ಎಸ್‌ಸಿಡಿಸಿಸಿಗೆ 15ನೇ ಬಾರಿ 'ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ'
ಮಂಗಳೂರು: ಸಹಕಾರಿ ರಂಗದ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಸಾಧನೆಗಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಎಸ್‌ಸಿಡಿಸಿಸಿ)ಗೆ 15ನೇ ಬಾರಿ 'ಕರ್ನಾಟಕ ಸಹಕಾರಿ ಅಪೆಕ್ಸ್ ಬ್ಯಾಂಕ್' ಪ್ರಥಮ ಪ್ರಶಸ್ತಿ ದೊರಕಿದೆ.
2011-12ನೇ ಸಾಲಿನಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಸರ್ವಾಂಗೀಣ ಪ್ರಗತಿಯೊಂದಿಗೆ ಗುರುತಿಸಿಕೊಂಡು ಲೆಕ್ಕ ಪರಿಶೋಧನೆಯಲ್ಲಿ 'ಎ' ವರ್ಗ ಪಡೆದು, ಈ ಪ್ರಶಸ್ತಿಗೆ ಆಯ್ಕೆಗೊಂಡಿದೆ.
ಶನಿವಾರ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸಹಕಾರಿ ಅಪೆಕ್ಸ್ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಈ ಪ್ರಶಸ್ತಿಯನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥ ಗೌಡ ಅವರಿಂದ ಎಸ್‌ಸಿಡಿಸಿಸಿ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ವ್ಯವಸ್ಥಾಪನಾ ನಿರ್ದೇಶಕ ಎಂ. ಗೋಪಾಲಕೃಷ್ಣ ಭಟ್ ಸ್ವೀಕರಿಸಿದರು.
ಈ ಸಂದರ್ಭ ಅಪೆಕ್ಸ್ ಉಪಾಧ್ಯಕ್ಷ ಶಿವಾನಂದ ಅಪ್ಪಾಸಾಹೇಬ ಮಾನಕರ, ನಿರ್ದೇಶಕರಾದ ಕೆ.ಎನ್. ರಾಜಣ್ಣ, ಶಿವಾನಂದ್ ಎಸ್ ಪಾಟೀಲ್, ಪಟೇಲ್ ಶಿವರಾಮ್, ಸಿ. ಬಸವೇಗೌಡ ಇದ್ದರು.
ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ತವರು ಮನೆಯಲ್ಲಿ ಪತ್ತೆ
ಮೂಲ್ಕಿ: ಇತ್ತೀಚೆಗೆ ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾದ ದಾವಣಗೆರೆ ಮೂಲದ ಮೂಲ್ಕಿಯ ಬಪ್ಪನಾಡು ಗ್ರಾಮದ ಕೊಳಚಿಕಂಬಳದ ಬಾಡಿಗೆ ಮನೆ ನಿವಾಸಿ ಮಂಜು ಎಂಬವರ ಪತ್ನಿ ಚಂದ್ರಮ್ಮ ಹಾಗೂ ಇಬ್ಬರು ಮಕ್ಕಳು ದಾವಣಗೆರೆಯ ಚೆನ್ನಗಿರಿಯಲ್ಲಿರುವ ತವರುಮನೆಯಲ್ಲಿ ಪತ್ತೆಯಾಗಿದ್ದಾರೆ. ಗಂಡನೊಂದಿಗಿನ ವೈಮನಸ್ಸಿನಿಂದಾಗಿ ತಾನು ಮನೆ ಬಿಟ್ಟು ಬಂದಿರುವುದಾಗಿ ಮೂಲ್ಕಿಯಿಂದ ಹೆಚ್ಚಿನ ತನಿಖೆಗಾಗಿ ಅಲ್ಲಿಗೆ ತೆರಳಿದ್ದ ಪೊಲೀಸ್ ಸಹಾಯಕ ಉಪ ನಿರೀಕ್ಷಕ ಚಂದ್ರಹಾಸ್ ಹಾಗೂ ಚೆನ್ನಗಿರಿ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಚಂದ್ರಮ್ಮ ತಿಳಿಸಿದ್ದಾರೆ. ತಾನು ಯಾವುದೇ ಕಾರಣಕ್ಕೂ ಗಂಡನ ಮನೆಗೆ ಹೋಗುವುದಿಲ್ಲ ತವರು ಮನೆಯಲ್ಲೇ ಇರುತ್ತೇನೆಂದು ತಿಳಿಸಿದ್ದು, ಅವರು ಪತ್ತೆಯಾಗುವುದರೊಂದಿಗೆ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.
ಪಬ್‌ನಲ್ಲಿ ಬೌನ್ಸರ್ ಪಾರ್ಟಿ ಆಯೋಜಕರ ಜಟಾಪಟಿ; ಸಂಚಾರ ಸಂಪೂರ್ಣ ಅಸ್ತವ್ಯಸ್ತ
ಮಂಗಳೂರು: ಪಂಪ್‌ವೆಲ್ ಒಮೆಗಾ ಆಸ್ಪತ್ರೆ ಬಳಿಯ ಪಬ್‌ನಲ್ಲಿ ಬೌನ್ಸರ್ ಮತ್ತು ಪಾರ್ಟಿ ಆಯೋಜಕರ ನಡುವೆ ಮಾರಾ ಮಾರಿ ನಡೆದಿದೆ. ಶನಿವಾರ ವೀಕೆಂಡ್ ಪಾರ್ಟಿ ಆರಂಭವಾಗಿತ್ತು. ಪ್ರವೇಶ ಪಾಸ್ ವಿಚಾರದಲ್ಲಿ ಎರಡು ಕಡೆಯವರ ನಡುವೆ ಮಾತಿನ ಚಕಮಕಿ ನಡೆದು ಕೈ ಮಿಲಾಯಿಸಿದರು. ಇದರಿಂದ ಪಾರ್ಟಿಗೆ ಬಂದಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಘಟನೆಗಳು ದಾಳಿ ನಡೆಸಿವೆ ಎಂದು ಹೆದರಿ ಚೆಲ್ಲಾಪಿಲ್ಲಿಯಾಗಿ ಓಡಲು ಆರಂಭಿಸಿದರು. ವಾಹನಗಳನ್ನು ಒಯ್ಯುವ ಭರಾಟೆಯಲ್ಲಿ ಸಂಜೆ 5.30ರಿಂದ 6.40ರವರೆಗೆ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿದೆ. ಪೊಲೀಸರು ಮಾತ್ರ ಸಂಚಾರ ಸುಗಮಗೊಳಿಸಲು ಹರಸಾಹಸ ಪಟ್ಟರು.
ಗರ್ಭಿಣಿ ಸಾವು- ವರದಿ ಬಂದ ನಂತರ ಕ್ರಮ: ಖಾದರ್
ಬಂಟ್ವಾಳ: ಹೆರಿಗೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಂದ ವರದಿ ತರಿಸಿ ಮುಂದಿನ ಕ್ರಮ ಜರುಗಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಫರಂಗಿಪೇಟೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸರಪಾಡಿ ಗ್ರಾ.ಪಂ. ಉಪಾಧ್ಯಕ್ಷೆ ಶಕುಂತಳಾ ಸಾವಿಗೆ ಸಂತಾಪ ವ್ಯಕ್ತಪಡಿಸಿದ ಸಚಿವರು, ವೈದ್ಯರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂಬ ಆರೋಪವಿದ್ದು, ಪೊಲೀಸ್ ಠಾಣೆಯಲ್ಲೂ ಈ ಬಗ್ಗೆ ದೂರು ದಾಖಲಾಗಿದೆ. ಲಿಖಿತ ದೂರು ಬಂದರೆ ಡಿಎಚ್‌ಒ ಮೂಲಕ ತನಿಖೆ ನಡೆಸಲಾಗುವುದು. ಆರೋಪ ಸಾಬೀತಾದರೆ ಆಸ್ಪತ್ರೆ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

