ಇಂದಿನಿಂದ ಆರೋಗ್ಯ ಉಚಿತ ತಪಾಸಣೆ
ಮಂಗಳೂರು: ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ವತಿಯಿಂದ ಫೆ. 17 ರಿಂದ 22ರವರೆಗೆ ಆಸ್ಪತ್ರೆಯ 19ನೇ ಕೊಠಡಿಯಲ್ಲಿ ಮಹಿಳಾ ಕ್ಯಾನ್ಸರ್ ತಪಾಸಣೆ ಶಿಬಿರ ನಡೆಯಲಿದೆ. ಬೆಳಗ್ಗೆ 8.30 ರಿಂದ ಸಂಜೆ 4.30ರವರೆಗೆ ನಡೆಯಲಿದ್ದು, ತಜ್ಞ ವೈದ್ಯರು ತಪಾಸಣೆ ನಡೆಸುವರು. ಸ್ಕ್ಯಾನಿಂಗ್, ಇನ್ನಿತರ ಪರೀಕ್ಷೆಯಲ್ಲಿ ಶೇ. 50 ರಿಯಾಯಿತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ 0824-2238000 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಅಬ್ಬಕ್ಕ ಕಾರ್ಯಕ್ರಮ ಆಕಾಶವಾಣಿ ನೇರಪ್ರಸಾರ
ಮಂಗಳೂರು: ಮಂಗಳೂರು ಆಕಾಶವಾಣಿಯಲ್ಲಿ ಫೆ. 17 ರಿಂದ 18ರವರೆಗೆ ಸಂಜೆ 5 ರಿಂದ ವೀರರಾಣಿ ಅಬ್ಬಕ್ಕ ಉತ್ಸವ ಕಾರ್ಯಕಲಾಪ ನೇರ ಪ್ರಸಾರಗೊಳ್ಳಲಿದೆ. ಕಾರ್ಯಕ್ರಮದ ಜಾನಪದ ದಿಬ್ಬಣ ವಿವರ, ಉದ್ಘಾಟನೆ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನರ ಬಳಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಸಂಜೆ 5 ರಿಂದ ರಾತ್ರಿ 8ರವರೆಗೆ ಎಫ್‌ಎಂ ತರಂಗಾಂತರ 100.3ರಲ್ಲಿ ಕಾರ್ಯಕ್ರಮ ಆಲಿಸಬಹುದು ಎಂದು ಮಂಗಳೂರು ಆಕಾಶವಾಣಿ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಕಾಂಚಿಶ್ರೀ ಮಾಣಿಲ
ದೇವಸ್ಥಾನ ಮಂಟಪಕ್ಕೆ ಶಿಲಾನ್ಯಾಸ
ಮಂಗಳೂರು: ಬಂಟ್ವಾಳ ಮಾಣಿಲ ದೇಲಂತಮಜಲು ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀಶಂಕರ ಮಂಟಪಕ್ಕೆ ಕಾಂಚಿ ಕಾಮಕೋಟಿ ಪೀಠದ 69ನೇ ಪೀಠಾಧಿಪತಿ ಶ್ರೀಜಯೇಂದ್ರ ಸರಸ್ವತೀ ಮಹಾಸ್ವಾಮೀಜಿ 17ರಂದು ಶಿಲಾನ್ಯಾಸ ನೆರವೇರಿಸುವರು. ಬೆಳಗ್ಗೆ 10ಕ್ಕೆ ಶಂಕರ ಮಂಟಪಕ್ಕೆ ಶ್ರೀಗಳು ಶಿಲಾನ್ಯಾಸ ನೆರವೇರಿಸಿ, ಆಶೀರ್ವಚನ ನೀಡುವರು. ಬೆಳಗ್ಗೆ ಗಣಪತಿ ಹೋಮ, ಶ್ರೀಪವಮಾನ ಅಭಿಷೇಕ, ಶ್ರೀಸೂಕ್ತ ಹವನ ನಡೆಯಲಿದೆ.
ಇಂದು 'ದಂತ ಆರೋಗ್ಯ ನೀತಿ'
ರಾಜ್ಯಮಟ್ಟದ ವಿಚಾರಸಂಕಿರಣ
ಮಂಗಳೂರು: ದ.ಕ., ಉಡುಪಿ, ಕೊಡಗು ಸಾರ್ವಜನಿಕ ದಂತ ವಿಭಾಗದ ವತಿಯಿಂದ 17 ರಂದು ಯೆನೆಪೋಯ ವಿಶ್ವವಿದ್ಯಾಲಯ ಸಭಾಂಗಣದಲ್ಲಿ 'ಕರ್ನಾಟಕದಲ್ಲಿ ದಂತ ಆರೋಗ್ಯ ನೀತಿ ಹಂತ-1' ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯಲಿದೆ. ಬೆಳಗ್ಗೆ 9.30ಕ್ಕೆ ವಿಚಾರಸಂಕಿರಣವನ್ನು ನಿಟ್ಟೆ ವಿಶ್ವವಿದ್ಯಾಲಯ ಉಪಕುಲಪತಿ ಡಾ. ರಮಾನಂದ ಶೆಟ್ಟಿ ಉದ್ಘಾಟಿಸುವರು. ಸಂಜೆ 6ಕ್ಕೆ ನಗರದ ಮೋತಿಮಹಲ್‌ನಲ್ಲಿ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಕರ್ನಾಟಕದಲ್ಲಿರುವ ದಂತ ರೋಗದ ಸಮಸ್ಯೆ ಮತ್ತು ಅದರ ನಿವಾರಣೆಯನ್ನು ವೈಜ್ಞಾನಿಕ ಸಾಕ್ಷಾಧಾರದ ಕ್ರಿಯಾಯೋಜನೆಯ ಅಂತಿಮ ವರದಿಯನ್ನು ಅನುಮೋದನೆಗಾಗಿ ದಂತ ವೈದ್ಯರ ಸಮ್ಮುಖದಲ್ಲಿ ಆರೋಗ್ಯ ಸಚಿವರಿಗೆ ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಮಣಿಪಾಲ ವಿಶ್ವವಿದ್ಯಾಲಯ ಉಪಕುಲಪತಿ ಡಾ.ವಿ. ಸುರೇಂದ್ರ ಶೆಟ್ಟಿ, ಯೇನೆಪೊಯ ವಿಶ್ವವಿದ್ಯಾಲಯ ಹಣಕಾಸು ನಿರ್ದೇಶಕ ಮೊಹಮ್ಮದ್ ಪರ್ಹದ್ ಪಾಲ್ಗೊಳ್ಳುವರು ಎಂದರು.
ಸಿಂಗಲ್ ಸೈಟ್ ಅನುಮತಿ ರದ್ದು ಯಾವಾಗ? ಪೂಜಾರಿಗೆ ಬಿಜೆಪಿ ಪ್ರಶ್ನೆ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 10 ಸೆಂಟ್ಸ್ ಜಾಗಕ್ಕಿಂತ ಕಡಿಮೆ ಜಾಗಕ್ಕೆ ಸಿಂಗಲ್ ಸೈಟ್ ಅನುಮತಿ ರದ್ದುಪಡಿಸುವುದಾಗಿ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಆಶ್ವಾಸನೆ ನೀಡಿದ್ದು, ಅದಿನ್ನೂ ಈಡೇರಿಲ್ಲ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ರಮೇಶ್ ಎಸ್ ಆರೋಪಿಸಿದ್ದಾರೆ. ಶನಿವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ 3 ವರ್ಷ 3.50 ಸಾವಿರ ಸಿಂಗಲ್ ಸೈಟ್ ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ. ಈಗ 11 ತಿಂಗಳಿಂದ ಭೂ ವಿಂಗಡಣೆ, ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆಯುತ್ತಿಲ್ಲ. ಹಿಂದೆ ಭೂವಿಂಗಡಣೆ ಮಾಡುವಾಗ 1 ಎಕರೆ ಕಡಿಮೆ ನಿವೇಶನವಾಗಿದ್ದಲ್ಲಿ ಆ ಜಾಗದ ಶೇ.15 ಸರ್ಕಾರಿ ಕ್ರಮ ಪಾವತಿಸಿ ವಿಂಗಡಣೆಯಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ನಿಯಮಾವಳಿಯಲ್ಲಿ ಗೊಂದಲ ಸೃಷ್ಟಿಸಿದೆ. ಎಷ್ಟೇ ವಿಸ್ತೀರ್ಣ ಜಾಗದಲ್ಲೂ ಶೇ.15 ಉದ್ಯಾನಕ್ಕೆ ಮುಕ್ತವಾಗಿ ಇರಿಸಬೇಕು ಎಂಬ ನಿಯಮ ಸಿದ್ಧಪಡಿಸಲಾಗಿದೆ. ತತ್ಕಾಲಕ್ಕೆ 25 ಸೆಂಟ್ಸ್‌ನ ಕೆಳಗಿನ ನಿವೇಶಕ್ಕೆ ಶೇ.30 ಹಣ ಪಾವತಿಸಬೇಕು ಎಂಬ ಚಿಂತನೆ ನಡೆಯುತ್ತಿದೆ. ಈ ಬಗ್ಗೆ ನಿರ್ದಿಷ್ಟ ನಿಯಮಾವಳಿ ಇಲ್ಲದೆ ಜನತೆ ಬವಣೆ ಪಡುವಂತಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

