ದಕ್ಷಿಣ ಕನ್ನಡ

ಕೊಳವೆ ಬಾವಿಪೈಪ್ ತೆಗೆಯುವ ವೇಳೆ ವಿದ್ಯುತ್ ಅವಘಡ: ಓರ್ವ ದುರ್ಮರಣ

Published On :

ವಿಟ್ಲ: ತೋಟದಲ್ಲಿ ಕೊಳವೆ ಬಾವಿಯ ಪೈಪ್‌ಗಳನ್ನು ತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವಿಟ್ಲಪಡ್ನೂರು ಗ್ರಾಮದ ಕುಡ್ತಮುಗೇರು ಸಮೀಪ ಬೊಳ್ಳೆಚ್ಚಾರು ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಬೊಳ್ಳೆಚ್ಚಾರು ನಿವಾಸಿ ಶ್ರೀನಿವಾಸ ಶೆಟ್ಟಿಗಾರ್ (45) ಮೃತರು. ಅವರು ಮಂಗಳವಾರ ರಾತ್ರಿ ಇಲ್ಲಿಗೆ ಸಮೀಪದ ನಿವಾಸಿ ಶ್ರೀನಿವಾಸ ಆಚಾರ್ಯ ಎಂಬವರ ತೋಟದಲ್ಲಿ ಕೊಳವೆ ಬಾವಿಗೆ ಅಳವಡಿಸಲಾಗಿದ್ದ ಪೈಪ್‌ಗಳನ್ನು ತೆಗೆಯುತ್ತಿದ್ದರು. ಇದೇ ಸ್ಥಳದಲ್ಲಿ ವಿದ್ಯುತ್ ತಂತಿಯೊಂದು ಹಾದು ಹೋಗಿತ್ತು. ಕಬ್ಬಿಣದ ಪೈಪ್ ತುದಿಗೆ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಪೈಪ್ ಎಳೆಯುತ್ತಿದ್ದ ನಾಲ್ವರ ಪೈಕಿ ಮೂವರಿಗೆ ವಿದ್ಯುತ್ ಶಾಕ್ ತಗುಲಿತು. ಅವರ ಪೈಕಿ ಶ್ರೀನಿವಾಸ ಶೆಟ್ಟಿಗಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದವರು ಅಪಾಯದಿಂದ ಪಾರಾಗಿದ್ದಾರೆ. ಅವರು ಕೊಳವೆ ಬಾವಿಯಿಂದ 6 ಪೈಪ್‌ಗಳನ್ನು ತೆಗೆದಿದ್ದರು. 7ನೇ ಪೈಪ್ ಎಳೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಠಾಣಾಧಿಕಾರಿ ರಾಘವೇಂದ್ರ ಟಿ.ಆರ್., ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಮಾನಸಿಕ ಅಸ್ವಸ್ಥೆ ಆತ್ಮಹತ್ಯೆ
ಬಂಟ್ವಾಳ: ಮಾನಸಿಕವಾಗಿ ನೊಂದಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿ ಕಸ್ಬಾ ಗ್ರಾಮದ ಕಾಮಾಜೆ ದೈಪಿಲದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಇಲ್ಲಿನ ಲೋಕಯ್ಯ ಎಂಬವರ ಮಗಳು ಆಶಾ (28) ಮೃತರು. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಈಕೆ ಇದರಿಂದ ಬೇಸತ್ತು ಈ ಕೃತ್ಯ ವೆಸಗಿರಬೇಕೆಂದು ಶಂಕಿಸಲಾಗಿದೆ. ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದಿದ್ದ ವೇಳೆಯಲ್ಲಿ ಈ ಕೃತ್ಯ ನಡೆದಿದ್ದಾಗಿ ಹೇಳಲಾಗಿದ್ದು, ತಾಯಿ ಪುಷ್ಪಾ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ನಾಪತ್ತೆ
ಮಣಿಪಾಲ: ಮಣಿಪಾಲಕ್ಕೆ ಕೆಲಸಕ್ಕೆಂದು ಹೋಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಪ್ರಕರಣ ಇತ್ತೀಚೆಗೆ ನಡೆದಿದೆ. 80 ಬಡಗುಬೆಟ್ಟು ಗ್ರಾಮದ ಕೆಳಶಾಂತಿ ನಗರದ ಮಲ್ಲಪ್ಪ ಇಟಗಿ (59) ನಾಪತ್ತೆಯಾದವರು. ಅವರು ಮಣಿಪಾಲದ 'ಯುನಿಟಿ 6'ರಲ್ಲಿ ಕೆಲಸ ಮಾಡಿಕೊಂಡಿದ್ದರು. ಶನಿವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಅಲ್ಲಿಂದ ಹೊರಟವರು ನಾಪತ್ತೆಯಾಗಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ: ಅಪರಿಚಿತ ಸಾವು
ಕಾಪು: ಇಲ್ಲಿನ ಕಟಪಾಡಿಯ ಪೆಟ್ರೋಲ್ ಬಂಕ್ ಬಳಿ ರಾ.ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. 40- 50 ವರ್ಷ ವಯಸ್ಸಿನ ಈ ವ್ಯಕ್ತಿ ರಾತ್ರಿ 8ರಿಂದ 9 ಗಂಟೆ ನಡುವೆ ರಾ.ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಮಾನದಲ್ಲಿ ಚಿನ್ನ ಅಕ್ರಮ
ಸಾಗಾಟ ಪತ್ತೆ: ಓರ್ವ ಸೆರೆ
ಮಂಗಳೂರು: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬುಧವಾರ ಒಂದು ಕೇಜಿ ಚಿನ್ನದ ಗಟ್ಟಿ ಮತ್ತು ಒಂದು ಸಿಲ್ವರ್ ಲೇಪಿತ ಚಿನ್ನದ ತುಂಡು ವಶಪಡಿಸಿದ್ದಾರೆ.
   ಹಲವು ದಿನಗಳಿಂದ ವಿಮಾನ ಮೂಲಕ ಅಕ್ರಮವಾಗಿ ಚಿನ್ನ ವಸ್ತುಗಳ ಸಾಗಾಟ ಪತ್ತೆಯಾಗುವುದು ಮುಂದುವರಿಯುತ್ತಲೇ ಇದೆ.
 ಒಟ್ಟು ರು. 34.58 ಲಕ್ಷ ಮೌಲ್ಯದ 1116.400 ಗ್ರಾಂ ಸೊತ್ತು ವಶಪಡಿಸಲಾಗಿದೆ. ವಾಚು ಮತ್ತು ಬ್ಯಾಗ್‌ನ ಮರೆಯಲ್ಲಿ ಇದನ್ನು ಮರೆಮಾಚಿ ತರಲಾಗಿತ್ತು. ಈ ಸಂಬಂಧ ಆರೋಪಿ ಕೇರಳ ಕಾಸರಗೋಡಿನ ಎರ್ಯಪ್ಪಾಡಿ ಪಲ್ಲಿಂಡಕುಕ್ಕಲ್ ನಿವಾಸಿ ಮುಹಮ್ಮದ್ ಮುಸ್ತಾಫ ಎಂಬಾತನನ್ನು ಬಂಧಿಸಲಾಗಿದೆ. ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ದುಬೈನಿಂದ ಬೆಳಗ್ಗೆ 7.30ಕ್ಕೆ ಬಂದಿಳಿದ ಈತನನ್ನು ತಪಾಸಣೆ ನಡೆಸುವಾಗ ಅಕ್ರಮ ಸಾಗಾಟ ಬೆಳಕಿಗೆ ಬಂದಿತ್ತು. ಮೇಲ್ನೋಟಕ್ಕೆ ವಾಚು ವಾಚಿನಂತೆಯೇ ಕಂಡುಬಂದರೂ ಅದರೊಳಗೆ ಚಿನ್ನ ಲೇಪನ ಮಾಡಿ ಮರೆಮಾಚಿರುವುದು  ಗೊತ್ತಾಗುವಂತಿರಲಿಲ್ಲ.
ಮದ್ಯ ಮಾರಾಟ: ಓರ್ವ ಸೆರೆ
ವಿಟ್ಲ: ನರೇಂದ್ರ ಮೋದಿ ಮಂಗಳವಾರ ಮಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧ ಆದೇಶವಿದ್ದರೂ ಮಾಣಿ ಶಾಲೆ ಮೈದಾನದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅನಂತಾಡಿ ಗ್ರಾಮದ ಬಾಕಿಲ ನಿವಾಸಿ ಉಮೇಶ (38) ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಟ್ಲ ಠಾಣಾಧಿಕಾರಿ ರಾಘವೇಂದ್ರ ಟಿ.ಆರ್. ಮತ್ತು ಸಿಬ್ಬಂದಿ 36 ಲೀ. ಮದ್ಯ, ಒಂದು ಮಾರುತಿ ಕಾರು, ರು. 7500 ನಗದನ್ನು ವಶಪಡಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಬೇಕೆಂದು ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರು. ಆದರೆ ಮಾಣಿ ಸರ್ಕಾರಿ ಶಾಲೆ ಮೈದಾನದಲ್ಲಿ ಆರೋಪಿ ಮದ್ಯ ಮಾರಾಟ ಮಾಡುತ್ತಿದ್ದ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.