ಸಜೀಪಮುನ್ನೂರು: ಮದುವೆಗೆ ಬಂದ ಸ್ನೇಹಿತ ನೀರುಪಾಲಾದ
ಬಂಟ್ವಾಳ: ಸ್ನೇಹಿತನ ಮದುವೆಗೆಂದು ಬಂದಿದ್ದ ಯುವಕನೇತ್ರಾವತಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋದ ಘಟನೆ ಇಲ್ಲಿನ ಸಜೀಪಮುನ್ನೂರು ಗ್ರಾಮದ ಮಂಜಲ್ಪಾದೆ ಎಂಬಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ನೀರುಪಾಲಾದ ಯುವಕನನ್ನು ಕಡೇಶ್ವಾಲ್ಯ ಗ್ರಾಮದ ಪ್ರವೀಣ್ ಕುಲಾಲ್ (20) ಎಂದು ಗುರುತಿಸಲಾಗಿದೆ. ಈತನೊಂದಿಗೆ ನದಿಗೆ ಸ್ನಾನಕ್ಕೆ ಇಳಿದಿದ್ದ ಕಿರಣ್ ಅಮ್ಟೂರು, ಅಜಯ್ ಹೊನ್ನಾವರ ಹಾಗೂ ಕಮಲಾಕ್ಷ ಶಾಂತಿಗುಡ್ಡೆ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆ ವಿವರ: ಮಂಜಲ್ಪಾದೆಯ ದುಗ್ಗಪ್ಪ ಪೂಜಾರಿ ಎಂಬವರ ಪುತ್ರ ಹರೀಶ್ ಎಂಬವರಿಗೆ ಭಾನುವಾರ ಕಟೀಲಿನಲ್ಲಿ ವಿವಾಹ ನಿಗದಿಯಾಗಿತ್ತು. ಕಟೀಲಿನಲ್ಲಿ ಮದುವೆ ಮುಗಿಸಿ ಮೆಲ್ಕಾರ್ನ ಕಲ್ಯಾಣ ಮಂಟಪವೊಂದರಲ್ಲಿ ಮಧ್ಯಾಹ್ನ ಔತಣಕೂಟ ಏರ್ಪಡಿಸಲಾಗಿತ್ತು. ಸ್ನೇಹಿತ ಹರೀಶ್ ಮದುವೆಗಾಗಿ ಪ್ರವೀಣ್ ಶನಿವಾರ ಸಂಜೆಯೇ ಮಂಜಲ್ಪಾದೆಯ ಮನೆಗೆ ಬಂದಿದ್ದ.
ಭಾನುವಾರ ಬೆಳಗ್ಗೆ ಮದುವೆಯ ದಿಬ್ಬಣ ಕಟೀಲಿನತ್ತ ಹೊರಟ ಬಳಿಕ ಪ್ರವೀಣ್, ಹರೀಶ್ ಹಾಗೂ ಮದುವೆಗೆಂದು ಬಂದಿದ್ದ ಕಿರಣ್, ಅಜಯ್, ವಿಜಯ್, ಕಮಲಾಕ್ಷ ಜೊತೆ ನೇತ್ರಾವತಿ ನದಿಗೆ ಸ್ನಾನಕ್ಕೆ ಇಳಿದಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಕ್ಕ ಪ್ರವೀಣ್ ಕೊಚ್ಚಿಹೋಗಿದ್ದು, ಆತನ ರಕ್ಷಣೆಗೆ ಕಮಲಾಕ್ಷ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ.
ನೀರಿನ ಅಬ್ಬರಕ್ಕೆ ಸಿಲುಕಿ ಅಸ್ವಸ್ಥಗೊಂಡಿದ್ದ ಕಮಲಾಕ್ಷನನ್ನು ಸ್ನೇಹಿತರಾದ ವಿಜಯ್, ಅಜಯ್ ಹಾಗೂ ಕಿರಣ್ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರು. ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋದ ಪ್ರವೀಣ್ಗಾಗಿ ಸ್ಥಳೀಯರು, ಅಗ್ನಿಶಾಮಕದಳ ವ್ಯಾಪಕ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗಿಲ್ಲ.
ಮದುವೆಗೆ ಬಂದವ ಮಸಣ ಸೇರಿದ: ಪ್ರವೀಣ್ ಮಂಗಳೂರಿನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ಈ ಹಿಂದೆ ಕೆಲ ತಿಂಗಳ ಕಾಲ ಮಡಿಕೇರಿಯಲ್ಲಿ ಹರೀಶ್ ಜೊತೆ ಕೆಲಸ ನಿರ್ವಹಿಸಿದ್ದ.
ಆ ಸ್ನೇಹದಲ್ಲಿ ಹರೀಶ್ ಮನೆಗೆ ಬಂದಿದ್ದ ಪ್ರವೀಣ್ ತನ್ನ ಸಂಬಂಧಿ ವಿಜಯ್ ಎಂಬಾತನನ್ನೂ ಮದುವೆ ಮನೆಗೆ ಕರೆದುಕೊಂಡು ಬಂದಿದ್ದ. ಚಂದ್ರಹಾಸ ಕುಲಾಲ್ ಹಾಗೂ ಬೇಬಿ ದಂಪತಿಯ ಇಬ್ಬರು ಪುತ್ರರ ಪೈಕಿ ಪ್ರವೀಣ್ ಹಿರಿಯವ. ಮದುವೆಗೆಂದು ಬಂದವ ಮಸಣ ಸೇರಿದ ಈ ಘಟನೆಯಿಂದ ಚಂದ್ರಹಾಸರ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ಪೊಲೀಸರು ತಡವಾಗಿ ಬಂದರು: ಬೆಳಗ್ಗೆ 8 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದರೂ ಪೊಲೀಸರು ಘಟನಾ ಸ್ಥಳಕ್ಕೆ ತಲುಪುವಾಗ ಮಧ್ಯಾಹ್ನ ಒಂದು ಗಂಟೆಯಾಗಿತ್ತು. ಈ ನಡುವೆ ಸ್ಥಳಕ್ಕೆ 9.30ರ ಸುಮಾರಿಗೆ ಆಗಮಿಸಿದ್ದ ಅಗ್ನಿಶಾಮಕದಳದ ಸಿಬ್ಬಂದಿ ನೀರುಪಾಲಾದ ಪ್ರವೀಣನ ಹುಡುಕಾಟಕ್ಕೆ ಕಾರ್ಯಾಚರಣೆ ನಡೆಸಿದರಾದರೂ, ತಮ್ಮ ಬೋಟ್ನಲ್ಲಿ ಶೋಧಕಾರ್ಯ ಅಸಾಧ್ಯ ಎಂದು 12 ಗಂಟೆಯ ಸುಮಾರಿಗೆ ವಾಪಸ್ ತೆರಳಿದರು.
ಒಂದೆಡೆ ಪೊಲೀಸರಿಲ್ಲ, ಇನ್ನೊಂದೆಡೆ ಇದ್ದ ಅಗ್ನಿಶಾಮಕ ದಳದವರೂ ಹೆಚ್ಚು ಹುಡುಕಾಟ ನಡೆಸದೆ ಬೇಗ ಹೊರಟಾಗ ಆಕ್ರೋಶಗೊಂಡ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ಅಗ್ನಿಶಾಮಕ ದಳದವರು ತೆರಳಿದ ಬಳಿಕ ಸ್ಥಳೀಯರು ಸಂಜೆಯ ತನಕ ಪ್ರವೀಣನಿಗಾಗಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ.
ಜೋರು ಮಾಡಲೆಂದು ಬಂದೆ: ಹುಡುಗಾಟಿಕೆಯ ಹುಚ್ಚಾಟಕ್ಕೆ ಜೀವ ಬಲಿಯಾಗಿರುವುದು ಇದೇ ಮೊದಲಲ್ಲ, ಕೆಲ ವರ್ಷದ ಹಿಂದೆ ಇದೇ ಮಂಜಲ್ಪಾದೆಯ ನೇತ್ರಾವತಿ ನದಿ ತಟದಲ್ಲಿ ನಾಲ್ಕು ಜೀವಗಳು ಬಲಿಯಾಗಿದ್ದವು. ಅಪಾಯಕಾರಿಯಾದ ಈ ಸ್ಥಳದಲ್ಲಿ ನಡೆದ ಇಂದಿನ ದುರ್ಘಟನೆಗೆ ಸ್ಥಳೀಯ ದೋಣಿ ನಾವಿಕ ಇಸ್ಮಾಯಿಲ್ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಈ ಬಗ್ಗೆ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಇಸ್ಮಾಯಿಲ್, ಯುವಕರು ಈ ಪ್ರದೇಶದಲ್ಲಿ ನೀರಿಗಿಳಿದದ್ದನ್ನು ಕಂಡು ಜೋರು ಮಾಡಲೆಂದು ತಾನು ಬೋಟ್ನಲ್ಲಿ ಯುವಕರಿದ್ದ ಕಡೆಗೆ ಬರುತ್ತಿದ್ದೆ, ಆದರೆ ಆ ಹೊತ್ತಿಗಾಗಲೇ ಯುವಕನೋರ್ವ ನೀರಲ್ಲಿ ಕೊಚ್ಚಿ ಹೋಗಿದ್ದಾನೆ, 2 ನಿಮಿಷ ಬೇಗ ತಲುಪಿದ್ದರೆ ಬಚಾವ್ ಮಾಡ್ತಿದ್ದೆ' ಎಂದು ನೊಂದು ನುಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

