ದಕ್ಷಿಣ ಕನ್ನಡ

ಅತ್ತೆ, ಗಂಡನ ಕಿರುಕುಳ: ಕೆರೆಗೆ ಹಾರಿಮಗುವಿನೊಂದಿಗೆ ಮಹಿಳೆ ಆತ್ಮಹತ್ಯೆ

Published On :

ಉಪ್ಪಿನಂಗಡಿ: ಗೃಹಿಣಿಯೊಬ್ಬಳು ತನ್ನ ಆರು ತಿಂಗಳ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮದ ನಾಗಂಡ ಮನೆ ಎಂಬಲ್ಲಿ ನಡೆದಿದೆ.
ಗೀತಾ (26) ಮತ್ತಾಕೆಯ ಆರು ತಿಂಗಳ ಹೆಣ್ಣು ಮಗು ನಿಶ್ಮಾ ಮೃತರು.
 ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡ ತಬ್ಬಲಿ ಗೀತಾ ಅವರನ್ನು ಸುಳ್ಯ ತಾಲೂಕಿನ ಬಾಳಗೋಡು ಗ್ರಾಮದ ಕಿರಿಭಾಗ ಮನೆ ನಿವಾಸಿ ಮೋಹನ ಎಂಬವರ ಮಗ ಪುರುಷೋತ್ತಮ ಎಂಬವರೊಂದಿಗೆ 2012ರ ಏ. 12ರಲ್ಲಿ ಗೀತಾಳ ಚಿಕ್ಕಪ್ಪಂದಿರು ಮುಂದೆ ನಿಂತು ಮದುವೆ ಮಾಡಿ ಕೊಟ್ಟಿದ್ದರು.
ಕೂಲಿ ಕೆಲಸದ ಪುರುಷೋತ್ತಮ ಪತ್ನಿಯ ತವರು ಮನೆಯ ಆಸ್ತಿಯನ್ನು ತಕ್ಷಣವೇ ತನ್ನ ಹೆಸರಿಗೆ ಬರೆದುಕೊಡಬೇಕು ಎಂದು ಆಗ್ರಹಿಸುತ್ತಿದ್ದನೆಂದೂ ಈ ಸಂಬಂಧ ಆತನ ತಾಯಿಯೂ ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆಂದೂ ಕೆಲ ಸಮಯದ ಹಿಂದೆ ಆಕೆ ದೂರವಾಣಿ ಮೂಲಕ ಚಿಕ್ಕಪ್ಪನವರಲ್ಲಿ ತಿಳಿಸಿದ್ದರು ಎನ್ನಲಾಗಿದೆ.
 ಈ ಮಧ್ಯೆ ಕಳೆದ ನಾಲ್ಕು ದಿನಗಳ ಹಿಂದೆ ಪತಿಯೊಂದಿಗೆ ತವರು ಮನೆಗೆ ಬಂದಿದ್ದ ಗೀತಾಳಲ್ಲಿ ತವರು ಮನೆಯ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಬೇಕು. ಇಲ್ಲವಾದರೆ ತಾನು ಬೇರೆ ವಿವಾಹವಾಗುವುದಾಗಿ ಖಡಾಖಂಡಿತವಾಗಿ ತಿಳಿಸಿ, ಭಾನುವಾರ ಗಂಡ ಹಿಂತಿರುಗಿದ್ದ ಎನ್ನಲಾಗಿದೆ.
 ಒಟ್ಟು ಕುಟುಂಬದ ಆಸ್ತಿಯಲ್ಲಿ ಗೀತಾಳ ಪಾಲು ಒಳಗೊಂಡಿದ್ದು, ಈ ತನಕ ಪಾಲು ಆಗಿರಲಿಲ್ಲ. ಈ ಕಾರಣಕ್ಕೆ ಆಸ್ತಿಯನ್ನು ಸದ್ಯಕ್ಕೆ ವರ್ಗಾಯಿಸುವುದು ಅಸಾಧ್ಯ ಎಂದ ಗೀತಾಳ ಮಾತನ್ನು ಕೇಳಲು ಸಿದ್ಧರಿಲ್ಲದ ಪತಿ ಹಾಗೂ ಆತನ ತಾಯಿ ಸತತವಾಗಿ ತನ್ನನ್ನು ಹಿಂಸುತ್ತಿದ್ದಾರೆ, ಅವರ ಚುಚ್ಚು ಮಾತುಗಳನ್ನು ಕೇಳಿಕೊಂಡು ಬದುಕಿರಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ಗೀತಾ ತನ್ನ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಸೋಮವಾರ ಬೆಳಗ್ಗಿನ ಜಾವ 8 ಗಂಟೆಯಿಂದ 9.15 ರ ಮಧ್ಯೆ ಮನೆ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
 ಸಾವಿಗೆ ಮುನ್ನ ತನ್ನ ಅಣ್ಣನಿಗೆ ಬರೆದ ಪತ್ರದಲ್ಲಿ ತನ್ನ ಸಾವಿಗೆ ಗಂಡ  ಹಾಗೂ ಅತ್ತೆಯವರೇ ಕಾರಣವೆಂದು ಅಪಾದಿಸಿದ್ದು, ಅವರ ಆಸ್ತಿ ಕಬಳಿಸುವ ಯತ್ನ ಹಾಗೂ ಚುಚ್ಚು ಮಾತಿನಿಂದ ಮನ ನೊಂದು ಸಾಯುವುದಾಗಿ ಗೀತಾ ತಿಳಿಸಿದ್ದಾರೆ.
 ಪುತ್ತೂರು ತಾಲೂಕು ದಂಡಾಧಿಕಾರಿ (ತಹಸೀಲ್ದಾರ್) ಕುಳ್ಳೆಗೌಡ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಸುರೇಶ್ ಕುಮಾರ್, ಉಪ್ಪಿನಂಗಡಿ ಎಸ್‌ಐ ಶಿವ ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.