ಗಾಯತ್ರಿ ನಾವಡ, ಶೀಲಾ ಶೆಟ್ಟಿಗೆ ರಾಣಿ ಅಬ್ಬಕ್ಕ ಪ್ರಶಸ್ತಿ, ಪುರಸ್ಕಾರ
ಮಂಗಳೂರು: ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ನೀಡುವ ಅಬ್ಬಕ್ಕ ಪ್ರಶಸ್ತಿ ಮತ್ತು ಪುರಸ್ಕಾರಗಳಿಗೆ ಸಂಶೋಧಕಿ ಡಾ. ಗಾಯತ್ರಿ ವಿ. ನಾವಡ ಮತ್ತು ಕಲಾ ಸಂಘಟಕಿ ಶೀಲಾ ಕೆ.ಶೆಟ್ಟಿ ಎರ್ಮಾಳ್ ಆಯ್ಕೆಯಾಗಿದ್ದಾರೆ.
ಡಾ.ಅಮೃತ ಸೋಮೇಶ್ವರ, ಕೆ.ಜಯರಾಮ ಶೆಟ್ಟಿ, ಡಾ.ವಾಮನ ನಂದಾವರ, ದಿನಕರ ಉಳ್ಳಾಲ್ ಮತ್ತು ಭಾಸ್ಕರ ರೈ ಕುಕ್ಕುವಳ್ಳಿ ಒಳಗೊಂಡ ಆಯ್ಕೆ ಸಮಿತಿ ಇಬ್ಬರು ಸಾಧಕರಿಗೆ ಪ್ರಶಸ್ತಿಗೆ ಶಿಫಾರಸು ಮಾಡಿದೆ ಎಂದು ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗಾಯತ್ರಿ ನಾವಡ: ಕೋಟೇಶ್ವರ ಅನಂತಕೃಷ್ಣ ವರ್ಣ ಮತ್ತು ಕಮಲಮ್ಮ ದಂಪತಿ ಪುತ್ರಿ ಗಾಯತ್ರಿ, ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಲ್ಲಿ ವ್ಯಾಸಂಗ ಮಾಡಿದರು. ಮಣಿಪಾಲ ವಿವಿ ಫೆಲೋಶಿಪ್‌ನಲ್ಲಿ ಸಿರಿಪಂಥ ಕುರಿತು ಸಂಶೋಧನೆ ನಡೆಸಿದ್ದಾರೆ. ಗುಲ್ಬರ್ಗ ಮತ್ತು ಮಣಿಪಾಲ ವಿವಿಯಿಂದ ಎರಡು ಪಿಎಚ್‌ಡಿ ಪದವಿ ಪಡೆದಿದ್ದಾರೆ.
ಮೂಕಜ್ಜಿ ಬದುಕು ಸಾಹಿತ್ಯ, ಚಿತ್ತಾರ ಬರೆದ ಬದುಕು, ನಮ್ಮ ಹೆಣ್ಣುಮಗು, ಕಾಡ್ಯನಾಟಿ ಪಠ್ಯ ಮತ್ತು ಪ್ರದರ್ಶನ, ಸಾಮೂಹಿಕ ವಿವಾಹ ಒಂದು ಅಧ್ಯಯನ, ತೇರು, ಸಿರಿಕತೆ, ವಿರಚನೆ ಭಾರತೀಯ ಸ್ತ್ರೀವಾದ ಸಹಿತ ಅನೇಕ ಕೃತಿ ರಚಸಿದ್ದಾರೆ. ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ. ಇವರ ಪತಿ ಪ್ರೊ.ಎ.ವಿ. ನಾವಡ ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಅಧ್ಯಾಪಕರು, ಹೆಸರಾಂತ ಜಾನಪದ ಸಂಶೋಧಕರು.
ಶೀಲಾ ಶೆಟ್ಟಿ ಎರ್ಮಾಳ್: ದಿ.ಕಾಂತಪ್ಪ ಶೆಟ್ಟಿ, ರತಿ ಶೆಟ್ಟಿ ದಂಪತಿ ಪುತ್ರಿ ಶೀಲಾ, ಎಳವೆಯಲ್ಲಿ ಯಕ್ಷಗಾನ ವೇಷ ಹಾಕುತ್ತಿದ್ದರು. ಸಂಘಟಕಿಯಾಗಿ ಅವರು ಮಾಡಿದ ಸಾಧನೆ ಅನನ್ಯ. ಶ್ರೀನಿಧಿ ಮಹಿಳಾ ಯಕ್ಷಕಲಾ ರಂಗದ ಮೂಲಕ ಹೆಣ್ಣುಮಕ್ಕಳನ್ನು ತರಬೇತು ಗೊಳಿಸಿ ತೆಂಕುತಿಟ್ಟಿನಲ್ಲಿ ಪ್ರಥಮ ಮಹಿಳಾ ತಂಡವನ್ನು ಕಟ್ಟಿದ ಕೀರ್ತಿ ಶೀಲಾ ಅವರಿಗೆ. ಆಕಾಶವಾಣಿ, ದೂರದರ್ಶನದಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಅನೇಕ ಗೌರವ, ಪುರಸ್ಕಾರಗಳು ಸಂದಿವೆ. ಕನ್ನಡ ಮತ್ತು ತುಳು ಭಾಷೆಯಲ್ಲಿ ಕತೆ, ಕವಿತೆ, ನಾಟಕ ಬರೆದಿದ್ದಾರೆ. ಮಾರಿಪೂಜೆ, ಸಿದ್ಧಪ್ರಸಾದ, ಸುಘೋಷ, ಭಾವಗಂಗೆ, ಅಗ್ನಿಕನ್ಯೆ, ಸತ್ಯ ಹರಿಶ್ಚಂದ್ರ, ತೇವು ತುಜಂಕ್ ಇತ್ಯಾದಿ ಅನೇಕ ಕೃತಿಗಳನ್ನು ರಚಿಸಿದ್ದಾರೆ.
ಪ್ರಶಸ್ತಿ ಮತ್ತು ಪುರಸ್ಕಾರ ತಲಾ 20 ಸಾವಿರ ನಗದು ಹೊಂದಿದೆ.
ಪ್ರಶಸ್ತಿ ಪ್ರದಾನ: ಫೆ.17 ಮತ್ತು 18ರಂದು ಬಂಟ್ವಾಳ ಮುಡಿಪು ಕುರ್ನಾಡು ಪಿಯು ಕಾಲೇಜ್‌ನಲ್ಲಿ ನಡೆಯುವ ವೀರ ರಾಣಿ ಅಬ್ಬಕ್ಕ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್ ಭಾಗವಹಿಸುವರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತಾಧ್ಯಕ್ಷ ಕೆ.ಜಯರಾಮ ಶೆಟ್ಟಿ, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

