ಬುದ್ಧಿಮಾಂದ್ಯನ ಪೋಷಣೆ: ಶಿಕ್ಷಕಿ ತಾಯಿಗೆ ರಜೆ ನಿರಾಕರಣೆ
ಮಂಗಳೂರು: ಈತನ ಹೆಸರು ದೀಪಕ್ ಶೆಣೈ, ವಯಸ್ಸು 17 ವರ್ಷ, ವರ್ತನೆ ಮಾತ್ರ 4 ವರ್ಷದ ಮಕ್ಕಳದ್ದು...
ತಾಯಿ ಶಿಕ್ಷಕಿ ಜತೆ ಶಾಲೆಗೆ ಹೋಗುತ್ತಾನೆ, ಸುಮ್ಮನೆ ಮಕ್ಕಳ ಜತೆ ತರಗತಿಯಲ್ಲಿ ಕೂರುತ್ತಾನೆ. ಪಾಠ ಅರ್ಥವಾಗುವುದಿಲ್ಲ, ಬರೆಯಲು ಆಗುತ್ತಿಲ್ಲ. ಸಂಜೆ ವರೆಗೆ ತರಗತಿಯಲ್ಲಿದ್ದು ವಾಪಾಸ್ ಅಮ್ಮನ ಜತೆ ಮನೆಗೆ ಬರುತ್ತಾನೆ...
ದೀಪಕ್ ಶೆಣೈ ಬೌದ್ಧಿಕವಾಗಿ ಚುರುಕಿಲ್ಲ. ಹಾಗಾಗಿ ಜತೆಯಲ್ಲಿ ಸಹಾಯಕ್ಕೆ ಯಾರಾದರೂ ಬೇಕೇ ಬೇಕು. ತಾಯಿ ಮಂಗಳೂರಿನ ಕೈಕುಡೆ ಸರ್ಕಾರಿ ಶಾಲಾ ಶಿಕ್ಷಕಿ. ತಂದೆ ಕಿನ್ನಿಗೋಳಿಯಲ್ಲಿ ಬ್ಯಾಂಕ್ ಉದ್ಯೋಗಿ. ಮನೆಯಲ್ಲಿ ಈತನನ್ನು ನೋಡಿಕೊಳ್ಳಲು ಬೇರೆ ಯಾರೂ ಇಲ್ಲ. ಆದ್ದರಿಂದ ತಾಯಿ ಶಿಕ್ಷಕಿಯೇ ಪ್ರತಿನಿತ್ಯ ಜತೆಯಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಾರೆ.
ಹೀಗೆ ಒಂದರಿಂದ ಏಳನೇ ತರಗತಿ ವರೆಗೆ ತಲಪಿದ್ದಾನೆ. ಒಂಭತ್ತನೇ ತರಗತಿ ವರೆಗೆ ಮಕ್ಕಳನ್ನು ಅನುತ್ತೀರ್ಣಗೊಳಿಸಬಾರದು ಎಂಬ ನಿಯಮ ಇರುವುದರಿಂದ ಈತ ಉತ್ತೀರ್ಣನಾಗಿದ್ದಾನೆ. ಹಾಜರಾತಿ ಇದೆ ಎಂಬುದು ಬಿಟ್ಟರೆ ಪಾಠಗಳು ಈತನಿಗೆ ಎಳ್ಳಷ್ಟೂ ತಲೆಗೆ ಹೋಗುವುದಿಲ್ಲ. ಶಾಲಾ ಹಂತದಲ್ಲಿ ಮಕ್ಕಳು ಮನೆಯಲ್ಲಿರಬಾರದು ಎಂಬ ಒಂದೇ ಕಾರಣಕ್ಕೆ ಈತನನ್ನು ಶಾಲೆಗೆ ಸೇರಿಸಿದ್ದಾರೆ. ಈಗ ಇದುವೇ ಹೆತ್ತವರಿಗೆ ಮುಳುವಾಗಿದೆ.
ಈತನ ಭವಿಷ್ಯ ಬಗ್ಗೆ ಶಿಶುಪಾಲನಾ ರಜೆ ಮಂಜೂರು ಮಾಡುವಂತೆ ಎಲ್ಲ ದಾಖಲೆಯನ್ನು ಮಂಗಳೂರಿನ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಕಚೇರಿಗೆ(ಡಿಡಿಪಿಐ) ತೆಗೆದುಕೊಂಡು ಹೋಗಿ ಶಿಕ್ಷಕಿ ಬಸವಳಿದಿದ್ದೇ ಬಂತು, ಈವರೆಗೆ ರಜೆ ಮಂಜೂರಾಗಿಲ್ಲ. ಮಗನಿಗೆ ಶೇ.90 ಬುದ್ಧಿಮಾಂದ್ಯ ಇದೆ ಎಂಬ ವೈದ್ಯಕೀಯ ಮಂಡಳಿಯ ಪ್ರಮಾಣ ಪತ್ರಕ್ಕೂ ಸೊಪ್ಪುಹಾಕದ ಇಲಾಖೆ ಕೊನೆಗೆ ರಜೆ ನೀಡಲು ಸಾಧ್ಯವಿಲ್ಲ ಎಂದು ಪ್ರಸ್ತಾವನೆಯನ್ನು ತಿರಸ್ಕರಿಸಿದೆ.
ಮಾನವೀಯತೆ ಮರೆತರು: ಕಳೆದ ಜೂನ್ನಿಂದ ಮಗನನ್ನು ಮಂಗಳೂರಿನ ಅಂಗವಿಕಲ, ಬುದ್ಧಿಮಾಂದ್ಯರ ಪುನರ್ವಸತಿ ಕೇಂದ್ರಕ್ಕೆ ಸೇರಿಸಲು ನಿರ್ಧರಿಸಿದ್ದರು. ಅದಕ್ಕಾಗಿ ಸರ್ಕಾರವೇ ನೀಡುವ ವೇತನ ಸಹಿತ ಅಥವಾ ರಹಿತ ಶಿಶು ಪಾಲನಾ ರಜೆ ಮಂಜೂರು ಮಾಡುವಂತೆ 23-5-2013ರಂದು ಡಿಡಿಪಿಐಗೆ ಬರೆದುಕೊಂಡಿದ್ದರು. ಮಗು ಬುದ್ಧಿಮಾಂದ್ಯ ಎಂಬುದಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಮಂಡಳಿಯ ಪ್ರಮಾಣ ಪತ್ರ ದಾಖಲೆಗೆ ಇರಿಸಿದ್ದರು. ಆದರೂ ಮನವಿ ತಿರಸ್ಕರಿಸಲಾಗಿದೆ.
ವರ್ಷಕ್ಕೆ 3 ಬಾರಿ ರಜೆ ಅವಕಾಶ: ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಸಹಿಯಲ್ಲಿರುವ ಆರ್ಥಿಕ ಸಚಿವಾಲಯದ ತಿದ್ದುಪಡಿ ನಿಯಮ (ಆದೇಶ ಸಂಖ್ಯೆ: ಆಇ1ಸೇನಿಸೇ 2011 ದಿ.29-6-2011ರ ಆದೇಶ ಭಾಗದಲ್ಲಿರುವ ಷರತ್ತು (ಗಐಐ)ಬದಲಾದ ಪ್ರಕಾರ, ಮಕ್ಕಳು ಗುಣಮುಖವಾಗದ ಮತ್ತು ಶಾಶ್ವತವಾಗಿ ಅಂಗವಿಕಲ/ಬುದ್ಧಿಮಾಂದ್ಯದಿಂದ ಬಳಲುತ್ತಿದ್ದರೆ ಮತ್ತು ಇದನ್ನು ವೈದ್ಯಕೀಯ ಮಂಡಳಿ ಪ್ರಮಾಣೀಕರಿಸಿದರೆ ಅಂಥ ಪ್ರಕರಣಗಳಲ್ಲಿ ಮಹಿಳಾ ಸರ್ಕಾರಿ ನೌಕರರು, ಈ ಪ್ರಮಾಣ ಪತ್ರವನ್ನು 5 ವರ್ಷಕ್ಕೊಮ್ಮೆ ಸಲ್ಲಿಸಬೇಕು. ಒಂದು ವರ್ಷಕ್ಕೆ ಮೂರು ಬಾರಿ ರಜೆ ಮಂಜೂರು ಮಾಡಿಸಿಕೊಳ್ಳಬಹುದು. ಯಾವುದಕ್ಕೂ ವೈದ್ಯಕೀಯ ಮಂಡಳಿಯ ಪ್ರಮಾಣಪತ್ರವನ್ನು ಇದು ಅವಲಂಬಿಸಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ.
ಸಬೂಬು ನೀಡುವ ಇಲಾಖೆ: ಆದರೆ ವೈದ್ಯಕೀಯ ಮಂಡಳಿ ನೀಡಿದ ಶೇ.90 ಬುದ್ಧಿಮಾಂದ್ಯತೆ ಇದೆ ಎನ್ನುವ ಪ್ರಮಾಣ ಪತ್ರಕ್ಕೆ ಬೆಲೆಕೊಡದ ಡಿಡಿಪಿಐ ಇಲಾಖೆ ಅಧಿಕಾರಿಗಳು, ವೈದ್ಯಕೀಯ ಮಂಡಳಿ ಗುಣಮುಖವಾಗದ/ಶಾಶ್ವತ ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿಲ್ಲ ಎಂದು ಲಿಖಿತವಾಗಿ ಶಿಶುಪಾಲನಾ ರಜೆ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು 9-7-2013ರಂದು ಪ್ರಸ್ತಾವನೆ ತಿರಸ್ಕರಿಸಿದೆ.
ಮತ್ತೆ ಇದನ್ನು ಪುನರ್ ಪರಿಶೀಲಿಸುವಂತೆ ಶಿಕ್ಷಕಿ ಆ.8ರಂದು ಕೋರಿ ಮನವಿ ಸಲ್ಲಿಸಿದ್ದು, ಈ ಬಗ್ಗೆ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಗೆ ಡಿಡಿಪಿಐ ಪತ್ರ ಬರೆದು ಸ್ಪಷ್ಟನೆ ಕೋರಿದೆ.
ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

