ಮಹಿಳೆಯರ ಜಗಳ ಸಾವಿನಲ್ಲಿ ಅಂತ್ಯ!
ಬಂಟ್ವಾಳ: ಅಕ್ಕಪಕ್ಕದ ಮನೆಯ ಮಹಿಳೆಯರಿಬ್ಬರ ಜಗಳ ಮಹಿಳೆಯೊಬ್ಬಳ ಸಾವಿನಲ್ಲಿ ಅಂತ್ಯಗೊಂಡಿದೆ.
ತಾಲೂಕಿನ ಮಂಚಿಗ್ರಾಮದ ನೂಜಿಪ್ಪಾಡಿ ಕೃಷ್ಣಪ್ಪ ಎಂಬವರ ಪತ್ನಿ ಮೋನಕ್ಕ(38) ಮೃತರು. ಕ್ಷುಲ್ಲಕ ವಿಚಾರಕ್ಕೆ ಈ ಜಗಳ ನಡೆದಿದ್ದು, ವಾಸಪ್ಪ ಗೌಡ ಮತ್ತು ಪತ್ನಿ ಯಮುನಾರಿಂದ ತೀವ್ರ ಹಲ್ಲೆಗೊಳಗಾಗಿದ್ದ ಮೋನಕ್ಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ವಾಸಪ್ಪ ಗೌಡ ದಂಪತಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಯುಮುನಾ ಹಾಗೂ ಮೋನಕ್ಕ ಮೂಲತಃ ವಿಟ್ಲ ಸಮೀಪದ ಒಕ್ಕೆತ್ತೂರಿನ ಮಾಡ ನಿವಾಸಿಗಳು. ಮದುವೆಯಾದ ಬಳಿಕ ಮೋನಕ್ಕ ಮಂಚಿಯ ನೂಜಿಪ್ಪಾಡಿಯಲ್ಲಿ ತನ್ನ ಗಂಡ ಕೃಷ್ಣಪ್ಪರೊಂದಿಗೆ ನೆಲೆಸಿದ್ದರು. ಕಳೆದ 5 ವರ್ಷಗಳ ಹಿಂದೆಯಷ್ಟೇ ಕೃಷ್ಣಪ್ಪ ಅವರಿಂದ ವಾಸಪ್ಪ ಗೌಡ 7.5 ಸೆಂಟ್ ಕುಮ್ಕಿ ಜಾಗವನ್ನು ಖರೀದಿಸಿ ಮನೆ ಕಟ್ಟಿದ್ದರು. ಒಂದು ವರ್ಷಗಳ ಕಾಲ ಪರಸ್ಪರ ಅನ್ಯೋನ್ಯತೆಯಿಂದ ಇದ್ದ ಈ ಎರಡು ಕುಟುಂಬಗಳ ನಡುವೆ ಬಳಿಕ ದಿನಗಳಲ್ಲಿ ಚಿಕ್ಕ ಪುಟ್ಟ ವಿಚಾರಗಳಿಗೂ ಜಗಳ ನಡೆಯುತ್ತಿತ್ತು. ದಾರಿ ವಿವಾದ, ಕೋಳಿ ಹೀಗೆ ಕ್ಷುಲ್ಲಕ ವಿಚಾರಕ್ಕೂ ಜಗಳ ನಡೆಯುತ್ತಿತ್ತು. ಆದರೆ ಮಂಗಳವಾರ ಸಂಜೆ ಆರಂಭಗೊಂಡ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.
ಸೋಮವಾರ ಸಂಜೆ ಯಮುನಾ ಮೋನಕ್ಕ ಅವರ ತಾಯಿ ಮನೆಗೆ ಹೋಗಿದ್ದ ವಿಚಾರವೇ ಜಗಳಕ್ಕೆ ಕಾರಣವಾಗಿದೆ. ಮಂಗಳವಾರ ಸಂಜೆ ಇದೇ ವಿಷಯವಾಗಿ ಇವರಿಬ್ಬರ ನಡುವೆ ಜಗಳ ಆರಂಭವಾಗಿದ್ದು ಮಾತಿಗೆ ಮಾತು ಬೆಳೆದು ಪರಸ್ಪರ ತಲೆ ಕೂದಲು ಹಿಡಿದುಕೊಳ್ಳುವವರೆಗೂ ಹೋಯಿತು. ಜಗಳ ಮತ್ತಷ್ಟು ತಾರಕಕ್ಕೇರಿದ್ದು, ಮೋನಕ್ಕ ಮೂತ್ರ ವಿಸರ್ಜಿಸಿ ಅದನ್ನು ಯಮುನಾರ ಮೇಲೆ ಎರಚಿದರು. ಇದರಿಂದ ಕುಪಿತರಾದ ವಾಸಪ್ಪಗೌಡ ಮರದ ರೀಪ್ನಿಂದ ಮೋನಕ್ಕನ ತಲೆಗೆ ಹಲ್ಲೆ ನಡೆಸಿದರು. ತಲೆಗೆ ತೀವ್ರಗಾಯಗಳಾಗಿದ್ದ ಮೋನಕ್ಕರನ್ನು ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಸಂಜೆ ಅಸುನೀಗಿದ್ದಾರೆ. ತನ್ನ ಪತ್ನಿಯನ್ನು ವಾಸಪ್ಪ ಗೌಡ ದಂಪತಿ ಕೊಲೆಗೈದಿದ್ದಾರೆ ಎಂದು ಮೃತ ಮೋನಕ್ಕ ಪತಿ ಕೃಷ್ಣಪ್ಪ ಬಂಟ್ವಾಳ ಗ್ರಾಮಾಂತರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದಂಪತಿ ಬಂಧನ: ಕೊಲೆ ಆರೋಪ ಮೇಲೆ ಬಂಟ್ವಾಳ ಗ್ರಾಮಾಂತರ ಉಪನಿರೀಕ್ಷಕ ನಾಗರಾಜ್, ಆರೋಪಿ ದಂಪತಿ ವಾಸಪ್ಪ ಗೌಡ ಹಾಗೂ ಯಮುನಾರನ್ನು ಗುರುವಾರ ಬೆಳಗ್ಗೆ ಬಂಧಿಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಬಂಟ್ವಾಳ ಡಿವೈಎಸ್ಪಿ ರಶ್ಮಿ ಬ. ಪರಡ್ಡಿ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

