ಡಾ. ಜನಾರ್ದನ ಭಟ್ ಬೆಳ್ಮಣ್ಣು, ಕಸ್ತೂರಿ ಬಾಯಿರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ
ಮೂಡುಬಿದಿರೆ: ಡಾ. ಬಿ. ಜನಾರ್ದನ ಭಟ್ ಬೆಳ್ಮಣ್ಣು ಅವರ 'ಉತ್ತರಾಧಿಕಾರ' ಕೃತಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಹಾಗೂ ಕಸ್ತೂರಿ ಬಾಯಿರಿ ಬಾಗಲಕೋಟೆ ಅವರ 'ಒಂದೇ ಕಾಂಡದ ಕುರ್ಚಿ' ಕಥಾಸಂಕಲನಕ್ಕೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿ ಲಭಿಸಿದೆ.
ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠದ ಆಡಳಿತ ಮಂಡಳಿಯು ಸಿ.ಕೆ. ಪಡಿವಾಳ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು.
2007ರಲ್ಲಿ ಪ್ರಕಟವಾದ ಮತ್ತು 2012ರ ಪ್ರಶಸ್ತಿಗೆ ಪರಿಶೀಲಿಸಲ್ಪಟ್ಟ ಪುಸ್ತಕಗಳ ಕುರಿತು ತೀರ್ಪುಗಾರರಾಗಿ ಡಾ. ವಾಸುದೇವ ಶೆಟ್ಟಿ, ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ಹಾಗೂ ಹಿರಿಯ ಲೇಖಕಿ ಕೆ. ಶಾರದಾ ಭಟ್ ಉಡುಪಿ ತೀರ್ಪುಗಾರರಾಗಿ ನೀಡಿದ ಅಂಕಗಳ ಆಧಾರದಲ್ಲಿ ಪ್ರಶಸ್ತಿ ಆಯ್ಕೆ ಮಾಡಲಾಯಿತು. ಮೂಡುಬಿದಿರೆ ದಸರಾ ಸಾಹಿತ್ಯೋತ್ಸವದಲ್ಲಿ ವರ್ಧಮಾನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲು ಪೀಠದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಡಾ.ಬಿ. ಜನಾರ್ದನ ಭಟ್: ಬೆಳ್ಮಣ್ನ ಡಾ.ಬಿ. ಜನಾರ್ದನ ಭಟ್ ಒಬ್ಬ ಬಹುಮುಖ್ಯ ಬರೆಹಗಾರರು ಮತ್ತು ಅಧ್ಯಯನಶೀಲ ವಿದ್ವಾಂಸರು. ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿಗಳಿಸಿದ ಮೇಲೆ ಡಾಕ್ಟರೇಟ್ ಪದವಿಯನ್ನೂ ಪಡೆದಿರುವ ಅವರು ಪ್ರಸ್ತುತ ಬೆಳ್ಮಣ್ನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರು.
ಎರಡು ವೈಚಾರಿಕ ಕೃತಿಗಳನ್ನು 19 ವಿಮರ್ಶೆ ಸಹಿತ ಒಟ್ಟು 48 ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರು ಸಂಪಾದಿಸಿರುವ ದಕ್ಷಿಣ ಕನ್ನಡದ ಶತಮಾನದ ಕಾವ್ಯ ಮತ್ತು ದಕ್ಷಿಣ ಕನ್ನಡದ ಶತಮಾನದ ಕತೆಗಳು, ಓಬೀರಾಯನ ಕತೆಗಳು ಅವರ ಅಧ್ಯಯನಶೀಲತೆ ಮತ್ತು ಒಳನೋಟಗಳಿಂದ ಮನ್ನಣೆಗೆ ಪಾತ್ರವಾಗಿದ್ದು, 12 ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸಿದ ಹೆಗ್ಗಳಿಕೆ ಇವರದ್ದು.
ಕಸ್ತೂರಿ ಶಂಕರ ಬಾಯಿರಿ: ಹೆಣ್ಣಿನ ಸೂಕ್ಷ್ಮ ಸಂವೇದನೆಯನ್ನು ತಮ್ಮ ಸಣ್ಣಕತೆಗಳಲ್ಲಿ ವಿಶಿಷ್ಟವಾಗಿ ತೆರೆದಿಡುವ ಕಸ್ತೂರಿ ಶಂಕರ ಬಾಯಿರಿ ಹುಟ್ಟಿದ್ದು ಉಡುಪಿ ಜಿಲ್ಲೆಯ ಸಾಸ್ತಾನ. ಓದು ಮತ್ತು ಬದುಕನ್ನು ಕಂಡುಕೊಂಡದ್ದು ದೂರದ ಬಾಗಲಕೋಟೆಯಲ್ಲಿ. 26 ವರ್ಷಗಳ ಕಾಲ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿದ್ದುಕೊಂಡೇ, ಎಲ್ಎಲ್ಬಿ ಓದಿ ಸ್ವಯಂ ನಿವೃತ್ತಿ ಪಡೆದು ಹತ್ತು ವರ್ಷಗಳ ಕಾಲ ವಕೀಲಿ ವೃತ್ತಿ ನಡೆಸಿದರು. ಈಗ ಪೂರ್ಣವಾಗಿ ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ 48ನೇ ವಯಸ್ಸಿನವರೆಗೆ ಸಾಹಿತ್ಯ ಕೃಷಿಗೆ ತೊಡಗದೇ ಇದ್ದ ಅವರಿಗೆ ಈಗ ಸಾಹಿತ್ಯವೇ ಜೀವಾಳ. ಆರು ಕಥಾಸಂಕಲನ ಮತ್ತು ಅಷ್ಟೇ ಸಂಖ್ಯೆಯ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ 'ಒಂದೇ ಕಾಂಡದ ಕುರ್ಚಿ' ಎಂಬ ಕಥಾ ಸಂಗ್ರಹವು ಬರವಣಿಗೆಯ ವಿಧಾನದ ಹೊಸತನದಿಂದ ಮತ್ತು ಅನುಭವದ ಸಂಕೀರ್ಣತೆಯನ್ನು ವಿಶಿಷ್ಟವಾಗಿ ತೆರೆದಿಡುವ ಕೌಶಲ್ಯದಿಂದ ಪ್ರತಿಷ್ಠಿತ ವರ್ಧಮಾನ ಉದಯೋನ್ಮುಖ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

