ಮೋದಿ ಆಯ್ಕೆಗೆ ಕಾಂಗ್ರೆಸ್ ದಿಗಿಲು ಯಾಕೆ?: ಬಿಜೆಪಿ
ಮಂಗಳೂರು: ಜೀತದಾಳು ಮನಸ್ಥಿತಿಯ ಕಾಂಗ್ರೆಸಿಗರಿಗೆ ಪ್ರಜಾಪ್ರಭುತ್ವದ ಬೆಲೆ ತಿಳಿದಿಲ್ಲ. ನವಭಾರತ ನಿರ್ಮಾಣದ ಹೊಣೆ ನರೇಂದ್ರ ಮೋದಿ ಹೆಗಲೇರುತ್ತಿದ್ದಂತೆ ಕಾಂಗ್ರೆಸ್ ನಾಯಕರು ಚೇಳು ಕುಟುಕಿದಂತೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಪ್ರತಾಪ್ಸಿಂಹ ನಾಯಕ್ ಲೇವಡಿ ಮಾಡಿದ್ದಾರೆ.
ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೋದಿ ಪ್ರಧಾನಿಯಾಗಬೇಕು ಎಂಬುದು ಕೋಟ್ಯಂತರ ಭಾರತೀಯರ ಕನಸು. ಮೋದಿ ಪ್ರಧಾನಿಯಾದರೆ ಯುಪಿಎ ಲಕ್ಷಕೋಟಿಯ ಹಗರಣ ಎಲ್ಲಿ ಬಯಲಾಗಿ ಮುಂದೆ ಅಧಿಕಾರಕ್ಕೆ ತೊಡಕಾಗಬಹುದು ಎಂಬ ಭೀತಿ ಕಾಂಗ್ರೆಸಿಗರಿಗೆ ತಲೆದೋರಿದಂತಿದೆ. ಭಯೋತ್ಪಾದನೆ, ಬೆಲೆಏರಿಕೆ, ಭ್ರಷ್ಟಾಚಾರದಿಂದ ತತ್ತರಿಸಿರುವ ದೇಶಕ್ಕೆ ಮೋದಿ ಟಾನಿಕ್ ಅಗತ್ಯವಿದೆ. ದೇಶ ಬದಲಾವಣೆಗೆ ಬಯಸುತ್ತಿರುವುದರಿಂದ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಯಂಥವರ ಹೇಳಿಕೆಗೆ ಮಹತ್ವ ನೀಡಬೇಕಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಇತಿಶ್ರೀಗೆ ಸೋನಿಯಾ: ಪೂಜಾರಿಯವರು ಮೊದಲು ಕಾಂಗ್ರೆಸ್ ಸಾಯದಂತೆ ನೋಡಿಕೊಳ್ಳಲಿ. ಬಿಜೆಪಿ ಎನ್ಕೌಂಟರ್ ಕುರಿತು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬಿಜೆಪಿ, ಆರ್ಎಸ್ಎಸ್ ಮುಗಿಸಲು ಮೋದಿ ಸಾಕು ಎನ್ನುವ ಪೂಜಾರಿಗೆ ಇಡೀ ದೇಶವನ್ನು ಮುಗಿಸಲು ಸೋನಿಯಾ ಸಾಕು ಎನ್ನುವ ನೈಜ ಸಂಗತಿ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪದೇ ಪದೇ ಗೋಧ್ರಾ ಹತ್ಯಾಕಾಂಡ ಬಗ್ಗೆ ಹೇಳಿಕೆ ನೀಡುವ ಕಾಂಗ್ರೆಸ್ ನಾಯಕರು ಇಂದಿರಾಗಾಂಧಿ ಹತ್ಯೆ ಬಳಿಕ ನಡೆದ ಸಿಖ್ ನರಮೇಧ ಕುರಿತು ಯಾಕೆ ಸೊಲ್ಲೆತ್ತುತ್ತಿಲ್ಲ? ಮೋದಿ ಎನ್ಕೌಂಟರ್ ಪ್ರವೀಣ ಎನ್ನುವ ಪೂಜಾರಿ, ಕರಾವಳಿಯಲ್ಲಿ ಉಗ್ರರ ನಂಟಿನ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಕಾಂಗ್ರೆಸ್ಗೆ ದೇಶದ ಹಿತದೃಷ್ಟಿ ಬದಲು ಓಟ್ಬ್ಯಾಂಕ್ ರಾಜಕಾರಣ ಮುಖ್ಯವಾಗಿದೆ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

