಜರ್ಮೆ ಎಂಬಲ್ಲಿ ಅಕ್ರಮವಾಗಿ ಮರಳು ರಾಶಿ ಹಾಕಲಾಗಿದ್ದು, ಇಲ್ಲಿಂದ ಲಾರಿಗಳಲ್ಲಿ ಸಾಗಾಟ ಮಾಡಲಾಗುತ್ತಿದೆ ಎಂದು ಖಚಿತ ಮಾಹಿತಿ ಆಧಾರದಲ್ಲಿ ಗಣಿ ಇಲಾಖಾಧಿಕಾರಿ ಮಧುಶ್ರೀ ಹಾಗೂ ಕಡಬ ಕಂದಾಯಾಧಿಕಾರಿ ಬಾಬು ನೇತೃತ್ವದ ತಂಡ ಲಾರಿಯೊಂದು ಮರಳನ್ನು ತುಂಬಿಸಿಕೊಂಡು ಹೊರಡಲು ಅಣಿಯಾಗಿದ್ದ ವೇಳೆ ದಾಳಿ ನಡೆಸಿದರು. ಈ ವೇಳೆ ಚಾಲಕ ಪರಾರಿಯಾಗಿದ್ದು, ವಶಪಡಿಸಿಕೊಂಡ ಲಾರಿಯನ್ನು ಕಡಬ ಠಾಣೆಗೆ ಒಪ್ಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

