ದಕ್ಷಿಣ ಕನ್ನಡ

ಕಲ್ಲಡ್ಕವನ್ನೇ ನುಂಗಲು ಹೊರಟ ಚತುಷ್ಪಥ...!

Published On :

ಬಂಟ್ವಾಳ: ಚತುಷ್ಪಥದ ಹೆಸರಿನಲ್ಲಿ ಅಯ್ಯೋಯ್ಯೋ ಕಲ್ಲಡ್ಕ.. ಎನ್ನುವ ಸ್ಥಿತಿ ಉಂಟು ಮಾಡಲು ಉದ್ದೇಶಿಸಿರುವ ಹೆದ್ದಾರಿ ಇಲಾಖೆ ಕಲ್ಲಡ್ಕ ಪೇಟೆಯನ್ನು ಮಾಯವಾಗಿಸುವುದು ಮಾತ್ರವಲ್ಲ, ಅದಕ್ಕಿಂತಲೂ ಭಯಾನಕವಾದ ಭವಿಷ್ಯ ನಿರ್ಮಿಸಲು ಯೋಜನೆ ರೂಪಿಸಿದೆ.
ಬ್ರಹ್ಮಾವರ, ಪಡುಬಿದ್ರಿಯಲ್ಲಿ ಸಾರ್ವಜನಿಕರ ನೆಮ್ಮದಿ ಕೆಡಿಸಿರುವ ಅಂಡರ್‌ಪಾಸ್ ಮೂಲಕ ಕಲ್ಲಡ್ಕದಲ್ಲಿ ಚತುಷ್ಪಥ ರಸ್ತೆ ನಿರ್ಮಿಸುವುದು ಇಲಾಖೆಯ ಗುರಿ.
ಈಗಿರುವ ಹೆದ್ದಾರಿಯ ಇಕ್ಕೆಲಗಳಲ್ಲಿ 22.5 ಮೀಟರ್ (ಒಟ್ಟು 45 ಮೀ.) ಸ್ವಾಧೀನಪಡಿಸುವ ಬಗ್ಗೆ ಈಗಾಗಲೇ ಗುರುತು ಹಾಕಲಾಗಿದ್ದು, ಈ ಸ್ಥಳದಲ್ಲಿಯೇ ಹೆದ್ದಾರಿ ಇಲಾಖೆಯ ಚತುಷ್ಪಥ ರಸ್ತೆ ನಿರ್ಮಾಣಗೊಳ್ಳಲಿರುವುದು. ಈ ಹೆದ್ದಾರಿಯನ್ನು ಕಲ್ಲಡ್ಕ ಪೇಟೆಯ ಈಗಿನ ಹೆದ್ದಾರಿಯಲ್ಲೇ ಸುಮಾರು 15 ಅಡಿ ಎತ್ತರದಲ್ಲಿ ನಿರ್ಮಿಸುವುದು, ಅಮ್ಟೂರು ಗ್ರಾಮ ಹಾಗೂ ವಿಟ್ಲಕ್ಕೆ ಹೋಗುವ ಎರಡು ಕಡೆ ಅಂಡರ್‌ಪಾಸ್ ನಿರ್ಮಿಸುವುದು, ಎತ್ತರದ ಚತುಷ್ಪಥದ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆಗಳನ್ನು ನಿರ್ಮಿಸುವುದು ಹೆದ್ದಾರಿ ಇಲಾಖೆಯ ಈಗಿನ ಲೆಕ್ಕಾಚಾರ. ಒಂದು ವೇಳೆ ಉದ್ದೇಶಿತ ಚತುಷ್ಪಥ ರಸ್ತೆ ಈ ಬಗೆಯಲ್ಲಿ ನಿರ್ಮಾಣಗೊಂಡಲ್ಲಿ ಕಲ್ಲಡ್ಕ ಪೇಟೆಯ ಅಸ್ತಿತ್ವಕ್ಕೇ ಧಕ್ಕೆಯುಂಟಾಗಲಿದೆ.
ಅಂಡರ್‌ಪಾಸ್ ಅಂದ್ರೆ..: ಚತುಷ್ಪಥ ರಸ್ತೆಯನ್ನು ಈಗಿನಂತೆ ಸಮಾನಂತರ ನೆಲದ ಮೇಲೆ ನಿರ್ಮಿಸುವುದಲ್ಲ. ಬದಲಾಗಿ ಸುಮಾರು ಹದಿನೈದು ಅಡಿ ಎತ್ತರದ ಗೋಡೆ ನಿರ್ಮಿಸುವುದು, ಎರಡು ಬದಿಯಲ್ಲಿ ಗೋಡೆ ನಿರ್ಮಿಸಿ ಅದರೊಳಬದಿಯಲ್ಲಿ ಮಣ್ಣು ತುಂಬಿಸುವುದು ಮತ್ತು ಆ ಎತ್ತರದಲ್ಲಿ ಚತುಷ್ಪಥ ರಸ್ತೆ ನಿರ್ಮಿಸುವುದು, ಅಮ್ಟೂರು ಹಾಗೂ ವಿಟ್ಲ ಕ್ರಾಸ್‌ಗೆ ಸಂಪರ್ಕ ಕಲ್ಪಿಸಲು ನೆಲದ ಹಂತದಲ್ಲಿಂದ 2 ಕಡೆ ಅಂಡರ್‌ಪಾಸ್ ಒದಗಿಸುವುದು ಇಲಾಖೆ ಸಿದ್ಧಪಡಿಸಿದ ಯೋಜನೆಯಂತೆ.
ಸಮಸ್ಯೆ ಏನು..?: ಕಲ್ಲಡ್ಕ ಪೇಟೆಯ ಮೂಲಕ ಚತುಷ್ಪಥವನ್ನು ಹಾದುಹೋಗುವಂತೆ ಮಾಡಿ ಕಲ್ಲಡ್ಕ ಪೇಟೆಯನ್ನೇ ಇಲ್ಲವಾಗಿಸುವ ಇಲಾಖಾ ಚಿಂತನೆಯೇ ನಿಜವಾದ ಸಮಸ್ಯೆ. ಆದರೆ, ಅಂಡರ್‌ಪಾಸ್ ವ್ಯವಸ್ಥೆಯ ಚತುಷ್ಪಥ ರಸ್ತೆ ನಿರ್ಮಿಸುವ ಮೂಲಕ ಭವಿಷ್ಯದುದ್ದಕ್ಕೂ ಕಲ್ಲಡ್ಕಕ್ಕೆ ಸಮಸ್ಯೆ ಸೃಷ್ಟಿಸುವ ಯೋಜನೆಗೆ ಇಲಾಖೆ ಮುಂದಾಗಿರುವುದು ಬಹುದೊಡ್ಡ ಸಮಸ್ಯೆಯಾಗಿದೆ.
ಈ ಚತುಷ್ಪಥ ರಸ್ತೆ ನಿರ್ಮಾಣಗೊಂಡಲ್ಲಿ ಕಲ್ಲಡ್ಕದಲ್ಲಿ ದೊಡ್ಡ ಗೋಡೆಯೇ ಎದ್ದು ನಿಲ್ಲಲಿದೆ. ರಸ್ತೆಯ ಇಕ್ಕೆಲಗಳಿಗೆ ಪರಸ್ಪರ ಸಂಪರ್ಕವೇ ಕಡಿದುಹೋಗಲಿದ್ದು, ರಸ್ತೆ ದಾಟುವುದಕ್ಕೆ ಅಂಡರ್‌ಪಾಸ್ ಅನ್ನೇ ಆಶ್ರಯಿಸಬೇಕಾದ ಸ್ಥಿತಿ ಉಂಟಾಗಲಿದ್ದು, ಕಿಲೋ ಮೀಟರ್‌ಗಟ್ಟಲೆ ನಡೆಯುವ ದುಃಸ್ಥಿತಿ ಉಂಟಾಗಲಿದೆ.
ಈಗಾಗಲೇ ಬ್ರಹ್ಮಾವರ, ಪಡುಬಿದ್ರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಅಂಡರ್ ಪಾಸ್ ಮಾದರಿಯ ಚತುಷ್ಪಥ ರಸ್ತೆಗೆ ಇಡೀ ಬ್ರಹ್ಮಾವರವೇ ವಿರೋಧ ವ್ಯಕ್ತಪಡಿಸಿದ್ದು, ಇದೀಗ ಕಲ್ಲಡ್ಕ ಈ ಮಾದರಿಯಲ್ಲಿ ಸಜ್ಜಾಗುತ್ತಿದೆ. ಇಲಾಖಾ ಯೋಜನೆಯಂತೆ ಎಲ್ಲಾ ನಡೆದರೆ, ಹಾಸನ- ಬಿ.ಸಿ. ರೋಡು ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕಲ್ಲಡ್ಕ ಪೇಟೆಯೇ ನಾಶವಾಗಲಿದೆ.
ಭೂಸ್ವಾಧೀನಾಧಿಕಾರಿಯವರ ಆದೇಶದಂತೆ ನಡೆದರೆ ಹೆದ್ದಾರಿ ಅಕ್ಕಪಕ್ಕದಲ್ಲಿರುವ ಎಲ್ಲಾ ವಾಸದ ಮನೆಗಳು, ವಾಣಿಜ್ಯ ಕಟ್ಟಡಗಳು ನಾಶವಾಗಲಿದೆ. ಅಂಡರ್‌ಪಾಸ್ ಮೂಲಕ ಚತುಷ್ಪಥ ನಿರ್ಮಾಣಗೊಂಡಲ್ಲಿ ಕಲ್ಲಡ್ಕದ ಭವಿಷ್ಯವೂ ಭಯಾನಕವಾಗಲಿದೆ ಎನ್ನುವುದು ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಸಂತ್ರಸ್ತರ ಹೋರಾಟ ಸಮಿತಿಯ ಆತಂಕ.

 ಮೌನೇಶ ವಿಶ್ವಕರ್ಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.