ಎಂಡೋಪೀಡಿತರೊಂದಿಗೆ ವೈವಾಹಿಕ ಸುವರ್ಣ ಮಹೋತ್ಸವ
ಉಪ್ಪಿನಂಗಡಿ: ಆಲಂಕಾರು ಗ್ರಾಮದ ಬೇಳ್ಪಾಡಿಗುತ್ತು ಜನಾರ್ದನ ರೈ, ಪುಣಚ ಬೈಲುಗುತ್ತು ನಾಗವೇಣಿ ಜೆ. ರೈ ದಂಪತಿ ಹಾಗೂ ಕುಂಟೋಡಿಗುತ್ತು ಸದಾಶಿವ ರೈ, ಪರಾರಿಗುತ್ತು ಪಾರ್ವತಿ ಎಸ್. ರೈ ದಂಪತಿ ಶುಕ್ರವಾರದಂದು ತಮ್ಮ ವೈವಾಹಿಕ ಜೀವನದ ಸುವರ್ಣ ಮಹೋತ್ಸವನ್ನು ಎಂಡೋಸಲ್ಫಾನ್ ಪೀಡಿತರೊಂದಿಗೆ ಆಚರಿಸಿ ಆದರ್ಶಪ್ರಾಯರೆನಿಸಿದರು.
ಕೈಲದಲ್ಲಿರುವ ಎಂಡೋ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ, ಎಂಡೋಸಲ್ಫಾನ್ ಪೀಡಿತ ಮಕ್ಕಳೊಂದಿಗೆ ಬೆರೆತು ಅವರಿಗೆ ಹಣ್ಣು ಹಾಗೂ ಸಿಹಿ ತಿಂಡಿ ವಿತರಿಸಿದರು.
ರಾಮಮೋಹನ ರೈ ಸುರುಳಿ, ಎಂಡೋಸಲ್ಫಾನ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್, ಕಮಲಾಕ್ಷ ರೈ ಮನವಳಿಕೆ, ಗಣೇಶ್ ರೈ ಬೇಳ್ಪಾಡಿ, ಮೋಹನ್ದಾಸ್ ರೈ ಪರಾರಿ, ಸುಧಾಕರ್ ರೈ ಪರಾರಿ ಇದ್ದರು.
ಸುಬ್ರಹ್ಮಣ್ಯ ದೇವಳದಲ್ಲಿ ಹೊಸ್ತಾರೋಗಣೆ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಹೊಸ್ತಾರೋಗಣೆ (ನವಾನ್ನ ಪ್ರಸಾದ) ನಡೆಯಿತು. ಪ್ರಾತಃಕಾಲ ಶ್ರೀ ದೇವರಿಗೆ ಮಹಾಭಿಷೇಕದ ಬಳಿಕ ತೆನೆ ತರಲು ಪ್ರಧಾನ ಅರ್ಚಕರು ತೆರಳಿದರು.
ತದನಂತರ ಶ್ರೀ ದೇವಳದ ಗದ್ದೆಯಲ್ಲೇ ಬೆಳೆದ ಬತ್ತದ ತೆನೆಯನ್ನು ಬ್ಯಾಂಡ್, ವಾದ್ಯ, ಮೆರವಣಿಗೆಯ ಮೂಲಕ ದೇವಳಕ್ಕೆ ತಂದು ದೇವರ ಸನ್ನಿಧಿಯಲ್ಲಿ ಪ್ರಧಾನ ಅರ್ಚಕ ವೇದಮೂರ್ತಿ ಕೇಶವ ಜೋಗಿತ್ತಾಯರ ನೇತೃತ್ವದಲ್ಲಿ ಕದಿರು ಪೂಜೆ ನಡೆದು, ಬಳಿಕ ಭಕ್ತಾದಿಗಳಿಗೆ ಕದಿರು ವಿತರಿಸಲಾಯಿತು. ಶ್ರೀ ದೇವರಿಗೆ ಗರ್ಭಗುಡಿಯ ಎದುರಿನ ಮಂಟಪದಲ್ಲಿ ಪಂಚಾಮೃತ ಮಹಾಭಿಷೇಕ ಹಾಗೂ ವಿಶೇಷ ಪೂಜೆ ಹಾಗೂ ನವಾನ್ನ ನೈವೇದ್ಯ ನಡೆಯಿತು. ಬಳಿಕ ಸಾವಿರಾರು ಭಕ್ತರಿಗೆ ನವಾನ್ನಭೋಜನ ಪ್ರಸಾದ ನೀಡಲಾಯಿತು. ನವಾನ್ನ ಪ್ರಸಾದದ ವಿತರಣೆ ಅತ್ಯಂತ ಮಹತ್ವದ್ದಾದುದರಿಂದ ಅನ್ನ ಬ್ರಹ್ಮನ ದೇಗುಲ ಷಣ್ಮುಖ ಪ್ರಸಾದ ಬೋಜನ ಶಾಲೆಯನ್ನು ಸುಂದರವಾಗಿ ಶೃಂಗರಿಸಲಾಗಿತ್ತು.
ನೈನಾಗೆ ಸರೋಜಿನಿ ನಾಯ್ಡು ಪ್ರಶಸ್ತಿ
ಮಂಗಳೂರು: ಮಹಿಳೆ ಮತ್ತು ಪಂಚಾಯತ್ ರಾಜ್ ವಿಷಯದಲ್ಲಿ ಪ್ರಕಟವಾಗುವ ಅತ್ಯುತ್ತಮ ವರದಿಗೆ ನೀಡುವ ಪ್ರತಿಷ್ಠಿತ ಸರೋಜಿನಿ ನಾಯ್ಡು ರಾಷ್ಟ್ರೀಯ ಪ್ರಶಸ್ತಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಹಿರಿಯ ವರದಿಗಾರ್ತಿ ನೈನ ಜೆ.ಎ. ಅವರಿಗೆ ಲಭಿಸಿದೆ.
ಹಂಗರ್ ಪ್ರಾಜೆಕ್ಟ್ ಪ್ರತಿ ವರ್ಷ ಈ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿ 2 ಲಕ್ಷ ನಗದು ಒಳಗೊಂಡಿದೆ.
ಕಡಬ ಗ್ರಾಮ ಪಂಚಾಯ್ತಿ ಕುರಿತ ನೈನ ಅವರ ವರದಿಗೆ ಪ್ರಶಸ್ತಿ ಲಭಿಸಿದೆ. ಅ.1ರಂದು ದಿಲ್ಲಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಮುಕ್ತ ವಿ.ವಿ.
ಪ್ರವೇಶ ಆರಂಭ
ಮೂಲ್ಕಿ: ಇಲ್ಲಿನ ವಿಜಯ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ 2013-14 ರ ಸಾಲಿನ ದೂರ ಶಿಕ್ಷಣದ ಬಿಎ, ಬಿಕಾಂ, ಬಿಲಿಬ್ ಸೈಯನ್ಸ್ ಎಂಎ, ಎಂಕಾಂ, ಎಂಬಿಎ, ಎಂಎಲ್ಎಂ, ಎಂಎಸ್ಸಿ, ಎಂಲಿಬ್ ಸೈಯನ್ಸ್ ಹಾಗೂ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸುಗಳಿಗೆ ಪ್ರವೇಶ ಆರಂಭವಾಗಿದ್ದು ಅರ್ಜಿ ಫಾರಂಗಳನ್ನು ಕಾಲೇಜಿನ ಕಚೇರಿಯಲ್ಲಿ ಬೆ.10ರಿಂದ ಸಂ.5ರವರೆಗೆ ಪಡೆಯಬಹುದಾಗಿದ್ದು ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಅ. 23 ಗಡುವು. ಮಾಹಿತಿಗೆ: 0824- 2290531.
ವಿದ್ಯಾರ್ಥಿ ವೇತನಕ್ಕೆ
ಅರ್ಜಿ ಆಹ್ವಾನ
ಮಂಗಳೂರು: ಸುರತ್ಕಲ್ ವಿದ್ಯಾದಾಯಿನಿ ಗೋವಿಂದದಾಸ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಡಿಪ್ಲೋಮ, ಮೆಡಿಕಲ್, ಎಂಜಿನಿಯರಿಂಗ್, ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ದಿ. ಮೈರ್ಪಾಡಿ ವೆಂಕಟರಮಣಯ್ಯ ಹಾಗೂ ದಿ. ಚಂದೂ ಬಾಯಿ ಪಡುಮನೆ ವತಿಯಿಂದ ನೀಡುವ ವೇತನಕ್ಕೆ ಸುರತ್ಕಲ್ ವಿದ್ಯಾದಾಯಿನಿ ಹಾಗೂ ಗೋವಿಂದದಾಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಹಳೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಪ್ರಾಂಶುಪಾಲರಿಂದ ಅರ್ಜಿ ಪಡೆದುಕೊಳ್ಳಬಹುದು. ಸೆ. 25 ಕೊನೆ ದಿನ.
ನಾಳೆಯಿಂದ 'ಟೆಕ್ನೊವೀಕ್-2013'
ಮಂಗಳೂರು: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರಿಂಗ್ ವತಿಯಿಂದ ಸೆ. 15 ರಿಂದ 25ರವರೆಗೆ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ 153ನೇ ಜನ್ಮದಿನಾಚರಣೆ ಪ್ರಯುಕ್ತ ಓಶಿಯನ್ ಪರ್ಲ್ ಹೊಟೇಲ್ನಲ್ಲಿ 'ಟೆಕ್ನೊವೀಕ್-2013' ಸರಣಿ ಕಾರ್ಯಕ್ರಮ ನಡೆಯಲಿದೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಮೊಹಮ್ಮದ್ ನಜೀರ್ ಮತ್ತು ದ ರಾಮ್ಕೋ ಸಿಮೆಂಟ್ಸ್ ಲಿಮಿಟೆಡ್ ಸಹಾಯಕ ಉಪಾಧ್ಯಕ್ಷ ಜಯ ಕುಮಾರ್ ಉದ್ಘಾಟಿಸುವರು. ಸಿವಿಲ್ ಎಂಜಿನಿಯರ್ಗಳಾದ ಬಿ. ಪದ್ಮನಾಭ ರೈ ಮತ್ತು ಕಟ್ಟಾ ವೆಂಕಟರಮಣ ಇವರಿಗೆ ಎಮಿನೆಂಟ್ ಎಂಜಿನಿಯರ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಪಿ. ರಂಗನಾಥ ಐತಾಳ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

