ಬಸವ ವಸತಿ ಯೋಜನೆ ಪಿಡಿಒಗೆ; ನೋಡಲ್ ಅಧಿಕಾರಿಗಳಿಗೆ ಖೊಕ್
ಆತ್ಮಭೂಷಣ್
ಮಂಗಳೂರು: ಬಸವ ವಸತಿ ಯೋಜನೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೋಡೆಲ್ ಅಧಿಕಾರಿಗಳನ್ನು ಕಿತ್ತುಹಾಕಲು ನಿರ್ಧರಿಸಿರುವ ಸರ್ಕಾರ, ಅವರ ಜವಾಬ್ದಾರಿಯನ್ನು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಹೆಗಲಿಗೆ ಹಾಕಿದೆ. ಇದರಿಂದ ನೋಡಲ್ ಅಧಿಕಾರಿಗಳು ಬೀದಿಪಾಲಾದರೆ, ಪಿಡಿಒಗಳಿಗೆ ಹೆಚ್ಚಿನ ಹೊಣೆ ವಹಿಸಿದಂತಾಗಿದೆ.
2011ರಲ್ಲಿ ಬಸವ ವಸತಿ ಯೋಜನೆ ಜಾರಿಯಾದಾಗ ಅದರ ನಿರ್ವಹಣೆಗೆ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ (ಆರ್ಜಿಆರ್ಎಚ್ಸಿಎಲ್) ರಾಜ್ಯದಲ್ಲಿ 252 ಮಂದಿಯನ್ನು ನೋಡಲ್ ಅಧಿಕಾರಿಗಳಾಗಿ ಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡಿತ್ತು.
ಸರ್ಕಾರಿ ನೇಮಕಾತಿ ನಿಯಮಾನುಸಾರವೇ ಇವರ ನೇಮಕ ಪ್ರಕ್ರಿಯೆ ನಡೆದಿತ್ತು. ಮಾಸಿಕ ತಲಾ ರು. 15 ಸಾವಿರ ನೀಡುತ್ತಿದ್ದರು. ವಸತಿ ಯೋಜನೆಯ ಎಲ್ಲ ಆಗುಹೋಗುಗಳನ್ನು ನೋಡಿಕೊಳ್ಳುವುದು ಇವರ ಜವಾಬ್ದಾರಿ. ವಸತಿ ಯೋಜನೆಯಲ್ಲಿ ಮನೆ ನಿರ್ಮಾಣದ ವಿವಿಧ ಹಂತಗಳಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್)ಮುಖೇನ ನಿಗಮದ ವೆಬ್ಸೈಟ್ಗೆ ಅಪ್ಲೋಡ್ ಮಾಡಬೇಕು. ಈ ಅಧಿಕಾರಿಗಳಿಗೆ ವಸತಿ ಯೋಜನೆಯದ್ದು ಮಾತ್ರ ಕೆಲಸ.
ಪಿಡಿಒ ಹೆಗಲಿಗೆ: ನೋಡಲ್ ಅಧಿಕಾರಿಗಳಿಗೆ ವಸತಿ ಯೋಜನೆಯ ಹೊಣೆ ಮಾತ್ರ ಇದ್ದುದರಿಂದ ಅದನ್ನು ಸಮರ್ಪಕವಾಗಿ ನಿರ್ವಹಿಸಿದರೆ ಸಾಕಾಗುತ್ತಿತ್ತು. ಆದರೆ ಕೆಲವು ನೋಡಲ್ ಅಧಿಕಾರಿಗಳು ಯೋಜನೆಯನ್ನು ಬೇಕಾಬಿಟ್ಟಿ ದುರುಪಯೋಗಪಡಿಸಿದ್ದರಿಂದ ಇವರ ಹೊಣೆಯನ್ನು ಪಿಡಿಒ ಹೆಗಲಿಗೆ ಹಾಕಲು ಸರ್ಕಾರ ತೀರ್ಮಾನಿಸಿತ್ತು.
ಈ ಕುರಿತು ಜು.31ರಂದು ನಿಗಮ ಎಲ್ಲ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿಗಳಿಗೆ ಸುತ್ತೋಲೆ ಹೊರಡಿಸಿತ್ತು. ಪಿಡಿಒಗಳಿಗೆ ತರಬೇತಿ ನೀಡುವ ಸಲುವಾಗಿ ನೋಡಲ್ ಅಧಿಕಾರಿಗಳ ಸೇವಾವಧಿಯನ್ನು ಸೆಪ್ಟೆಂಬರ್ಗೆ ಕೊನೆವರೆಗೆ ವಿಸ್ತರಿಸಲಾಗಿದೆ. ನಿಗಮದ ಈ ಕ್ರಮದಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೋಡಲ್ ಅಧಿಕಾರಿಗಳು ಬೀದಿಗೆ ಬೀಳುವಂತಾಗಿದೆ. ಯಾರೋ ಮಾಡಿದ ತಪ್ಪಿದ ಎಲ್ಲರು ಬಲಿಪಶುವಾಗಬೇಕಾಗಿದೆ.
ಪಿಡಿಒ ಮೇಲೆ ಅಧಿಕಾರ ಇಲ್ಲ: ನೋಡಲ್ ಅಧಿಕಾರಿಗಳನ್ನು ನಿಗಮವೇ ನೇಮಕ ಮಾಡಿರುವುದರಿಂದ ಅವರ ವಿರುದ್ಧ ಅವ್ಯವಹಾರ ಜರುಗಿದಾಗ ಕ್ರಮ ಕೈಗೊಳ್ಳುವ ಅಧಿಕಾರ ನಿಗಮಕ್ಕೆ ಇತ್ತು. ಇನ್ನು ಪಿಡಿಒ ಅಥವಾ ನಗರ ಸಂಸ್ಥೆಗಳ ಎಂಜಿನಿಯರ್ಗಳು ವಸತಿ ಯೋಜನೆಯ ಜವಾಬ್ದಾರಿ ವಹಿಸುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನಿಗಮಕ್ಕೆ ಇಲ್ಲ. ಯಾಕೆಂದರೆ ಪಿಡಿಒಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಹಾಗೂ ಎಂಜಿನಿಯರ್ಗಳು ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆಯಡಿ ನೇಮಕಗೊಂಡವರು. ಯಾವುದೇ ಕ್ರಮ ಕೈಗೊಳ್ಳುವುದಿದ್ದರೆ ಆಯಾ ಇಲಾಖೆಗೆ ವರದಿ ಸಲ್ಲಿಸುವುದಷ್ಟೇ ನಿಗಮದ ಕೆಲಸ.
ಫಲಾನುಭವಿಗೆ ಎಸ್ಎಂಎಸ್: ನಿಗಮದ ವೆಬ್ಸೈಟ್ಗೆ ಅಪ್ಲೋಡ್ ಮಾಡುವ ವಿಧಾನವನ್ನೂ ಪರಿಷ್ಕರಿಸಲಾಗಿದೆ. ಬಸವ ವಸತಿ ಫಲಾನುಭವಿಗೆ ಮಂಜೂರಾದಾಗ ಮನೆ ನಿರ್ಮಿಸುವ ಖಾಲಿ ಜಾಗ, ನಂತರ ಅಡಿಪಾಯ, ಬಳಿಕ ಗೋಡೆ ಹಾಗೂ ಕೊನೆಗೆ ಪೂರ್ಣಗೊಂಡ ಮೇಲೆ ಹೀಗೆ 4 ಹಂತದಲ್ಲಿ ಫೋಟೋ ತೆಗೆದು ಜಿಪಿಎಸ್ನಲ್ಲಿ ಅಪ್ಲೋಡ್ ಮಾಡಬೇಕು. ಇದಲ್ಲದೆ ಪ್ರತಿ ಫಲಾನುಭವಿಗೆ ತಲಾ ರು. 1.60 ಲಕ್ಷ ಅನುದಾನ ಸರ್ಕಾರ ನೀಡಲಿದ್ದು, ಪ್ರತಿ ಹಂತದಲ್ಲೂ ಫಲಾನುಭವಿ ಮೊಬೈಲ್ಗೆ ಎಸ್ಎಂಎಸ್ ರವಾನೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

