ದಕ್ಷಿಣ ಕನ್ನಡ

ಹೊಂಚು ಹಾಕುತ್ತಿದ್ದವರ ನೋಡಲು ಹೋಗಿ ಕೊಲೆಯಾದ!

Published On :

ಮಂಗಳೂರು: ತನ್ನ ಕೊಲೆಗೆ ಹೊಂಚು ಹಾಕುತ್ತಿದ್ದವರನ್ನು ನೋಡಲೆಂದು ಬುಧವಾರ ರಾತ್ರಿ ತೆರಳಿದ್ದ ರೌಡಿ ಶೀಟರ್ ನೀಲು ಯಾನೆ ನೀಲೇಶ ಪೂಜಾರಿ ಯಾನೆ ನೀಲಯ ಹಂತಕರ ಕತ್ತಿಗೆ ಸುಲಭವಾಗಿ ಆಹಾರವಾಗಿದ್ದಾನೆ.
 ಒಂದು ಕಾಲದ ರೌಡಿ ಪಾಂಡು ಪೈ ಶಿಷ್ಯ, 2004ರಲ್ಲಿ ರೌಡಿ ವಾಮಂಜೂರು ರೋಹಿ ಜೈಲ್ ಎಸ್ಕೇಪ್ ಪ್ರಕರಣದಲ್ಲಿ ತನ್ನ ರಿಕ್ಷಾ ನೀಡಿದ್ದ ನೀಲು ಕೊನೆಗೆ ತನ್ನ ಗುರು ಪಾಂಡು 2009ರಲ್ಲಿ ಕೊಲೆಯಾದಾಗ ನೇರ ರೌಡಿಸಂ ಚಟುವಟಿಕೆಯಿಂದ ದೂರ ಇದ್ದ. ರಿಯಲ್ ಎಸ್ಟೇಟ್, ಸಣ್ಣ ಪುಟ್ಟ ರಾಜಿ ಪಂಚಾತಿಕೆ ನಡೆಸಿ ಬದುಕು ಕಂಡು ಕೊಂಡಿದ್ದ. ಮದುವೆಯಾಗಿ ಮಗು ಹೊಂದಿದ್ದು, ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಮಡ್ಯಾರಿನಲ್ಲಿ ಜೀವ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಕೆಲ ವರ್ಷ ಸ್ಟೇಟ್‌ಬ್ಯಾಂಕ್ ಬಳಿಯ ಕಂದುಕದಲ್ಲಿ ಮನೆ ಮಾಡಿ ವಾಸವಿದ್ದ.
 ರೌಡಿ ಚಟುವಟಿಕೆ ಆರಂಭದ ದಿನಗಳಲ್ಲಿ ಹಿಂದೂ ಸಂಘಟನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನೀಲು, ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಉಳ್ಳಾಲ ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ಪರವಾಗಿ ಫೀಲ್ಡ್‌ಗೆ ಇಳಿದು ಪ್ರಚಾರ ನಡೆಸಿದ್ದ.
 ರೌಡಿಸಂ ವೇಳೆ ಸಹಜವಾಗಿ ಮೂಡುವ ವೈಮನಸ್ಸು, ತಕರಾರುಗಳೇ ನೀಲು ಅಂತ್ಯಕ್ಕೆ ಕಾರಣವಾಗಿದೆ. ರಿಯಲ್‌ಎಸ್ಟೇಟ್ ವಿಚಾರದಲ್ಲಿ ಸಂತೋಷ್ ಎಂಬಾತನ ಮೇಲೆ ನಡೆಸಿದ ಹಲ್ಲೆ ನೀಲುವಿನ ಬದುಕಿಗೆ ಅಂತ್ಯ ಹಾಡುವಂತಾಗಿದೆ. 'ಕಟ್ಟದ ಕೋರಿ ಕಟ್ಟಡೇ' (ಅಂಕದ ಕೋಳಿ ಅಂಕದಲ್ಲಿಯೇ ಸಾವು) ಎಂಬ ತುಳು ಗಾದೆಯಂತೆ ರೌಡಿಸಂನಲ್ಲಿದ್ದ ನೀಲು ಬದುಕು ಅರ್ಧದಲ್ಲಿಯೇ ಅಂತ್ಯವಾಗಿದೆ.
ಹಿಂದೊಮ್ಮೆ ಯತ್ನ: ಹಿಂದೊಮ್ಮೆ ದುಷ್ಕರ್ಮಿಗಳ ಕೂಟ ಜು.30ರಂದೇ ನೀಲು ಕೊಲೆಗೆ ಮುಹೂರ್ತ ಫಿಕ್ಸ್ ಮಾಡಿದ್ದರು. ಆದರೆ ಅಂದು ಕೋಟೆಕಾರ್ ಬೀರಿ ಬಳಿ ತನ್ನ ಕಾರನ್ನು ವೇಗವಾಗಿ ಓಡಿಸಿ ಕಾರ್‌ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಹಂತಕರ ಪಡೆಯಿಂದ ತಪ್ಪಿಸಿಕೊಳ್ಳುವಲ್ಲಿ ನೀಲು ಯಶಸ್ವಿಯಾಗಿದ್ದ. ಮರುದಿನ ಬೆಳಗ್ಗೆ ಹಂತಕರು ಓಡಿಸಿಕೊಂಡು ಬಂದ ಸ್ಥಳ ಜಾಲಾಡಿದಾಗ ಪೊದೆಯ ಬಳಿ ತಳವಾರ್, ಕತ್ತಿ ಸಿಕ್ಕಿತ್ತು. ತಕ್ಷಣ ರಾಜಕೀಯ ಪ್ರಭಾವ ಬಳಸಿದ ನೀಲು, ಆರೋಪಿಗಳ ವಿರುದ್ಧ ದೂರು ನೀಡಿ ಜೈಲ್‌ಗೆ ಹಾಕುವಲ್ಲಿ ಯಶಸ್ವಿಯಾಗಿದ್ದ. ತನ್ನ ಪವರ್ ನೋಡಿ ವಿರೋಧಿಗಳು ಹೆದರಿ ಸುಮ್ಮನಾಗುವರೆಂದು ನೀಲು ಭಾವಿಸಿದ್ದ. ಆದರೆ ಜೈಲಿಗೆ ಹೋದವರಿಗೆ ನೀಲು ಮೇಲೆ ಮತ್ತಷ್ಟು ಹಗೆತನ ಹೆಚ್ಚಾಗಿತ್ತು. ಜೈಲ್‌ನಿಂದ ಬಂದವರು ಇನ್ನಷ್ಟು ಬಲ ಒಟ್ಟುಗೂಡಿಸಿ ನೀಲುವಿಗೆ ಸ್ಕೆಚ್ ತಯಾರಿಸಿದ್ದರು.
ಒಬ್ಬಂಟಿಯಾಗಿ ಹೊರಟ: ಕೊಲೆಯಾಗುವ ರಾತ್ರಿ 10 ಗಂಟೆ ವರೆಗೆ ತನ್ನ ಹಿಂಬಾಲಕರ ಜತೆ ನೀಲು ಮಡ್ಯಾರ್ ಜಂಕ್ಷನ್ ಬಳಿ ಕಾಲ ಕಳೆದಿದ್ದ.
  ಬಳಿಕ ಗೆಳೆಯ ಧೀರಜ್‌ನನ್ನು ಮನೆಗೆ ಬಿಟ್ಟು ಬಂದಿದ್ದ. ಮಡ್ಯಾರು ಬಳಿ ನಿನ್ನನ್ನು ಮುಗಿಸಲು ಹೊಂಚು ಹಾಕುತ್ತಿದ್ದಾರೆ ಎಂಬ ಗೆಳೆಯ ಎಚ್ಚರಿಕೆ ನೀಡಿದ್ದ. ತನಗೆ ಸ್ಕೆಚ್ ಹಾಕುವವರು ಯಾರು ಎಂದು ನೋಡಲು ನೀಲು ಒಣ ಧೈರ್ಯದಲ್ಲಿ ತನ್ನ ಆಲ್ಟೋ ಕಾರ್‌ನಲ್ಲಿ ತೆರಳಿದ್ದ. ಮಡ್ಯಾರ್ ದೇವಸ್ಥಾನ ಬಳಿ ಅಪರಿಚಿತ ಕಾರು ನಿಂತಿತ್ತು. ಇದನ್ನು ನೋಡಿ ನೀಲು ಕಾರ್‌ನಿಂದ ಇಳಿಯುತ್ತಿದ್ದಂತೆ 4-5 ಮಂದಿ ಸುತ್ತುವರಿದು ತಳವಾರ್‌ಗಳಿಂದ ಮುಖ, ಹೊಟ್ಟೆ, ಕೈಗೆ ಕಡಿದಿದ್ದಾರೆ.
 ನೀಲು ಹಿಂದೆ ಬೈಕ್‌ನಲ್ಲಿ ಬರುತ್ತಿದ್ದ ಸಂಪತ್ ಮತ್ತು ದಿನೇಶ್ ಕೊಲೆಯನ್ನು ನೋಡಿದ್ದು, ತಕ್ಷಣ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಗ್ಯ ಸಚಿವ ಯು.ಟಿ. ಖಾದರ್ ಕೊಲೆಯಾದ ಸ್ಥಳಕ್ಕೆ ತಡರಾತ್ರಿ ದೌಡಾಯಿಸಿದ್ದಾರೆ. ವಿಶೇಷ ಎಂದರೆ ಇನ್‌ಸ್ಪೆಕ್ಟರ್ ಮಾತ್ರ ಸ್ಥಳಕ್ಕೆ ಬರಲೇ ಇಲ್ಲ.
ಪ್ರಕರಣ ದಾಖಲು: ಮಡ್ಯಾರು ನಿವಾಸಿಗಳೇ ಆಗಿರುವ ಸಂತೋಷ, ಚಿದು ಯಾನೆ ಚಿದಾನಂದ, ತಲಪಾಡಿ ಕೃಷ್ಣ, ಜಗ್ಗು ಯಾನೆ ಜಗದೀಶ ಎಂಬವರ ವಿರುದ್ಧ  ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೌಡಿ ಶೀಟರ್: ಮಡ್ಯಾರ್, ಕೋಟೆಕಾರ್‌ನಲ್ಲಿ ರೌಡಿಸಂ ನಡೆಸುತ್ತಿದ್ದ ನೀಲು ವಿರುದ್ಧ 9 ಪ್ರಕರಣಗಳಿವೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ಕೂಡಾ ತೆರೆಯಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.