ಸಹಸ್ರಲಿಂಗೇಶ್ವರ ದೇವಾಲಯ ಪ್ರವೇಶದೊಂದಿಗೆ ಸೀಮೋಲ್ಲಂಘನೆಗೈದ ರಾಘವೇಶ್ವರ ಭಾರತೀ ಶ್ರೀ
ಉಪ್ಪಿನಂಗಡಿ: ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ವಿಜಯ ಚತುರ್ಮಾಸ್ಯ ಸಮಾಪನದ ಅಂಗವಾಗಿ ಸೀಮೋಲ್ಲಂಘನ ಕಾರ್ಯಕ್ರಮವು ಗುರುವಾರ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಪ್ರವೇಶದೊಂದಿಗೆ ನೆರವೇರಿತು.
ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ನೀಡಿದ ದೇವಾಲಯದ ಆಡಳಿತ ಮಂಡಳಿ ಹಾಗೂ ಭಕ್ತರು, ಶ್ರೀಗಳ ಸಮ್ಮುಖದಲ್ಲಿ ಶ್ರೀ ಸಹಸ್ರಲಿಂಗೇಶ್ವರ ಹಾಗೂ ಮಹಾಕಾಳಿ ದೇವರ ಪೂಜೆ ನೆರವೇರಿಸಲಾಯಿತು.
ಕುಮಾರಾಧಾರ ಹಾಗೂ ನೇತ್ರಾವತಿ ನದಿಗಳ ಸಂಗಮ ಸ್ಥಳದಲ್ಲಿ ಜಲಪ್ರೋಕ್ಷಣೆಗೈದ ಶ್ರೀಗಳು ಇಲ್ಲಿ ಸರಸ್ವತಿ ನದಿಯೂ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಪುರಾಣಗಳ ಉಲ್ಲೇಖವನ್ನು ನೆನಪಿಸಿದರು.
ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಪರಂಪರೆಯನುಸಾರ ವ್ರತಾಚರಣೆಯ ಸಮಯದಲ್ಲಿ ಹಾಕಿರುವ ಸೀಮೆಯನ್ನು ದಾಟುವ ಕಾರ್ಯವಾಗಿ ಈ ದಿನ ಉಪ್ಪಿನಂಗಡಿ ಕ್ಷೇತ್ರ ಸಂದರ್ಶಿಸುವ ಭಾಗ್ಯ ಲಭಿಸಿದೆ. ಇಡೀ ವಿಶ್ವವೇ ಶಿವ ರೂಪವಾಗಿದೆ. ವಿಶ್ವದಲ್ಲೂ ಭಗವಂತನನ್ನು ಕಾಣಬಹುದು. ಭಗವಂತನಲ್ಲೂ ವಿಶ್ವವನ್ನೂ ಕಾಣಬಹುದು. ಎಲ್ಲರೊಳು ಭಗವಂತನನ್ನು ಕಾಣುವ ಮನುಜನಿಗೆ ಶತ್ರುಗಳೆನ್ನುವವರು ಇರುವುದಿಲ್ಲ. ಇದು ವಿಶ್ವರೂಪದ ಮಹಿಮೆ ಎಂದರು. ನಿನ್ನೊಳು ಎನ್ನೊಳು ದೇವನಿದ್ದಾನೆ ಎನ್ನುವುದನ್ನು ತಿಳಿಸಿಕೊಡುವ ನಮಸ್ಕಾರ ಪದ್ಧತಿಯು ವಿಶ್ವಕ್ಕೆ ಭಾರತೀಯರು ನೀಡಿದ ಆದರ್ಶ ನಡೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನೇತ್ರಾವತಿ ನದಿ ತಿರುವು ಯೋಜನೆಯ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಡಾ. ನಿರಂಜನ ರೈ ನೇತೃತ್ವದಲ್ಲಿ ಹೋರಾಟಕ್ಕೆ ಶ್ರೀಗಳ ಬೆಂಬಲ ಕೋರಿ ಮನವಿ ಪತ್ರ ಸಲ್ಲಿಸಿದರು.
ಸೀಮೋಲ್ಲಂಘನೆಗೈದ ಶ್ರೀಗಳಿಗೆ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕರುಣಾಕರ ಸುವರ್ಣ ಅವರ ನೇತೃತ್ವದಲ್ಲಿ ಸ್ವಾಗತ ಕೋರಲಾಯಿತು.
ಡಾ. ಗೋವಿಂದ ಪ್ರಸಾದ್ ಕಜೆ ನಿರೂಪಿಸಿದರು. ಧನ್ಯಕುಮಾರ್ ರೈ ವಂದಿಸಿದರು. ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಜಯಮ್ಮ, ಆಡಳಿತ ಮಂಡಳಿ ಸದಸ್ಯರಾದ ಹರಿರಾಮಚಂದ್ರ, ಕಂಗ್ವೆ ವಿಶ್ವನಾಥ ಶೆಟ್ಟಿ, ಸಚಿನ್ ಸುಂದರ ಗೌಡ, ಸುನಿಲ್, ಜ್ಯೋತಿ ಹೇರಂಭ ಶಾಸ್ತ್ರಿ, ಉಷಾ ಮುಳಿಯ, ಗಣ್ಯರಾದ ಮುದ್ರಾಜೆ ಡಾ. ರಾಮಚಂದ್ರ ಭಟ್, ಕಜೆ ಈಶ್ವರ ಭಟ್, ಬಿ. ಐತ್ತಪ್ಪ ನಾಯ್ಕ, ಹೇರಂಭ ಶಾಸ್ತ್ರಿ, ಕೆ. ಜಗದೀಶ್ ಶೆಟ್ಟಿ, ಡಾ.ಕೆ. ಜಿ. ಭಟ್, ಕೈಲಾರ್ ರಾಜ್ಗೋಪಾಲ್ ಭಟ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

