ಇನ್ನು ಅವಘಡ ನಿರ್ವಹಣೆ ಸಲೀಸು
ಮಂಗಳೂರು: ರಾಜ್ಯದಲ್ಲಿ ಬರ, ಪ್ರವಾಹ, ರೋಗರುಜಿನ, ಅಗ್ನಿದುರಂತ, ವಿಧ್ವಂಸಕ ಕೃತ್ಯ ಇಂತಹ ಯಾವುದೇ ಅವಘಡ ಸಂಭವಿಸಲಿ ಅದನ್ನು ಸಮರ್ಥವಾಗಿ ನಿಭಾಯಿಸುವುದು ಇನ್ನು ಸುಲಭ. ಇದಕ್ಕೆಂದೇ ಸಂಪನ್ಮೂಲ ಮ್ಯಾಪಿಂಗ್ ಕಾರ್ಯ ನಡೆಯುತ್ತಿದೆ.
ಪ್ರಥಮ ಹಂತದಲ್ಲಿ 10 ಜಿಲ್ಲೆಯನ್ನು ಆಯ್ಕೆ ಮಾಡಿದ್ದು, ರಾಯಚೂರು ಜಿಲ್ಲೆಯಲ್ಲಿ ಸಂಪನ್ಮೂಲ ಮ್ಯಾಪಿಂಗ್ ಪೂರ್ಣಗೊಂಡಿದೆ. ಉಳಿದ ಜಿಲ್ಲೆಗಳಲ್ಲಿ ಮ್ಯಾಪಿಂಗ್ ಕಾರ್ಯ ಮುಂದುವರಿಯುತ್ತಿದೆ. ಮುಂದಿನ ಹಂತಗಳಲ್ಲಿ ಎಲ್ಲ 30 ಜಿಲ್ಲೆಯಲ್ಲೂ ಸಂಪನ್ಮೂಲ ಮ್ಯಾಪಿಂಗ್ ನಡೆಯಲಿದೆ. ರಾಜ್ಯ ಆಡಳಿತ ತರಬೇತಿ ಸಂಸ್ಥೆ ಇದನ್ನು ನಡೆಸುತ್ತಿದೆ.
ಯಾಕಾಗಿ ಮ್ಯಾಪಿಂಗ್?: ಜಿಲ್ಲೆಯಲ್ಲಿ ಯಾವುದೇ ದೊಡ್ಡ ಪ್ರಮಾಣದಲ್ಲಿ ಅವಘಡ ಸಂಭವಿಸಿದಾಗ ತ್ವರಿತವಾಗಿ ಪರಿಹಾರ ಕಾರ್ಯ ಕೈಗೊಳ್ಳಲು ಪ್ರಾಕೃತಿಕ ವಿಪತ್ತು ನಿರ್ವಹಣಾ ವ್ಯವಸ್ಥೆ ಜಾರಿಯಲ್ಲಿರುತ್ತದೆ.
ಈವರೆಗೆ ಕೇವಲ ಹೆಸರಿಗೆ ಮಾತ್ರ ಈ ವ್ಯವಸ್ಥೆ. ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎಲ್ಲ ಇಲಾಖೆಗಳನ್ನು ಒಳಗೊಂಡಂತೆ ಅಧಿಕಾರಿಗಳು, ಸಿಬ್ಬಂದಿ ಪರಿಹಾರ ಕಾರ್ಯಾಚರಣೆ ಜವಾಬ್ದಾರಿ ಹೊಂದಿರುತ್ತಾರೆ. ಆದರೆ ವಿವಿಧ ಅವಘಡಗಳಲ್ಲಿ ಯಾವ ರೀತಿ ಪರಿಹಾರ ಕ್ರಮ ಕೈಗೊಳ್ಳಬೇಕು, ಯಾರನ್ನು ಸಂಪರ್ಕಿಸಬೇಕು ಎಂದರೆ ಯಾವುದೇ ಸಿದ್ಧ ಮಾಹಿತಿಗಳು ಇವರಲ್ಲಿ ಇರುವುದಿಲ್ಲ. ಒಂದಷ್ಟು ಅಂಕಿ ಅಂಶ ಹೊಂದಿರುವುದು ಬಿಟ್ಟರೆ ಸಮಗ್ರ ಮಾಹಿತಿ ಇಲ್ಲ. ಈ ಕೊರತೆಯಿಂದ ಪ್ರಾಕೃತಿಕ ಅವಘಡ, ದುರಂತಗಳು ಸಂಭವಿಸಿದಾಗ ನಿರೀಕ್ಷಿತ ರೀತಿಯಲ್ಲಿ ಜಿಲ್ಲಾಡಳಿತಗಳಿಗೆ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ಇದನ್ನು ಮನಗಂಡ ಸರ್ಕಾರ ಪ್ರತಿ ಜಿಲ್ಲೆಯ ಎಲ್ಲ ಪ್ರದೇಶಗಳ ಸಮಗ್ರ ಮಾಹಿತಿಯನ್ನು ಒಂದೆಡೆ ದಾಖಲೀಕರಿಸಲು ಕೈಗೊಂಡ ಯೋಜನೆಯೇ ಸಂಪನ್ಮೂಲ ಮ್ಯಾಪಿಂಗ್.
ಮ್ಯಾಪಿಂಗ್ ವಿಧಾನ ಹೇಗೆ?: ಆಡಳಿತ ತರಬೇತಿ ಸಂಸ್ಥೆಯಡಿ ಟಾಮ್ಡ್(ಟೆಕ್ನಾಲಜಿ ಅಟೋಮೆಷನ್ ಫಾರ್ ಮೆನೇಜ್ಮೆಂಟ್ ಆಫ್ ಎಮರ್ಜೆನ್ಸಿಸ್ ಅಂಡ್ ಡಿಸಾಸ್ಟರ್ಸ್)2012ರಲ್ಲಿ ಚಾಲನೆಗೆ ಬಂತು. ಮೊದಲು ಪ್ರಾಯೋಗಿಕವಾಗಿ ರಾಯಚೂರು ಜಿಲ್ಲೆಯನ್ನು ಆಯ್ಕೆ ಮಾಡಲಾಯಿತು. ಆಡಳಿತ ತರಬೇತಿ ಸಂಸ್ಥೆಯ ಮೈಸೂರು ವಿಭಾಗದ ಸಿಬ್ಬಂದಿ ಮಾಹಿತಿ ಸಂಗ್ರಹಿಸುವ ಬಗ್ಗೆ ಜಿಲ್ಲೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ತರಬೇತಿ ನೀಡುತ್ತಾರೆ.
ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್) ಮತ್ತು ಜಿಐಎಸ್ (ಜಿಯೋಗ್ರಾಫಿಕ್ ಇನ್ಫಾರ್ಮೇಷನ್ ಸಿಸ್ಟಮ್) ವಿಧಾನದಲ್ಲಿ ಮಾಹಿತಿ ದಾಖಲೀಕರಣ ಮಾಡುತ್ತಾರೆ. ಇದಕ್ಕೆ ಪ್ರತ್ಯೇಕ ಸಾಫ್ಟ್ವೇರ್ ಇದೆ. ಮುಖ್ಯವಾಗಿ ಅವಘಡ ನಡೆಯುವ ಸಂಭಾವ್ಯ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಚಿತ್ರಣವನ್ನು ವಿಶೇಷ ಮೊಬೈಲ್ ಕ್ಯಾಮರಾದಲ್ಲಿ ತೆಗೆಯುತ್ತಾರೆ. ಅದನ್ನು ಸಾಫ್ಟ್ವೇರ್ಗೆ ಅಪ್ಲೋಡ್ ಮಾಡುತ್ತಾರೆ.
ಅಲ್ಲದೆ ಅಲ್ಲಿರುವ ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆ, ಸ್ಥಳೀಯಾಡಳಿತ, ತುರ್ತು ಪರಿಹಾರಕ್ಕೆ ನೆರವಾಗುವ ಸಾಧನ, ಸಲಕರಣೆ, ವಾಹನ, ಆರೋಗ್ಯ ಕೇಂದ್ರ, ಆಸ್ಪತ್ರೆ, ಸ್ವಯಂಸೇವಾ ಸಂಘಟನೆಗಳು, ಸಂಪರ್ಕ ಸಂಖ್ಯೆ ಹೀಗೆ ಸಮಗ್ರ ವಿವರವನ್ನು ವಿವಿಧ ಕಾಲಂಗಳಲ್ಲಿ ನಮೂದಿಸುತ್ತಾರೆ. ಪ್ರದೇಶದ ನಕ್ಷೆಯೂ ಇರುತ್ತದೆ.
'ಒಂದು ಪ್ರದೇಶದಲ್ಲಿ ಪ್ರವಾಹದಂಥ ಅವಘಡ ತಲೆದೋರಿದರೆ, ಅಲ್ಲಿ ತಕ್ಷಣವೇ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮದ ಎಲ್ಲ ವಿವರಗಳೂ ಸಾಫ್ಟ್ವೇರ್ನಲ್ಲಿ ದಾಖಲಾಗಿರುತ್ತದೆ. ಇದರಿಂದ ಕ್ಷಣಾರ್ಧದಲ್ಲಿ ಸಂಬಂಧಿತರ ಜತೆ ಸಂಪರ್ಕ ಸಾಧಿಸಿ ಪರಿಹಾರ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತದೆ. ಇದರಿಂದ ಲಭ್ಯ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಳ್ಳಲು ಮ್ಯಾಪಿಂಗ್ ನೆರವಾಗುತ್ತದೆ' ಎನ್ನುತ್ತಾರೆ ಫ್ಯಾಕ್ಟರೀಸ್ ಆಂಡ್ ಬಾಯ್ಲರ್ಸ್ ಇಲಾಖೆ ಉಪನಿರ್ದೇಶಕ ನಂಜಪ್ಪ.
ಪ್ರಾಕೃತಿಕ ವಿಕೋಪ, ದುರಂತಗಳ ಪರಿಣಾಮಕಾರಿ ನಿರ್ವಹಣೆಗೆ ಆಡಳಿತ ತರಬೇತಿ ಸಂಸ್ಥೆಯ ಮಹಾನಿರ್ದೇಶಕ ಅಮಿತಾ ಪ್ರಸಾದ್ ಮುತುವರ್ಜಿಯಲ್ಲಿ ಸಂಪನ್ಮೂಲ ಮ್ಯಾಪಿಂಗ್ ಕಾರ್ಯ ನಡೆಸಲಾಗುತ್ತಿದೆ. ರಾಯಚೂರು ಬಳಿಕ ಬಿಜಾಪುರ, ಬಾಗಲಕೋಟೆ, ಹಾಸನ, ಮಂಡ್ಯ, ಚಿಕ್ಕಮಗಳೂರು, ದ.ಕ, ಉಡುಪಿ, ಕೊಡಗು, ಮೈಸೂರುಗಳಲ್ಲಿ ಮ್ಯಾಪಿಂಗ್ ನಡೆಯುತ್ತಿದೆ. ಇದನ್ನು ಮುಂದಿನ ಹಂತದಲ್ಲಿ ಎಲ್ಲ ಜಿಲ್ಲೆಗೂ ವಿಸ್ತರಿಸಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

