ದಕ್ಷಿಣ ಕನ್ನಡ

ರಾಜಕಾರಣಿಗಳ ಸ್ವಾರ್ಥಕ್ಕೆ ರೈತರು ಬಲಿ: ಸುಬ್ರಹ್ಮಣ್ಯ ಶಾಸ್ತ್ರಿ

Published On :

ಉಪ್ಪಿನಂಗಡಿ: ಸುಬ್ರಹ್ಮಣ್ಯದಿಂದ ಉಪ್ಪಿನಂಗಡಿ ಮಧ್ಯೆ ಕುಮಾರಧಾರಾ ನದಿಗೆ 7 ಅಣೆಕಟ್ಟುಗಳ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ರೈತರ ಹಿತಾಸಕ್ತಿ ಇಲ್ಲ. ಕೇವಲ ರಾಜಕಾರಣಿಗಳು ತಮ್ಮ ಸ್ವಂತ ಹಿತಾಸಕ್ತಿಗಾಗಿ ಅಣೆಕಟ್ಟುಗಳ ರಚನೆಗೆ ಒಪ್ಪಿಗೆ ನೀಡುತ್ತಿದ್ದಾರೆ. ಇದರಿಂದಾಗಿ ಬಹಳಷ್ಟು ರೈತರು ತಮ್ಮ ಅನ್ನದ ನೆಲೆಯಾದ ಕೃಷಿ ಭೂಮಿ ಕಳೆದುಕೊಳ್ಳಬೇಕಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಹೇಳಿದ್ದಾರೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸವಣೂರು ವಲಯದ ಆಶ್ರಯದಲ್ಲಿ ಭಾನುವಾರ ಕೊಯಿಲ ಗ್ರಾಮದ ಕೊಲ್ಯ ಕೊರೆಪದವು ಎಂಬಲ್ಲಿ ವಿದ್ಯುತ್ ಉತ್ಪಾದನೆಗಾಗಿ ಕುಮಾರಾಧಾರಾ ನದಿಗೆ ಅಣೆಕಟ್ಟು ನಿರ್ಮಿಸಲು ಮುಂದಾಗಿರುವ ಕೊಲ್ಯ ಪವರ್ ಪ್ರಾಜೆಕ್ಟ್ ವಿರುದ್ಧ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಇಂದಿನ ರಾಜಕಾರಣಿಗಳು ರೈತರ ನೋವಿನ ಬಗ್ಗೆ ಕಾಳಜಿಯನ್ನು ಹೊಂದಿಲ್ಲ. ಕೇವಲ ಸ್ವಾರ್ಥ ಚಿಂತನೆ ಮಾಡುತ್ತಿದ್ದಾರೆ. ಅಣೆಕಟ್ಟುಗಳನ್ನು ನಿರ್ಮಾಣಗೊಳಿಸುತ್ತಿರುವ ಕಂಪನಿಗಳ ಎಂಡಿಗಳು ಈ ಜನಪ್ರತಿನಿಧಿಗಳಿಗೆ ನೇರ ಸಂಬಂಧಿಕರೇ ಆಗಿರುತ್ತಾರೆ. ರೈತರ ಮನವಿಗೆ ಸ್ಪಂದಿಸುವ ಅಧಿಕಾರಿಗಳು, ಜನಪ್ರತಿನಿಧಿಗಳು ಇಂದು ಬಹಳ ವಿರಳರಾಗಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಬಗ್ಗುವುದು ನ್ಯಾಯಾಂಗಕ್ಕೆ ಮಾತ್ರ. ಈ ನಿಟ್ಟಿನಲ್ಲೂ ರೈತ ಸಂಘ ಹೋರಾಟ ನಡೆಸುತ್ತಿದೆ ಎಂದು ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಹೇಳಿದರು.
ಕೃಷಿ ಸಾಲ ಮನ್ನಾ ವಿಚಾರದ ಬಗ್ಗೆ ರೈತ ಸಂಘದ ಅಹವಾಲು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಸಂಬಂಧ ಸುಪ್ರೀಂಕೋರ್ಟ್ ಈಗಾಗಲೇ 28 ಬ್ಯಾಂಕ್‌ಗಳಿಗೆ ನೋಟಿಸ್ ನೀಡಿದೆ. ಇದರಲ್ಲಿ ರೈತ ಸಂಘಕ್ಕೆ ಜಯ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಾಣ ಇರುವತನಕ ಹೋರಾಟ: ಪ್ರಾಸ್ತಾವಿಕವಾಗಿ ಮಾತನಾಡಿದ ರೈತ ಸಂಘದ ಸವಣೂರು ವಲಯ ಅಧ್ಯಕ್ಷ ಧರ್ಣಪ್ಪ ಗೌಡ ಇಡ್ಯಾಡಿ, ಶಂಭೂರು, ಉರುಂಬಿಯಲ್ಲಿ ಪವರ್ ಪ್ರಾಜೆಕ್ಟ್ ಯೋಜನೆ ಕೈಗೆತ್ತಿಕೊಂಡಿರುವ ಸಂಸ್ಥೆಯೇ ಕೊಲ್ಯದಲ್ಲಿ ಅಣೆಕಟ್ಟು ನಿರ್ಮಾಣಗೊಳಿಸುತ್ತಿದೆ. ಇಲ್ಲಿನ ರೈತರೊಂದಿಗೆ ಪರಿಹಾರ, ಸಮಾಲೋಚನೆ ಮಾಡದೆ ಯೋಜನೆ ಜಾರಿಗೊಳಿಸಲಾಗುತ್ತಿದೆ. ಪ್ರಾಣವಿರುವ ತನಕ ಹೋರಾಟ ನಡೆಸಿ ಅಣೆಕಟ್ಟು ನಿರ್ಮಾಣಕ್ಕೆ ರೈತ ಸಂಘ ಬಿಡುವುದಿಲ್ಲ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ಉರುಂಬಿ ಅಣೆಕಟ್ಟು ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಕರುಣಾಕರ ಗೋಗಟೆ, ತಾ.ಪಂ. ಮಾಜಿ ಸದಸ್ಯ ಅಬ್ದುಲ್ ರಹಿಮಾನ್ ಅರ್ತಿಕೆರೆ, ಸ್ಥಳೀಯ ನಿವಾಸಿ ಸಂತೋಷ್ ರೈ, ಎಪಿಎಂಸಿ ಸದಸ್ಯ ಶೀನಪ್ಪ ಗೌಡ ಕೊಯಿಲ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ ಕಡೆಂಬ್ಯಾಲು, ಸವಣೂರು ಗ್ರಾ.ಪಂ.ಸದಸ್ಯ ಸುದರ್ಶನ್ ಕಂಪ, ಸೀತಾರಾಮ ನಾಯ್ಕ್ ಮಾತನಾಡಿದರು.
ರೈತ ಸಂಘದ ಮುಖಂಡ ಬಡಿಲ ಈಶ್ವರ ಭಟ್ ಸ್ವಾಗತಿಸಿ, ನಿರೂಪಿಸಿದರು. ಸಭೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ರೈತರು, ಸಂತ್ರಸ್ತರು ಪಾಲ್ಗೊಂಡಿದ್ದರು. ಬೆಳಿಯಪ್ಪ ಗೌಡರನ್ನು ಹೋರಾಟ ಸಮಿತಿ ಅಧ್ಯಕ್ಷರನ್ನಾಗಿ ಈ ವೇಳೆ ಆಯ್ಕೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.