ದಕ್ಷಿಣ ಕನ್ನಡ

ಕಳವು: ಸಿಸಿ ಕ್ಯಾಮೆರಾದಲ್ಲಿ ಸಿಕ್ಕಿ ಬಿದ್ದವಗೆ ಗೂಸಾ

Published On :

ಮಂಗಳೂರು: ತೊಕ್ಕೊಟ್ಟು ಜಂಕ್ಷನ್ ಬಳಿ ಒಮೆಗಾ ಟೈಲರ್ಸ್ ಮಳಿಗೆಯಲ್ಲಿನ ಹಣ ಕದ್ದ ಮೆಡಿಕಲ್ ರೆಪ್‌ಗೆ ಸಾರ್ವಜನಿಕರು ಗೂಸಾ ನೀಡಿದ್ದಾರೆ. ಸೆ.4ರಂದು ಮಧ್ಯಾಹ್ನ 1.30ರ ವೇಳೆಗೆ ಯಾರು ಇಲ್ಲದ ವೇಳೆ ಮಳಿಗೆಯಲ್ಲಿ ಇರಿಸಿದ್ದ ನಗದು ಲಪಟಾಯಿಸಿದ್ದ. ಇದು ಸಿ.ಸಿ. ಕ್ಯಾಮೆರಾದಲ್ಲಿ ದಾಖಲಾಗಿತ್ತು. ಶನಿವಾರ ಮೆಡಿಕಲ್ ರೆಪ್ ಅಶೋಕ ಆ ಕಡೆ ಬಂದಾಗ ಮಾಲೀಕ ಮತ್ತಿತರರು ಒಟ್ಟು ಸೇರಿ ತದಕಿದ್ದಾರೆ. ಬಳಿಕ ಆರೋಪಿಯನ್ನು ಉಳ್ಳಾಲ ಪೊಲೀಸರ ವಶಕ್ಕೆಒಪ್ಪಿಸಲಾಗಿದೆ. ಆರೋಪಿ ವಿರುದ್ಧ ಕಳ್ಳತನ ಪ್ರಕರಣ ದಾಖಲಾಗಿದೆ.
ಹೋಮ್‌ಸ್ಟೇ ದಾಳಿ: ನಿರೀಕ್ಷಣಾ ಜಾಮೀನು
ಮಂಗಳೂರು: ಪಡೀಲ್ ಹೋಮ್‌ಸ್ಟೇ ಪ್ರಕರದಲ್ಲಿ ದೀಕ್ಷಿತ್ ರಾಜ್‌ಗೆ ನಿರೀಕ್ಷಣಾ ಜಾಮೀನು ಲಭಿಸಿದೆ. ಮಾಜಿ ಕಾರ್ಪೊರೇಟರ್ ಮೋಹನ್ ಪಡೀಲ್ ಅವರ ಮಗ ದೀಕ್ಷಿತ್‌ರಾಜ್ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಆದರೆ ದಸ್ತಗಿರಿ ಆಗದ ಆರೋಪಿಗಳು ಎಂದು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ಜಿಲ್ಲಾ ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯ ಜಾಮೀನು ನೀಡಿ ಆದೇಶ ಹೊರಡಿಸಿದೆ. ಆರೋಪಿ ಪರವಾಗಿ  ವಕೀಲ ಅರುಣ್ ಬಂಗೇರ ವಾದಿಸಿದ್ದರು.
ಜಿಗುಪ್ಸೆ: ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ
ಮಣಿಪಾಲ: ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ 80 ಬಡಗುಬೆಟ್ಟು ಗ್ರಾಮದ ಮಂಚಿಕೆರೆ ಬಳಿ ಶನಿವಾರ ನಡೆದಿದೆ. ಪಲ್ಲವಿ (24) ಮೃತರು. ಇವರಿಗೆ ಆಗಾಗ ತಲೆನೋವು ಬರುತ್ತಿದ್ದು, ಚಿಕಿತ್ಸೆ ಮಾಡಿದರೂ ಗುಣಮುಖವಾಗದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಚೂಡಿದಾರದ ಶಾಲನ್ನು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಪತಿ ಅಶೋಕ ಅಮೀನ್ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷ ಸೇವಿಸಿ ಆತ್ಮಹತ್ಯೆ
ಉಪ್ಪಿನಂಗಡಿ: ಕಡಬ ಠಾಣಾ ವ್ಯಾಪ್ತಿಯ ಬಂಟ್ರ ಗ್ರಾಮದಲ್ಲಿ ವೃದ್ಧ ಶಿವಪ್ಪ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.  ಬಂಟ್ರ ಗ್ರಾಮದ ಕುತ್ಯಳಾ ಕಾಯಂದೂರು ನಿವಾಸಿ ಶಿವಪ್ಪ  ಪಕ್ಷವಾತದಿಂದ ಬಳಲುತ್ತಿದ್ದ ಅವರು ಗುಣಮುಖವಾಗದೆ ಇರುವುದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪುತ್ರ ಜಗದೀಶ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮದ್ಯ ಮಾರಾಟ: ಆರೋಪಿ ಖುಲಾಸೆ
ಸುಳ್ಯ: ಮದ್ಯ ಮಾರಾಟ ಆರೋಪಿಯನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ. 2008ರ ಆ. 25ರಂದು ಮರ್ಕಂಜ ಗ್ರಾಮದ ಪಟ್ಟೆಮನೆ ಎಂಬಲ್ಲಿ ಆರೋಪಿ ಎನ್.ಎಸ್. ವೆಂಕಪ್ಪ ಗೌಡ ಅವರು ಮದ್ಯದ ಬಾಟಲಿಗಳನ್ನು ಅಕ್ರಮವಾಗಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪಿ ಮೇರೆಗೆ ಸುಳ್ಯ ಅಬಕಾರಿ ಉಪನಿರೀಕ್ಷಕರು ಮಾಲು ಸಮೇತ ಆರೋಪಿಯನ್ನು ಬಂಧಿಸಿ ಅವರ ವಿರುದ್ಧ ಕೇಸು ದಾಖಲಿಸಿಕೊಂಡು, ಬಳಿಕ ಆರೋಪಿಯ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸುಳ್ಯ ನ್ಯಾಯಲಯಕ್ಕೆ ಸಲ್ಲಿಸಲಾಗಿತ್ತು. ಸುಳ್ಯ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗದೆ ಇರುವುದರಿಂದ ಆರೋಪಿಯನ್ನು ದೋಷಮುಕ್ತಗೊಳಿಸಲಾಗಿದೆ. ಆರೋಪಿ ಪರವಾಗಿ ಎಂ. ವೆಂಕಪ್ಪ ಗೌಡ ಹಾಗೂ ಚಂಪಾ ವಿ. ಗೌಡ ವಾದಿಸಿದ್ದರು.
ಪುತ್ತೂರು ಪೊಲೀಸರಿಗೆ ಬೇಕಾಗಿದ್ದ
ಆರೋಪಿಗಳು ಮಾದಾಪುರದಲ್ಲಿ ಸೆರೆ
ಸೋಮವಾರಪೇಟೆ: ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪೊಲೀಸರಿಗೆ ಬೇಕಾಗಿದ್ದ ಇಬ್ಬರು ಆರೋಪಿಗಳನ್ನು ತಾಲೂಕಿನ ಮಾದಾಪುರದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿ, ಪುತ್ತೂರಿನ ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ.
ತಾವು ಪೊಲೀಸರೆಂದು ಹೇಳಿಕೊಂಡು ಪುತ್ತೂರಿನಲ್ಲಿ ಸಾರ್ವಜನಿಕರಿಂದ ಹಫ್ತಾ ವಸೂಲಿ ಮಾಡುತ್ತಿದ್ದ ಇಬ್ಬರು ಖದೀಮರು ಕಳೆದ 4 ದಿನಗಳ ಹಿಂದೆ ತಾಲೂಕಿನ ಮಾದಾಪುರಕ್ಕೆ ಆಗಮಿಸಿ ಜಂಬೂರು ಬಾಣೆಯ ಮನೆಯೊಂದರಲ್ಲಿ ತಂಗಿದ್ದರನ್ನಲಾಗಿದೆ. ಇವರ ಚಲನವಲನಗಳ ಮೇಲೆ ಸಂಶಯಗೊಂಡ ಸ್ಥಳೀಯರು ಮಾದಾಪುರ ಪೊಲೀಸ್ ಉಪಠಾಣೆಯ ಮುಖ್ಯಪೇದೆ ಬಾಲಕೃಷ್ಣ ಎಂಬವರಿಗೆ ಮಾಹಿತಿ ನೀಡಿದರು. ಈ ಮಾಹಿತಿಯನ್ನಾಧರಿಸಿದ ಮಾದಾಪುರ ಉಪಠಾಣೆಯ ಮುಖ್ಯಪೇದೆ ಬಾಲಕೃಷ್ಣ ಮತ್ತು ಜಗದೀಶ್ ಹಾಗೂ ಮಂಜುನಾಥ್ ಅವರು ಸೋಮವಾರಪೇಟೆ ಪೊಲೀಸ್ ಉಪನಿರೀಕ್ಷಕ ಎಸ್.ಎಸ್. ರವಿಕಿರಣ್ ಅವರ ಮಾರ್ಗದರ್ಶನದಂತೆ ಪುತ್ತೂರಿನ ನಿವಾಸಿಗಳೆನ್ನಲಾದ ಹಾಗೂ ಅಲ್ಲಿನ ಪೊಲೀಸರಿಂದ ತಲೆತಪ್ಪಿಸಿಕೊಂಡಿದ್ದ ಅಶ್ರಫ್ ಹಾಗೂ ಕರೀಂ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪುತ್ತೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಇವರ ಮೇಲೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಹಫ್ತಾ ವಸೂಲಿ ಸೇರಿದಂತೆ ಇತರ ಪ್ರಕರಣಗಳಿರುವುದು ತಿಳಿದು ಬಂದಿದೆ. ಇದರೊಂದಿಗೆ ಜಾನುವಾರು ಸಾಗಿಸುತ್ತಿದ್ದ ಪ್ರಕರಣವೊಂದರಲ್ಲಿ ಅಶ್ರಫ್‌ನ ಮೇಲೆ ಕೇರಳದಲ್ಲೂ ಒಂದು ಮೊಕದ್ದಮೆ ದಾಖಲಾಗಿದೆ ಎಂದು ಪುತ್ತೂರು ಪೊಲೀಸರು ತಿಳಿಸಿದ್ದಾರಲ್ಲದೆ, ಅವರು ಸೋಮವಾರಪೇಟೆಗೆ ಬಂದು ಆರೋಪಿಗಳಿಬ್ಬರನ್ನು ಪುತ್ತೂರಿಗೆ ಕರೆದೊಯ್ದಿದ್ದಾರೆ.
ವರದಕ್ಷಿಣೆ ಕಿರುಕುಳ: ಆರೋಪಿಗೆ ನ್ಯಾಯಾಂಗ ಬಂಧನ
ಮೂಲ್ಕಿ: ವರದಕ್ಷಿಣೆ ತರುವಂತೆ ಫಹಮಿದಾ ರಿಜ್ವಾನ್‌ಗೆ ಕಿರುಕುಳ ನೀಡುತ್ತಿದ್ದ ಆಕೆಯ ಪತಿ ಅಹಮ್ಮದ್ ಹುಸೇನ್‌ಗೆ 20 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಫಹಮಿದಾ ರಿಜ್ವಾನ್ ಎಂಬವರನ್ನು ಕೆಲವು ವರ್ಷಗಳ ಹಿಂದೆ ಮೂಲ್ಕಿಯ ಪೊಲೀಸ್ ಠಾಣೆ ವ್ಯಾಪ್ತಿಯ ಪುನರೂರಿನ ನಿವಾಸಿ ಅಹಮ್ಮದ್ ಹುಸೇನ್ ಮುಸ್ಲಿಂ ಸಂಪ್ರದಾಯದಂತೆ ಕುಂದಾಪುರದಲ್ಲಿ ವಿವಾಹವಾಗಿದ್ದರು. ವಿವಾಹದ ಸಂದರ್ಭದಲ್ಲಿ 65 ಪವನ್ ಚಿನ್ನ, 3 ಲಕ್ಷ ನಗದು ಹಾಗೂ 2 ಲಕ್ಷ ಮೌಲ್ಯದ ಉಡುಗೊರೆ ನೀಡಲಾಗಿತ್ತು. ಗಂಡನ ಮನೆಯಲ್ಲಿ ಗಂಡ ಹಾಗೂ ಮನೆಯವರು ಸೇರಿದಂತೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದು, ಗಂಡ ವಿದೇಶಕ್ಕೆ ಹೋದ ಬಳಿಕ ಮನೆಯವರು 50 ಪವನ್ ಚಿನ್ನ ತರಬೇಕು ಎಂದು ಫಹಮಿದಾ ರಿಜ್ವಾನ್‌ಗೆ ಒತ್ತಾಯಿಸುತ್ತಿದ್ದರು. ಗಂಡನೊಂದಿಗೆ ವಿದೇಶಕ್ಕೆ ಹೋಗಿದ್ದ ಫಹಮಿದಾಗೆ ಅಲ್ಲಿಯು ಗಂಡ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಮೂಲ್ಕಿ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಲಾಗಿದೆ. ಮೂಡಬಿದ್ರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ಆದೇಶದಂತೆ ಆರೋಪಿ ಅಹಮ್ಮದ್ ಹುಸೇನ್‌ನನ್ನು 20 ದಿನಗಳ ನ್ಯಾಯಾಂಗ ಕಸ್ಟಡಿಗೆ ಮೂಲ್ಕಿ ಪೊಲೀಸರು ಒಪ್ಪಿಸಿದ್ದಾರೆ.
ಮೋರಿಯೊಳಗೆ ತಲೆ ತುರುಕಿದ ಸ್ಥಿತಿಯಲ್ಲಿ ವ್ಯಕ್ತಿ ಮೃತದೇಹ ಪತ್ತೆ
ಬಂಟ್ವಾಳ: ನೀರು ಹರಿಯುವ ಮೋರಿಯೊಳಗೆ ತಲೆಯನ್ನು ತುರುಕಿಸಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಅನುಮಾನಸ್ಪಾದ ರೀತಿಯಲ್ಲಿ ವೀರಕಂಭ ಗ್ರಾಮದಲ್ಲಿ ಶನಿವಾರ ಪತ್ತೆಯಾಗಿದೆ. ಇಲ್ಲಿನ ಮೈರ ನಿವಾಸಿ ವೆಂಕಪ್ಪ ಪೂಜಾರಿ ಅವರ ಪುತ್ರ ಕೂಲಿ ಕಾರ್ಮಿಕ ನಾಗೇಶ್ ಪೂಜಾರಿ(46) ಅನುಮಾನಾಸ್ಪದವಾಗಿ ಮೃತಪಟ್ಟವರು. ಶನಿವಾರ ಮಧ್ಯಾಹ್ನ ವೀರಕಂಭ ಗ್ರಾಮದ ಅನಂತಾಡಿ ರಸ್ತೆ ಬದಿಯಲ್ಲಿರುವ ನೀರು ಹ ರಿಯುತ್ತಿರುವ ಮೋರಿಯೊಳಗೆ ತಲೆಯನ್ನು ತುರುಕಿಸಿದ ರೀತಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತ ವ್ಯಕ್ತಿ ಕಂಠಪೂರ್ತಿ ಮದ್ಯ ಸೇವಿಸುತ್ತಿದ್ದು, ಈ ಸಂದರ್ಭ ಅವರು ತಮ್ಮ ತೋಟಕ್ಕೆ ನೀರು ಬಿಡಲು ಹೋದಾಗ ಈ ಘಟನೆ ಸಂಭವಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ವಿಟ್ಲ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ.
ಗಾಂಜಾ ವಶ; ಇಬ್ಬರ ಸೆರೆ
ಉಡುಪಿ: ಇಲ್ಲಿನ ಕುಂಜಿಬೆಟ್ಟು ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ ಮುಂಭಾಗ ದ್ವಾರದ ಬಳಿಯಲ್ಲಿರುವ ಬಸ್ ನಿಲ್ದಾಣದ ಹತ್ತಿರದಲ್ಲಿ ಆರೋಪಿಗಳಾದ ಇಮ್ತಿಯೂಜ್ ಬಿನ್ ಯೂಸಫ್, ಸಂತೋಷ್ ಕುಮಾರ ಎಂಬವರಿಂದ 45 ಗ್ರಾಂ. ಗಾಂಜಾ ವಶಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿದ ಪ್ರಕರಣ ಗುರುವಾರ ನಡೆದಿದೆ. ಅಬಕಾರಿ ಉಪ ಆಯುಕ್ತ ಜಾರ್ಜ್ ಪಿಂಟೋ ಮಾರ್ಗದರ್ಶನದಲ್ಲಿ ಉಪವಿಭಾಗದ ಉಪ ಅಧೀಕ್ಷಕ ವಿನೋದ್ ಕುಮಾರ್ ನಿರ್ದೇಶನದಂತೆ ಅಬಕಾರಿ ನೀರಿಕ್ಷಕಿ ಸೌಮ್ಯಲತಾ ಎನ್., ಉಪನಿರೀಕ್ಷಕರಾದ ನಾರಾಯಣ ಕೆ. ಹಾಗೂ ಚಂದ್ರಶೇಖರ್ ನಾಯಕ್, ಅಬಕಾರಿ ರಕ್ಷಕರಾದ ಸುಧಾಕರ, ದಿನಕರ ಹಾಗೂ ವಾಹನ ಚಾಲಕರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು. ಸೌಮ್ಯಲತಾ ಎನ್. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಸ್‌ಗೆ ಬೈಕ್ ಡಿಕ್ಕಿ; ಸವಾರ ಗಂಭೀರ
ಬಂಟ್ವಾಳ: ಲಾರಿಯನ್ನು ಹಿಂದಿಕ್ಕುವ ಭರದಲ್ಲಿದ್ದ ಬೈಕ್ ಬಸ್‌ಗೆ ಡಿಕ್ಕಿ ಹೊಡೆದ ಘಟನೆ ವಿಟ್ಲ ಸಮೀಪದ ಕಾಶೀಮಠ ತಿರುವಿನಲ್ಲಿ ನಡೆದಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಳಿಕೆ ಸಮೀಪದ ಕಲ್ಲಜೇರ ನಿವಾಸಿ ಅಶೋಕ್ ಕಲ್ಲಜೇರ (38) ಗಾಯಗೊಂಡವರು. ವಿಟ್ಲದಿಂದ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ತಮ್ಮ ಮುಂದೆ ಸಾಗುತ್ತಿದ್ದ ಲಾರಿಯನ್ನು ಹಿಂದಿಕ್ಕುತ್ತಿದ್ದ ಸಂದರ್ಭ ಎದುರಿನಿಂದ ಬಂದ ಬಸ್ಸಿಗೆ ಡಿಕ್ಕಿ ಹೊಡೆದಿದ್ದಾರೆ.. ಘಟನೆಯ ತೀವ್ರತೆಗೆ ಬೈಕ್ ಬಸ್ ಅಡಿಗೆ ನುಗ್ಗಿದ್ದು, ಸವಾರನ ಮುಖದ ಭಾಗಕ್ಕೆ ತೀವ್ರ ಗಾಯಗಳಾಗಿವೆ. ವಿಟ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಪುತ್ತೂರು ಖಾಸಗಿ  ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.