ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Published On :

ಅಕ್ರಮ ಗಾಂಜಾ ವಶ, ಇಬ್ಬರ ಸೆರೆ
ಮಂಗಳೂರು: ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಭಾನುವಾರ ನಗರ ಅಪರಾಧ ಪತ್ತೆದಳ ಪೊಲೀಸರು ಬಂಧಿಸಿದ್ದಾರೆ. ಸಹಾಯಕ ಕಮಿಷನರ್ ಡಾ.ಪ್ರಶಾಂತ್ ನೇತೃತ್ವದಲ್ಲಿ ದಾಳಿ ನಡೆಸಿದ ಸಿಸಿಬಿ ಇನ್ಸ್‌ಪೆಕ್ಟರ್ ವೆಲೈಂಟೆನ್ ಡಿಸೋಜ, ಸಿಬ್ಬಂದಿಗಳು ಆರೋಪಿ ಒಡಿಶಾದ ಬೊಂಡಾವಡಾ ನಿವಾಸಿ ಬಬ್ಬು ಯಾನೆ ಬಬ್ಲು ಖಾರ್ಜಿ(33) ಮತ್ತು ಮೂಡುಶೆಡ್ಡೆ ನಿವಾಸಿ ವೆಂಕಟೇಶ್(33)ಎಂಬಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ರು. 50 ಸಾವಿರ ಮೌಲ್ಯದ 3 ಕೇಜಿ ಗಾಂಜಾ ವಶಪಡಿಸಿದ್ದಾರೆ. 5 ಗ್ರಾಮ್ ಗಾಂಜಾವನ್ನು ರು. 100ರಂತೆ ಮಾರಾಟ ಮಾಡುತ್ತಿದ್ದರು. ಒಡಿಶಾದಿಂದ ಗಾಂಜಾ ತರಿಸಿ ನಗರದಲ್ಲಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಿತರಿಸಲು ತಂದಿದ್ದರು. ಕಾರ್ಯಾಚರಣೆಯಲ್ಲಿ ಎಸ್‌ಐ ಶ್ಯಾಮಸುಂದರ, ಸಿಬ್ಬಂದಿಗಳಾದ ಶಶಿಧರ ಶೆಟ್ಟಿ, ಗಣೇಶ್ ಎಂ.ಪಿ, ಗಣೇಶ್ ಕಲ್ಲಡ್ಕ, ವೇಣುಗೋಪಾಲ, ಚಂದ್ರಶೇಖರ, ದಿನೇಶ್ ಬೇಕಲ್, ತೇಜಕುಮಾರ್ ಇದ್ದರು.
ಬೈಕ್ ಮುಖಾಮುಖಿ; ಮೂವರಿಗೆ ಗಾಯ
ಕುಂದಾಪುರ: ಎರಡು ಬೈಕ್‌ಗಳು ಪರಸ್ಪರ ಡಿಕ್ಕಿಯಾಗಿ ಸವಾರರಿಬ್ಬರು ಹಾಗೂ ಒಬ್ಬ ಸಹಸವಾರ ಗಾಯಗೊಂಡ ಘಟನೆ ಕಸಬಾ ಗ್ರಾಮದ ಹಳೆ ಬಸ್ ನಿಲ್ದಾಣದ ಶ್ರೀ ಮಂಜುನಾಥ ಆಸ್ಪತ್ರೆಯ ಬಳಿ ಶನಿವಾರ ನಡೆದಿದೆ. ಗಾಯಗೊಂಡವರನ್ನು ಈಶಾಮ್, ರಾಜೇಶ್ ಹಾಗೂ ನಿತೇಶ್ ಎಂದು ಗುರುತಿಸಲಾಗಿದೆ. ಈಶಾಮ್  ಎಂಬವರು ತಮ್ಮ ಬೈಕಿನಲ್ಲಿ ರಾಜೇಶ್ ಎಂಬವರನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ಎದುರಿನಿಂದ ನೀತೇಶ್  ಅವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್‌ಗೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೇರು ನೆಡುತೋಪಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಸರಳೀಕಟ್ಟೆ ಗೇರು ನೆಡುತೋಪಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಇಡೀ ಪ್ರದೇಶ ಬೆಂಕಿಗಾಹುತಿಯಾದ ಘಟನೆ ಭಾನುವಾರ ನಡೆದಿದೆ.
ಗೇರು ನೆಡುತೋಪಿನಲ್ಲಿ ಮುಳಿ ಹುಲ್ಲು ಹುಲುಸಾಗಿ ಬೆಳೆದಿದ್ದು, ಕಟಾವಿಗೆ ಬಂದಿತ್ತು ಎನ್ನಲಾಗಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿದ ಕಾರಣ ಕ್ಷಣ ಮಾತ್ರದಲ್ಲಿ ಬೆಂಕಿ ಪಸರಿಸಿ ಇಡೀ ಪ್ರದೇಶವನ್ನಾವರಿಸಿತು. ಪರಿಣಾಮ ಹುಲ್ಲು ಸಂಪೂರ್ಣ ಬೆಂಕಿಗಾಹುತಿಯಾಗಿ, ಗೇರು ಮರಗಳೂ ಬೆಂಕಿಯ ಕೆನ್ನಾಲಗೆಗೆ ಸಿಲುಕಿದವು.
ಪುತ್ತೂರು ಮತ್ತು ಬೆಳ್ತಂಗಡಿಯ ಅಗ್ನಿಶಾಮದಳ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಶ್ರಮಿಸಿದವು. ಗೇರು ನೆಡುತೋಪಿನಲ್ಲಿ ಬಿಲಗಳಲ್ಲಿ ವಾಸಿಸುತ್ತಿರುವ ಹಲವಾರು ಕಾಡುಪ್ರಾಣಿಗಳು, ಹಾವುಗಳು ಬೆಂಕಿಯಿಂದಾಗಿ ಜೀವ ಕಳೆದುಕೊಂಡವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.