ದಕ್ಷಿಣ ಕನ್ನಡ

ಮಹಿಳಾ ಸಿಬ್ಬಂದಿಗೆ ಮತಗಟ್ಟೆ ವಾಸ್ತವ್ಯ ವಿನಾಯ್ತಿ; ಆಯೋಗಕ್ಕೆ ತಿರುಗುಬಾಣ?

Published On :

ಮಂಗಳೂರು: ಈ ಬಾರಿ ಲೋಕಸಭೆ ಚುನಾವಣೆ ವೇಳೆ ಮತಗಟ್ಟೆಯಲ್ಲಿ ರಾತ್ರಿ ಮಹಿಳಾ ಸಿಬ್ಬಂದಿಗೆ ಕಡ್ಡಾಯ ವಾಸ್ತವ್ಯದಿಂದ ವಿನಾಯಿತಿ ನೀಡಿದ ಆಯೋಗದ ಕ್ರಮ ಅದಕ್ಕೆ ತಿರುಗುಬಾಣವಾಗಿದೆ.
ಚುನಾವಣಾ ಆಯೋಗದ ನಿಯಮ ಪ್ರಕಾರ, ಮತಗಟ್ಟೆಗೆ ಮತಗಟ್ಟೆ ಅಧಿಕಾರಿಯೇ ಸುಪ್ರೀಂ. ಮತಪೆಟ್ಟಿಗೆ ಭದ್ರತೆ ಸೇರಿದಂತೆ ಇಡೀ ಮತಗಟ್ಟೆಯ ನಿಯಂತ್ರಣ ಮತಗಟ್ಟೆ ಅಧಿಕಾರಿ ಮೇಲಿರುತ್ತದೆ. ಆದರೆ ಸಮಸ್ಯೆ ಬರುವುದು ಮಹಿಳೆಯರು ಮತಗಟ್ಟೆ ಅಧಿಕಾರಿ ಆದಾಗ.
ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ನೌಕರರು ರಾತ್ರಿ ವಾಸ್ತವ್ಯ ಇರುವುದು ಕಡ್ಡಾಯವಲ್ಲ ಎಂದು ಈಗಾಗಲೇ ಆಯೋಗ ಜಿಲ್ಲಾ ಚುನಾವಣಾಧಿಕಾರಿಗಳಿಗೆ ತಿಳಿಸಿದೆ. ಹೀಗಿರುವಾಗ ಮಹಿಳಾ ಮತಗಟ್ಟೆ ಅಧಿಕಾರಿಗೆ ಮತಗಟ್ಟೆಯಲ್ಲಿ ರಾತ್ರಿ ವಾಸ್ತವ್ಯದಿಂದ ಹೇಗೆ ವಿನಾಯ್ತಿ ನೀಡುವುದು ಎಂಬ ಜಿಜ್ಞಾಸೆ, ಗೊಂದಲ ಜಿಲ್ಲೆಯ ಚುನಾವಣಾಧಿಕಾರಿಗಳನ್ನು ಕಾಡುತ್ತಿದೆ.
ಹೇಗೂ ಈ ಬಾರಿ ಮಹಿಳಾ ಸಿಬ್ಬಂದಿಯನ್ನು ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಇದರಿಂದ ಇಡಿಸಿ ಮತದಾನಕ್ಕೂ ಸಿಬ್ಬಂದಿಗೆ ಅನುಕೂಲ. ಇಷ್ಟೆಲ್ಲ ಸೌಲಭ್ಯ, ಸವಲತ್ತನ್ನು ಆಯೋಗ ಕಲ್ಪಿಸಿರುವಾಗ ಮತಗಟ್ಟೆ ಜವಾಬ್ದಾರಿ ಹೊಂದಿರುವ ಮಹಿಳಾ ಅಧಿಕಾರಿ ಮತಗಟ್ಟೆಯಲ್ಲಿ ರಾತ್ರಿ ವಾಸ್ತವ್ಯ ಹೂಡಲೇ ಬೇಕಾಗುತ್ತದೆ ಎನ್ನುವುದು ಚುನಾವಣಾಧಿಕಾರಿಗಳ ಅಭಿಪ್ರಾಯ.
'ಮನೆಗೆ ಹೋಗಿಬರುವಷ್ಟು ಅನುಕೂಲ ಇರುವವರು ಮರುದಿನ ಬೆಳಗ್ಗೆ ಬರಬಹುದು. ಇದನ್ನು ಮತಗಟ್ಟೆ ಅಧಿಕಾರಿ ಹೊರತುಪಡಿಸಿ ಬೇರೆ ಮಹಿಳಾ ಸಿಬ್ಬಂದಿಗೆ ಅನ್ವಯಿಸಬಹುದು. ಈ ಬಗ್ಗೆ ಆಯೋಗದಿಂದ ಅಧಿಕೃತ ಸೂಚನೆ ಬಂದಿಲ್ಲ. ಹಾಗಾಗಿ ಮತಗಟ್ಟೆ ಮಹಿಳಾ ಅಧಿಕಾರಿ ವಿಚಾರದಲ್ಲಿ ಆಯೋಗದಿಂದ ಸ್ಪಷ್ಟೀಕರಣ ಕೋರಲು ನಿರ್ಧರಿಸಲಾಗಿದೆ' ಎನ್ನುತ್ತಾರೆ ಸಹಾಯಕ ಚುನಾವಣಾಧಿಕಾರಿ ಸದಾಶಿವ ಪ್ರಭು.
6 ಗಂಟೆಗೇ ಅಣಕು ಮತದಾನ: ಇದುವರೆಗೆ ಮತಗಟ್ಟೆಯಲ್ಲಿ ಅಣಕು ಮತದಾನ ಮತದಾನ ದಿನ ಬೆಳಗ್ಗೆ 6.30ಕ್ಕೆ ಇರುತ್ತಿತ್ತು. ಈ ಬಾರಿ 6 ಗಂಟೆಗೇ ನಿಗದಿಪಡಿಸಲಾಗಿದೆ. ರಾತ್ರಿ ಬೇರೆಡೆ ವಾಸ್ತವ್ಯಕ್ಕೆ ಹೋದ ಮತಗಟ್ಟೆ ಸಿಬ್ಬಂದಿ ಮರುದಿನ ಬೆಳಗ್ಗೆ 5 ಗಂಟೆಗೆ ಮತಗಟ್ಟೆಯಲ್ಲಿ ಹಾಜರಿರುವಂತೆ ಚುನಾವಣಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಈ ಹಿಂದೆ ಪ್ರತಿ ಅಭ್ಯರ್ಥಿಗೆ ಮೂರ್ನಾಲ್ಕು ಅಣಕು ಮತ ಚಲಾಯಿಸಿ, ಮತಯಂತ್ರ ಸರಿ ಇದೆಯೇ ಎಂದು ಮತಗಟ್ಟೆ ಸಿಬ್ಬಂದಿ ಪರೀಕ್ಷಿಸುತ್ತಿದ್ದರು. ಈ ಸಲ ಎಲ್ಲ ಅಭ್ಯರ್ಥಿ ಹಾಗೂ ನೋಟಾ ಸೇರಿ 50 ಅಣಕು ಮತ ಚಲಾವಣೆ ಆಗಬೇಕು. ಮತಗಟ್ಟೆ ಏಜೆಂಟರು ಈ ಸಂದರ್ಭ ಮತಗಟ್ಟೆಯಲ್ಲಿ ಹಾಜರಿರಬೇಕು. ನಂತರ ಅದರ ಎಣಿಕೆ, ಪರಿಶೀಲನೆ ನಡೆದು, ಮತಯಂತ್ರ ಸಮರ್ಪಕವಾಗಿದೆ ಎಂದು ಖಾತರಿ ಪಡಿಸಿದ ಬಳಿಕವೇ 7 ಗಂಟೆಗೆ ಮತದಾನ ಪ್ರಾರಂಭವಾಗುತ್ತದೆ.

ಮಸ್ಟರಿಂಗ್ ದಿನ ಬೆಳಗ್ಗೆ ಈವರೆಗೆ ಮತಗಟ್ಟೆಗೆ ತೆರಳುವ ಸಿಬ್ಬಂದಿ 8 ಗಂಟೆಗೆ ಮಸ್ಟರಿಂಗ್ ಕೇಂದ್ರಕ್ಕೆ ಬರಬೇಕಿತ್ತು. ಈ ಬಾರಿ ಒಂದೂವರೆ ಗಂಟೆ ತಡವಾಗಿ ಅಂದರೆ 9.30ಕ್ಕೆ ಹಾಜರಿದ್ದರೆ ಸಾಕು ಎಂದು ಆಯೋಗ ಸೂಚಿಸಿದೆ. ವಿವಿಧ ಕಡೆಗಳಿಂದ ಆಗಮಿಸುವ ಸಿಬ್ಬಂದಿಗೆ ಬೆಳಗ್ಗೆ 7.30ರಿಂದ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಲು ಆಯೋಗ ಬಸ್ ಸೌಲಭ್ಯ ಒದಗಿಸಿದೆ.
    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.