22 ವರ್ಷಗಳ ವೈಮನಸ್ಸು ಅಂತ್ಯಕ್ಕೆ ವೇದಿಕೆ ಸಿದ್ಧ
ಮಂಗಳೂರು: ಲೋಕಸಭೆ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಗೆಲ್ಲಲೇಬೇಕು ಎಂಬ ಛಲಕ್ಕೆ ಬಿದ್ದಿರುವ ಕಾಂಗ್ರೆಸ್ ಮುಖಂಡ, ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, 'ಮಂಗಳೂರು ದಸರಾ' ಉದ್ಘಾಟನೆಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಆಹ್ವಾನಿಸಿದ್ದಾರೆ. ಈ ಮೂಲಕ 22 ವರ್ಷಗಳ ವೈಮನಸ್ಸಿಗೆ ಅಧಿಕೃತ ಅಂತ್ಯ ಹಾಡಲು ವೇದಿಕೆ ಸಿದ್ಧಪಡಿಸಿದ್ದಾರೆ!
ಈ ಬಾರಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಅ.10ರಂದು ಈ ಬಾರಿಯ ದಸರಾ ಉತ್ಸವವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ.
ಏನಾಗಿತ್ತು?: 22 ವರ್ಷಗಳ ಹಿಂದಿನ ಮಾತು. 1991ರಲ್ಲಿ ಮಂಗಳೂರಿನ ಕದ್ರಿ ಮಲ್ಲಿಕಟ್ಟೆ ಶ್ರೀ ಮಂಜುನಾಥ ಸ್ವಾಮಿ ದೇಗುಲದ ಮಹಾದ್ವಾರ ಉದ್ಘಾಟನೆ ಸಮಾರಂಭದಲ್ಲಿ ವೀರೇಂದ್ರ ಹೆಗ್ಗಡೆ 'ಸಿಮೆಂಟ್ ದೇವಸ್ಥಾನದಲ್ಲಿ ಪಾವಿತ್ರ್ಯತೆ ಇರುವುದಿಲ್ಲ' ಎಂದು ಹೇಳಿದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು.
ಇದಕ್ಕೆ ಪ್ರತಿಯಾಗಿ ಪೂಜಾರಿ ಅವರು 'ಮಸೀದಿ, ಚರ್ಚ್ ಸಿಮೆಂಟ್ ಕಟ್ಟಿದ್ದಲ್ಲವಾ, ಹಾಗಾದರೆ ಅಲ್ಲಿ ಪಾವಿತ್ರ್ಯ ಇರುವುದಿಲ್ಲವೇ' ಎಂದು ಪ್ರತಿಕ್ರಿಯಿಸಿದ್ದೂ ವರದಿಯಾಯಿತು.
ವಿಭಿನ್ನ ಮಾತುಗಳಿಂದ ಹುಟ್ಟಿದ ಸಣ್ಣ ಕಿಡಿಯನ್ನು ಬೆಂಕಿಯಾಗಿ ಪ್ರಸರಿಸುವ ಉಳಿದ ಕೆಲಸವನ್ನು ಜನತಾ ಪರಿವಾರ ಯಶಸ್ವಿಯಾಗಿ ಮಾಡಿತು.
ಹಳ್ಳಿ ಹಳ್ಳಿಗಳಲ್ಲಿಯೂ ಧರ್ಮಕ್ಷೇತ್ರ ವಿರುದ್ಧ ಪೂಜಾರಿ ಮಾತನಾಡಿದ್ದಾರೆ ಎಂಬ ಮಾತುಗಳು ಹರಿದಾಡಿದವು.
ಸೋಲಾಯಿತು: ಇದಕ್ಕೆ ಪೂರಕವಾಗಿ 1993ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದರೂ ಪೂಜಾರಿ ಸೋತರು. ಇದೇ ಸಂದರ್ಭ ಆಯೋಧ್ಯೆ ರಾಮ ಮಂದಿರ, ಬಾಬ್ರಿಮಸೀದಿ ವಿವಾದವೂ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಬಳಿಕ ಪೂಜಾರಿ ಚೇತರಿಸಿಕೊಳ್ಳಲೇ ಇಲ್ಲ.
ಇದು ಕ್ರಮೇಣ ಬೆಳೆದು ಹಿಂದುತ್ವ ವಿರೋಧಿ ಪಟ್ಟವನ್ನು ಪೂಜಾರಿಗೆ ಅನಾಯಾಸವಾಗಿ ತಂದು ಕೊಟ್ಟಿತ್ತು. 1993ರ ಲೋಕಸಭೆ ಚುನಾವಣೆ ಸೋತ ಬಳಿಕ 17 ವರ್ಷ ಕಾಲ ಸ್ಪರ್ಧಿಸಲೇ ಇಲ್ಲ. 2009ರಲ್ಲಿ ಸ್ಪರ್ಧಿಸಿದರೂ ಸೋತರು.
ರಾಜಿಗೆ ಪ್ರಯತ್ನ: 2009ರ ಲೋಕಸಭೆ ಚುನಾವಣೆ ಸ್ಪರ್ಧೆಗೆ ಮುನ್ನ ಪೂಜಾರಿ, ಹೆಗ್ಗಡೆ ಅವರನ್ನು ಭೇಟಿಯಾಗಿ ಮನ ಒಲಿಸಲು ಪ್ರಯತ್ನಿಸಿದ್ದರು. ಆದರೆ ಅದು ಸಂಪೂರ್ಣ ಫಲಪ್ರದವಾಗಿರಲಿಲ್ಲ.
ಬಳಿಕ ತುಂಬೆಯ ಖಾಸಗಿ ವೈದ್ಯಕೀಯ ಕಾಲೇಜ್ ಉದ್ಘಾಟನೆ ವೇಳೆ ಪೂಜಾರಿ ಮತ್ತು ಹೆಗ್ಗಡೆ ವೇದಿಕೆ ಹಂಚಿಕೊಂಡಿದ್ದರು. ಆಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಂಡಾಡಿದ ಪೂಜಾರಿ, ಹೆಗ್ಗಡೆ ಅವರಿಗೆ ಭಾರತ ರತ್ನ ನೀಡಬೇಕು ಎಂದು ಪ್ರಶಂಸೆ ಮಾತುಗಳನ್ನಾಡಿದ್ದರು.
ತಿರುವು ಸಿಕ್ಕಿತು: ಆದರೆ ತಿರುವು ಸಿಕ್ಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಶ್ರೀಕೃಷ್ಣ ಮಠ ಸ್ವಾಧೀನದ ವಿವಾದಾತ್ಮಕ ಹೇಳಿಕೆ ಮತ್ತು 'ಆ ರೀತಿ ಮಾಡಿದರೆ ಎಚ್ಚರಿಕೆ' ಎಂಬ ಪೂಜಾರಿ ಪ್ರತಿ ಹೇಳಿಕೆ.
'ಪೂಜಾರಿ ಹೇಳಿಕೆ ಧಾರ್ಮಿಕ ಕ್ಷೇತ್ರದ ಮುಖಂಡರಲ್ಲಿ ಪೂಜಾರಿ ಬಗ್ಗೆ ಮೃದು ಧೋರಣೆ ಹುಟ್ಟಿಕೊಂಡಿತು. ಇದಕ್ಕಾಗಿ ಪೇಜಾವರ ಶ್ರೀಗಳೂ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು' ಎನ್ನುತ್ತಾರೆ ಪೂಜಾರಿ ಆತ್ಮೀಯ ವಲಯದ ಹರಿಕೃಷ್ಣ ಬಂಟ್ವಾಳ್. ಮುಖ್ಯಮಂತ್ರಿಗೆ ಕರೆ ಮಾಡಿದ ಪೂಜಾರಿ, ನಮ್ಮನ್ನು ಜನ ಆಯ್ಕೆ ಮಾಡಿದ್ದು, ದೇವಸ್ಥಾನ, ಚರ್ಚ್ ಸ್ವಾಧೀನಕ್ಕಲ್ಲ, ಬಡ ಜನರಿಗೆ ಅಕ್ಕಿ, ಸೂರು ನೀಡಲು, ಅದನ್ನು ಮಾಡಿ. ಇಲ್ಲಿ ನಾನು ಧಾರ್ಮಿಕ ಕ್ಷೇತ್ರ ವಿರುದ್ಧ ಅಪಪ್ರಚಾರದಿಂದಲೇ ತೊಂದರೆ ಅನುಭವಿಸಿದ್ದೇನೆ ಎಂದು ಹೇಳಿದ್ದರು ಎಂಬುದನ್ನು ಹರಿಕೃಷ್ಣ ಬಂಟ್ವಾಳ್ ನೆನಪಿಸಿಕೊಳ್ಳುತ್ತಾರೆ.
ಬಳಿಕ ಪೂಜಾರಿ ಧರ್ಮಸ್ಥಳಕ್ಕೆ ತೆರಳಿ ಹೆಗ್ಗಡೆ ಜತೆ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ದಸರಾ ಉದ್ಘಾಟನೆಗೆ ಹೆಗ್ಗಡೆಯವರನ್ನು ಕರೆಯುವ ದೊಡ್ಡ ನಿರ್ಧಾರಕ್ಕೂ ಬಂದರು.
ಇದು ಧಾರ್ಮಿಕವಾಗಿ ಮಹತ್ವದ ನಿರ್ಣಯ ಮಾತ್ರವಲ್ಲ ರಾಜಕೀಯವಾಗಿಯೂ ಪೂಜಾರಿಯ ಜಾಣ್ಮೆ ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಧರ್ಮಕ್ಷೇತ್ರಕ್ಕೆ ವಿರೋಧ ಇದ್ದ ಕಾರಣ ಪೂಜಾರಿ ಗೆಲ್ಲುವುದಿಲ್ಲ, ಅವರಿಗೆ ಟಿಕೆಟ್ ನೀಡಬಾರದು ಎಂಬ ಸ್ವಪಕ್ಷೀಯರ ವಾದಕ್ಕೂ ಈಗ ಹಿನ್ನಡೆಯಾಗಲಿದೆ.
ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

