ಮಂಗಳೂರು ಅಂ.ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಟ್ರಾಫಿಕ್ ಕಂಟ್ರೋಲರ್
ಮಂಗಳೂರು: ಮಂಗಳೂರಿನ ಕೆಂಜಾರಿನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಸ್ವಯಂಚಾಲಿತ ಏರ್ ಟ್ರಾಫಿಕ್ ಕಂಟ್ರೋಲರ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಕಾರ್ಯಾರಂಭಗೊಂಡಿದೆ.
2010 ಮೇ 22ರಂದು ವಿಮಾನ ದುರಂತ ಸಂಭವಿಸಿದ ಬಳಿಕ ಈ ವಿಮಾನ ನಿಲ್ದಾಣದ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾಪಕ್ಕೆ ಜೀವಬಂದಿತ್ತು. ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ನಿರ್ದೇಶನ ಮೇರೆಗೆ ಹಲವು ಸುಧಾರಣಾ ಕ್ರಮ ಕೈಗೊಂಡಿದ್ದು, ಅದರಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ ವ್ಯವಸ್ಥೆ ಅಳವಡಿಸುವುದೂ ಸೇರಿತ್ತು. ಇದರಿಂದ ವಿಮಾನ ಆಗಮನ, ನಿರ್ಗಮನ ವ್ಯವಸ್ಥೆಯನ್ನು ಉನ್ನತೀಕರಿಸಿದಂತಾಗಿದೆ.
ರಾಡಾರ್ ಮೂಲಕ ಗಾಳಿಯ ಸಂಚಲನ, ವಿಮಾನ ಹಾರಾಟದ ಎತ್ತರ, ಗಾಳಿ ಬೀಸುವ ದಿಕ್ಕು ಸೇರಿದಂತೆ ಗಾಳಿ-ನೆಲ ನಡುವಿನ ಅಂತರದ ಡಾಟಾ ಲಿಂಕ್ ಸಂದೇಶವನ್ನು ಟ್ರಾಫಿಕ್ ಕಂಟ್ರೋಲರ್ ಕಳುಹಿಸಲಿದೆ. ವಿಮಾನ ಸಂಚಾರ ನಿಯಂತ್ರಣಕ್ಕೆ ಅಗತ್ಯವಾದ ಸಂದೇಶವನ್ನು ಇದರಿಂದ ನೀಡಬಹುದಾಗಿದ್ದು, ಬೆಂಗಳೂರು, ಚೆನ್ನೈ, ತ್ರಿವೆಂಡ್ರಂನಲ್ಲಿರುವ ರಾಡಾರ್ಗಳಂತೆ ಈ ವಿಮಾನ ನಿಲ್ದಾಣದ ರಾಡಾರ್ ಕೂಡ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ಆಗಸದಲ್ಲಿ ಅಪಾಯ ಸಂದರ್ಭದಲ್ಲೂ ಸೂಕ್ತ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯನ್ನು ಟ್ರಾಫಿಕ್ ಕಂಟ್ರೋಲರ್ ಹೊಂದಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶಕ ರಾಧಾಕೃಷ್ಣ ತಿಳಿಸಿದ್ದಾರೆ.
ನಾಳೆಯಿಂದ ಹಜ್ ಯಾತ್ರೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ ಸಾಲಿನ ಹಜ್ ಯಾತ್ರೆ ವಿಮಾನ ಸಂಚಾರ ಸೆ.7ರಿಂದ 12ರ ವರೆಗೆ ಏರ್ಪಡಿಸಿದೆ. 6 ದಿನಗಳ ಕಾಲ ಬೆಳಗ್ಗೆ 3.30ಕ್ಕೆ ವಿಶೇಷ ವಿಮಾನ ಹಜ್ಗೆ ಹೊರಡಲಿದ್ದು, ಈ ಬಾರಿ 980 ಯಾತ್ರಿಕರು ಹಜ್ ಪ್ರವಾಸ ಕೈಗೊಳ್ಳಲಿದ್ದಾರೆ. ಬಜ್ಪೆಯ ಹಳೆ ವಿಮಾನ ನಿಲ್ದಾಣದಲ್ಲಿ ಹಜ್ ಯಾತ್ರಿಕರ ಶಿಬಿರಕ್ಕೆ ಅವಕಾಶ ಕಲ್ಪಿಸಿದ್ದು, ಕೆಂಜಾರು ನಿಲ್ದಾಣದಿಂದ ದ.ಕ, ಉಡುಪಿ, ಮಡಿಕೇರಿ, ಚಿಕ್ಕಮಗಳೂರು, ಹಾಸನ ಹಾಗೂ ಇತರ ಜಿಲ್ಲೆಗಳ ಯಾತ್ರಿಕರು ಹಜ್ ಯಾನ ಕೈಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

