ದಕ್ಷಿಣ ಕನ್ನಡ

ಪೊಲೀಸ್ ಭದ್ರತೆಯಲ್ಲಿ ಬಿಸಿಎಂ ಹಾಸ್ಟೆಲ್‌ಗೆ ಬೋರ್‌ವೆಲ್

Published On :

ಬಂಟ್ವಾಳ:  ಸಾರ್ವಜನಿಕರ ಪ್ರತಿಭಟನೆ ಎಚ್ಚರಿಕೆಯಿಂದ ಕೊನೆಗೂ ಎಚ್ಚೆತ್ತ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳು ಪಾಣೆಮಂಗಳೂರು-ಬಂಗ್ಲೆಗುಡ್ಡೆ ಎಸ್ಸಿ ಎಸ್ಟಿ ವಿದ್ಯಾರ್ಥಿ ನಿಲಯಕ್ಕೆ ಭಾನುವಾರ ಪೊಲೀಸ್ ಬಂದೋಬಸ್ತ್‌ನಲ್ಲಿ ಕೊಳವೆಬಾವಿ ಕೊರೆಸುವ ಮೂಲಕ ವಿದ್ಯಾರ್ಥಿಗಳ ಬವಣೆಗೆ ಸ್ಪಂದಿಸಿದ್ದಾರೆ.
ಬಂಗ್ಲೆಗುಡ್ಡೆಯಲ್ಲಿ ಕಾರ್ಯಾಚರಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯಗಳ ಸರ್ಕಾರಿ ಜಾಗವನ್ನು ವ್ಯಕ್ತಿಯೊಬ್ಬರು ತನ್ನ ಕುಮ್ಕಿ ಜಾಗವೆಂದು ವಾದಿಸುತ್ತಾ ನಿಲಯದ ಅಂಗಳ ಹಾಗೂ ದಾರಿಗೆ ಕಲ್ಲುಗಳನ್ನಿಟ್ಟು ವಿದ್ಯಾರ್ಥಿಗಳಿಗೆ ನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ನಿಲಯ ಪಾಲಕ ಹಾಗೂ ಇಲಾಖಾಧಿಕಾರಿಗಳು ಪೊಲೀಸ್ ಅಧಿಕಾರಿಗಳಿಗೆ, ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಿದ್ದರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ಮೀನಮೇಷ ಎಣಿಸಿದ್ದರು.
ಈ ಬಗ್ಗೆ ಸ್ಥಳೀಯರು ಸ್ವತಹ ಇಲಾಖಾ ತಾಲೂಕು ವಿಸ್ತರಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರಲ್ಲದೆ ವಿದ್ಯಾರ್ಥಿಗಳ ಬವಣೆಗೆ ನೀವೇ ನೇರಹೊಣೆಯಾಗಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು.
ನಿಲಯಕ್ಕೆ 2013-14ನೇ ಸಾಲಿನ ರು. 1 ಲಕ್ಷ ಅನುದಾನದಲ್ಲಿ ಮಂಜೂರಾದ ಕೊಳವೆ ಬಾವಿ ತೋಡಲು ಗುತ್ತಿಗೆದಾರರು ಇತ್ತೀಚೆಗೆ ಬೋರ್‌ವೆಲ್ ವಾಹನದೊಂದಿಗೆ ನಿಲಯದ ಆವರಣದೊಳಗೆ ಆಗಮಿಸಿದ ವೇಳೆ ಸ್ಥಳೀಯ ವ್ಯಕ್ತಿ ಕೊಳವೆ ಬಾವಿ ನಿರ್ಮಾಣಕ್ಕೆ ಅಡ್ಡಿಪಡಿಸಿದ್ದಲ್ಲದೆ ವಾಹನವನ್ನು ಹಿಂದಕ್ಕೆ ಕಳುಹಿಸಿದ್ದರು.
ಎಚ್ಚೆತ್ತ ಅಧಿಕಾರಿಗಳು ಡಿ.ಸಿ.ಯಿಂದ ಪರವಾನಗಿ ಪತ್ರ ಪಡೆದು ಭಾನುವಾರ ಪೊಲೀಸ್ ರಕ್ಷಣೆಯಲ್ಲಿ ಕೊಳವೆ ಬಾವಿ ತೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ಸ್ಥಳಕ್ಕಾಗಮಿಸಿದ ಸ್ಥಳೀಯ ವ್ಯಕ್ತಿ ಮತ್ತವರ ಮಕ್ಕಳು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ನ್ಯಾಯಾಲಯದ ತಡೆಯಾಜ್ಞೆ ಆದೇಶ ಇಲ್ಲದಿರುವುದರಿಂದ ಮೇಲಧಿಕಾರಿಗಳ ಆದೇಶ ಪಾಲಿಸುವುದಾಗಿ ಪೊಲೀಸರು ಖಡಕ್ ಆಗಿ ಉತ್ತರಿಸಿ ವ್ಯಕ್ತಿಯನ್ನು ವಾಪಸು ಕಳಿಸಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.