ದಿನವಿಡೀ ರಾಮಧ್ಯಾನ ಮಾಡದೆ ರಾಮಕಥೆಗೆ ಬರುವುದು ವ್ಯರ್ಥ: ರಾಘವೇಶ್ವರ ಸ್ವಾಮೀಜಿ
ವಿಟ್ಲ: ರಾಮಕಥೆಯನ್ನು ದೊಡ್ಡವರ ಮುಂದೆ ಮಾಡಬಹುದು, ಆದರೆ ಎಳೆಯ ಮಕ್ಕಳೆದುರು ಪ್ರಸ್ತುತಪಡಿಸುವುದು ಕಷ್ಟ. ನಾವು ಅನ್ನವನ್ನು ಎಷ್ಟು ಬೇಕೋ ಅಷ್ಟು ತಿನ್ನುತ್ತೇವೆ ಎಂದರೆ ರಾಮ ಒಪ್ಪುವುದಿಲ್ಲ. ನಮ್ಮ ದೇಹಕ್ಕೆ ಬೇಕಾದಷ್ಟನ್ನು ತಿಂದು ಉಳಿದ ಅನ್ನವನ್ನು ಹಸಿದವರಿಗೆ ನೀಡುವ ಕಾರ್ಯ ಮಾಡಬೇಕು. ದಿನವಿಡೀ ರಾಮಧ್ಯಾನ ನಡೆಯದೇ ರಾಮಕಥೆಗೆ ಬರುವುದು ವ್ಯರ್ಥ ಎಂದು ಶ್ರೀ ರಾಘವೇಶ್ವರ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಮಾಣಿಯ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ಚಾತುರ್ಮಾಸ್ಯದ ಅಂಗವಾಗಿ ಹಮ್ಮಿಕೊಂಡ ತೃತೀಯ ರಾಮಕಥಾ ಸರಣಿಯ ಆರನೇ ದಿನ ಪ್ರವಚನ ನೀಡಿದರು.
ರಾವಣನ ಪುಷ್ಪಕ ವಿಮಾನದ ಆಡಂಬರವನ್ನು ವಿವರಿಸಿದ ಶ್ರೀಗಳು, ಭಾರತದ ಸಾಧನೆಗಳನ್ನು, ಸತ್ಯಗಳನ್ನು ಬ್ರಿಟಿಷರು ತಿರುಚಿದರು. ಅತ್ಯಂತ ಶ್ರೇಷ್ಠವಾದ ಸಾಧನೆಗಳನ್ನು ಮಾಡಿದ ಭಾರತೀಯರನ್ನು ಕಡೆಗಣಿಸಲಾಯಿತು. ಭಾರತದಲ್ಲಿ ಸಹಸ್ರಾರು ವರ್ಷಗಳ ಹಿಂದೆಯೇ ವಿಮಾನಗಳ ಬಗ್ಗೆ ಉಲ್ಲೇಖಗಳಿವೆ. ಯಂತ್ರ ಸರ್ವಸ್ವ ಎಂಬ 8 ಅಧ್ಯಾಯಗಳಲ್ಲಿ ಭಾರದ್ವಾಜ ಮಹರ್ಷಿ ಈ ಬಗ್ಗೆ ವಿಸ್ತಾರವಾಗಿ ಬರೆದಿದ್ದರು. ವಿಮಾನಕ್ಕೆ ಮೂರು ಪ್ರಬೇಧಗಳು, 4 ವಿನ್ಯಾಸಗಳು, ಸೌರಶಕ್ತಿ, ಗುರುತ್ವಾಕರ್ಷಣೆಯ ಬಗ್ಗೆ ಸ್ಪಷ್ಟವಾಗಿ ನಮೂದಿಸಲಾಗಿತ್ತು. ವಿಮಾನಕ್ಕೆ ಮೂರು ಚಕ್ರಗಳೆಂಬುದು ಋಗ್ವೇದದಲ್ಲಿದೆ. ಪಂಡಿತ ಸುಬ್ರಾಯ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ವೇದಗಳ ದಾಖಲೆಗಳನ್ನುದ್ಧರಿಸಿ, ಶಿವಕರ ಬಾಪೂಜಿ ತಲಪಾಡಿ ಅವರು 1895ರಲ್ಲಿ ಮುಂಬೈನಲ್ಲಿ ಹಾರಿಸಿದ ವಿಮಾನ 1200 ಅಡಿ ಎತ್ತರಕ್ಕೆ ಹಾರಿತ್ತು. ಆದರೆ ಬಳಿಕ 1903ರಲ್ಲಿ ರೈಟ್ಸ್ ಸಹೋದರರು ವಿಮಾನ ಹಾರಿಸಿದರು ಎಂದು ಹೇಳಲಾಯಿತು ಎಂದು ತಿಳಿಸಿದರು.
ಕಥೆಯಲ್ಲಿ ಆಂಜನೇಯನು ಮೂರನೇ ಬಾರಿ ರಾವಣನ ಅರಮನೆಗೆ ಪ್ರವೇಶಿಸುತ್ತಾನೆ. ಪುಷ್ಪಕ ವಿಮಾನದಲ್ಲಿ ಆತನ ಇರವನ್ನು ಗುರುತಿಸುತ್ತಾನೆ. ಆತನ 7 ಸಾವಿರ ಪತ್ನಿಯರು ಅಲ್ಲಲ್ಲಿ ಮಲಗಿರುವುದನ್ನು ಆತನ ಪಕ್ಕದಲ್ಲಿ ಮಲಗಿರುವ ಸ್ತ್ರೀಯನ್ನು ಗಮನಿಸಿ ಸೀತೆಯೇ ಇರಬೇಕೆಂದು ಊಹಿಸುತ್ತಾನೆ, ಬಳಿಕ ಮಂಡೋದರಿಯೆಂದು ಖಚಿತಪಡಿಸಿಕೊಳ್ಳುತ್ತಾನೆ. ಪುಷ್ಪಕ ವಿಮಾನದ ವೈಭವವನ್ನು ಕಂಡು ಬೆರಗಾಗುತ್ತಾನೆ ಎಂದು ಶ್ರೀಗಳು ವಿವರಿಸಿದರು.
ರೂಪಕದಲ್ಲಿ ಆಂಜನೇಯ ಮಂಡೋದರಿಯನ್ನು ಗಮನಿಸಿ ಸೀತೆಯೆಂದು ಸಂಭ್ರಮಿಸುವ ದೃಶ್ಯ ಮತ್ತು ಪುಷ್ಪಕ ವಿಮಾನವನ್ನು ರಾವಣ ಮೋಸದಿಂದ ಅಣ್ಣ ಕುಬೇರನ ಜತೆ ಹೋರಾಡಿ ವಶಪಡಿಸಿಕೊಳ್ಳುವುದನ್ನು ಪ್ರಸ್ತುತ ಪಡಿಸಲಾಯಿತು. ಗಾಯಕರ ಸಾಲಲ್ಲಿ ಸೀತಾಪ್ರಜ್ಞ, ಸ್ವೀಕೃತಿ ಸೇರ್ಪಡೆಗೊಂಡಿದ್ದರು. ಕಾರ್ಕಳ ಬೈಲೂರು ಮಠ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ವಿನಾಯಕಾನಂದಜೀ ರಾಮಕಥೆಯನ್ನು ವೀಕ್ಷಿಸಿದರು. ವಿದ್ವಾನ್ ಗಜಾನನ ಶರ್ಮಾ ಪ್ರಸ್ತಾವನೆಗೈದರು. ಹಿರಣ್ಯ ಗಣಪತಿ ಭಟ್, ಮಡಿಕೇರಿ ಪುರುಷೋತ್ತಮ ಭಟ್ ರಾಮಕಥಾದ ಪ್ರಾಯೋಜಕತ್ವ ವಹಿಸಿದ್ದರು. ಪ್ರಸನ್ನ ಎನ್. ಭಟ್ ಬಲ್ನಾಡು, ಶಾಂತಾರಾಮ ಭಟ್ ಕಾಂಚನ, ಡಾ. ರಾಮಚಂದ್ರ ಭಟ್ ಹಾರಕರೆ, ವೆಂಕಟಕೃಷ್ಣ ಪುತ್ತೂರು ಸಹಪ್ರಾಯೋಜಕತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

