2019ರಲ್ಲಿ ಕಂಪ್ಯೂಟರ್ಗೆ ನ್ಯಾನೊ ತಂತ್ರಜ್ಞಾನ : ಡಾ.ಅಬ್ದುಲ್ ಕಲಾಂ
ಮಂಗಳೂರು: 2019ರ ಸುಮಾರಿಗೆ ಕಂಪ್ಯೂಟರ್ಗಳು ನ್ಯಾನೋ ತಂತ್ರಜ್ಞಾನಕ್ಕೆ ಬದಲಾಗಲಿವೆ. 2050ಕ್ಕೆ ಇಡೀ ವಿಶ್ವದ ಮೆದುಳು ಕಂಪ್ಯೂಟರ್ನಲ್ಲಿರುತ್ತದೆ.
ಹೀಗೆಂದು ವಿಶ್ವಾಸಭರಿತರಾಗಿ ಹೇಳಿದವರು ಭಾರತರತ್ನ, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ.
ದೇರಳಕಟ್ಟೆ ಯೇನೆಪೋಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾರ್ಥಿಗಳ ಜತೆ ಸಂವಾದದಲ್ಲಿ ಮಾತನಾಡಿದರು. ಮೊದಲು ಒಬ್ಬ ಮಾನವನ ಮೆದುಳು ಸಾಮರ್ಥ್ಯ ಕಂಪ್ಯೂಟರ್ಗೆ ಇರುತ್ತದೆ. ನಂತರ ಇಡೀ ವಿಶ್ವದ ಮೆದುಳಿನ ಸಾಮರ್ಥ್ಯದಷ್ಟು ಸದೃಢ ಆಗಲಿದೆ. ಆದರೆ ಅದನ್ನು ಮಾಡಬೇಕಾದ್ದು ಮನುಷ್ಯರೇ ಎಂದು ಹೇಳಿದರು.
ಥೋರಿಯಂಗೆ ಬದಲಾವಣೆ: ಭಾರತದಲ್ಲಿರುವ ಅಣು ಸ್ಥಾವರಗಳನ್ನು ಸಮುದ್ರ ಮಟ್ಟದಿಂದ ಎತ್ತರದಲ್ಲಿರುವುದರಿಂದ ದುರಂತವಾಗದು. ಸುನಾಮಿ ಬಂದರೂ ಹೆದರುವುದು ಬೇಡ. ಇನ್ನು 10 ವರ್ಷದಲ್ಲಿ ಅಣು ಸ್ಥಾವರಗಳಲ್ಲಿ ಯುರೇನಿಯಂ ಬದಲು ಥೋರಿಯಂಗೆ ಪರಿವರ್ತನೆಯಾಗಲಿವೆ. ಅಗ ಸಮಸ್ಯೆಯೇ ಉದ್ಭವಿಸದು ಎಂದು ವಿದ್ಯಾರ್ಥಿಯ ಪ್ರಶ್ನೆಗೆ ಸ್ಪಷ್ಟಪಡಿಸಿದರು. ಹಿಂದೆ ಭಾರತದಿಂದ ಪ್ರತಿಭಾ ಪಲಾಯನವಿತ್ತು, ಈಗ ವಿದೇಶಿ ಉದ್ಯೋಗ ತ್ಯಜಿಸಿ ಭಾರತಕ್ಕೆ ವಾಪಾಸ್ ಬರುತ್ತಿದ್ದಾರೆ. ಪ್ರಸ್ತುತ ದೇಶದ 200 ಮಿಲಿಯನ್ ಮಂದಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಇಲ್ಲಿಂದ ಹೋದವರು ಕಲಿತು ಇಲ್ಲಿಗೆ ಬಂದರೆ ಭಾರತಕ್ಕೂ ಲಾಭ ಎಂದರು. ಈ ಸಂದರ್ಭ, ವಿದ್ಯಾರ್ಥಿಗಳಿಗೆ ಚುನಾವಣೆಯಲ್ಲಿ ಮತದಾನ ಮಾಡಲೇ ಬೇಕು, ವೈದ್ಯಕೀಯ ವೃತ್ತಿಯನ್ನು ಸಮರ್ಥವಾಗಿ ನಿರ್ವಹಿಸಬೇಕು, ಜೀವನದಲ್ಲಿ ದೊಡ್ಡ ಕನಸು ಕಾಣಬೇಕು ಎಂಬ ಮೂರು ರೀತಿಯ ಪ್ರತಿಜ್ಞೆ ಬೋಧಿಸಿದರು.
ಆರೋಗ್ಯವಂತ ಸಮಾಜ: ಗ್ರಾಮೀಣ ಪ್ರದೇಶದಲ್ಲಿ ಮೆಡಿಕಲ್ ವಿದ್ಯಾರ್ಥಿಗಳು ಕಡ್ಡಾಯ ಕರ್ತವ್ಯ ನಿರ್ವಹಿಸಬೇಕು. ದೇಶದಲ್ಲಿ 23 ಸಾವಿರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಅವುಗಳಿಗೆ ಕಾಯಕಲ್ಪ ಒದಗಿಸಬೇಕು. ಸಾಂಕ್ರಾಮಿಕ ರೋಗ ತಡೆಗೆ ಆರೋಗ್ಯ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ಯೇನೆಪೋಯ ವಿಶ್ವವಿದ್ಯಾಲಯ ಸಂಸ್ಥೆಗಳ ಅಧ್ಯಕ್ಷ ವೈ.ಮಹಮ್ಮದ್ ಕುಂಞ ಅಧ್ಯಕ್ಷತೆ ವಹಿಸಿದ್ದರು. ಕುಲಪತಿ ವೈ.ಅಬ್ದುಲ್ಲ ಕುಂಞ, ಉಪಕುಲಪತಿ ಡಾ.ಚಂದ್ರಮೋಹನ, ಕುಲಸಚಿವ ಡಾ.ಸಿ.ವಿ.ರಘುವೀರ ವೇದಿಕೆಯಲ್ಲಿದ್ದರು.
ಮಂಗಳೂರು ಸ್ವಚ್ಛ ನಗರ: ಡಾ.ಕಲಾಂ ಶ್ಲಾಘನೆ
ಮಂಗಳೂರು: ಮಂಗಳೂರು ಸ್ವಚ್ಛ ನಗರ. ಮಂಗಳೂರು ಔದ್ಯೋಗಿಕ, ಬ್ಯಾಂಕಿಂಗ್, ವಾಣಿಜ್ಯವಾಗಿ ಬೆಳೆಯುತ್ತಿದೆ. ಮಂಗಳೂರನ್ನು ಸ್ವಚ್ಛ ನಗರವಾಗಿ ಮುಂದುವರಿಸುವಲ್ಲಿ ಯುವಜನರ ಪಾತ್ರ ಬಹುಮುಖ್ಯ ಎಂದು ಭಾರತರತ್ನ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಹೊಗಳಿದ್ದಾರೆ. ನಗರದ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಮಂಗಳವಾರ ಯುವ ಮತದಾರರ ಜಾಗೃತಿ ಬಗ್ಗೆ ಸಂವಾದ ನಡೆಸಿ ಈ ಮಾತು ಹೇಳಿದರು. ಮಂಗಳೂರಿನಿಂದ ಸರಕು ರಫ್ತಾಗುತ್ತಿದೆ. ರಸಗೊಬ್ಬರ ಕಾರ್ಖಾನೆಯೂ ಇಲ್ಲಿದೆ. ಗರಿಷ್ಠ ಪ್ರಮಾಣದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಇಲ್ಲಿಂದಲೇ ರೂಪುಗೊಳ್ಳುತ್ತಿದ್ದಾರೆ. ಆದ್ದರಿಂದ ಮಂಗಳೂರು ಚರಿತ್ರಾರ್ಹ ಪ್ರದೇಶವಾಗಿದೆ. ಮೌರ್ಯ ಹಾಗೂ ಅಶೋಕನ ಆಳ್ವಿಕೆ ಇಲ್ಲಿತ್ತು ಎಂದು ಚರಿತ್ರೆ ಉಲ್ಲೇಖಿಸಿ ಮಾತನಾಡಿದರು. 1954ರಲ್ಲಿ ಮೆದ್ರಾಸ್ ತಾಂತ್ರಿಕ ವಿದ್ಯಾಲಯದಲ್ಲಿ ಓದುತ್ತಿದ್ದಾಗ ಮಂಗಳೂರಿನ ಮಹಾಬಲೇಶ್ವರ ಭಟ್ ನನ್ನ ಉತ್ತಮ ಸ್ನೇಹಿತರಾಗಿದ್ದರು ಎಂದು ಮೆಲುಕು ಹಾಕಿದ ಡಾ.ಕಲಾಂ, ನಾವು ಒಟ್ಟಿಗೆ ಕೆಲಸ ಮಾಡಿದ್ದೆವು. ಅವರೊಬ್ಬ ಉತ್ತಮ ಗೆಳೆಯ. ತನ್ನ ಸಂಶೋಧನೆಯಲ್ಲೂ ಅವರು ಒಳ್ಳೆಯ ಸಹಕಾರ ನೀಡುತ್ತಿದ್ದರು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

