ದಕ್ಷಿಣ ಕನ್ನಡ

ನಿರ್ದಿಷ್ಟ ಬ್ಯಾಂಕ್‌ನಲ್ಲಿ ಖಾತೆ: ಎಂಡೋ ಸಂತ್ರಸ್ತರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪಟ್ಟು

Published On :

ಮಂಗಳೂರು: ಈಗಾಗಲೇ ಒಂದು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಖಾತೆ ಇದೆ, ಆದರೂ ಇನ್ನೊಂದು ನಿರ್ದಿಷ್ಟ ಬ್ಯಾಂಕ್‌ನಲ್ಲಿ ಪ್ರತ್ಯೇಕ ಖಾತೆ ತೆರೆಯುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಒತ್ತಡ ಹೇರುತ್ತಿದ್ದಾರೆ. ಇದರಿಂದ ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರು ಎರಡೆರಡು ಬ್ಯಾಂಕ್‌ಗಳಲ್ಲಿ ಅನಗತ್ಯವಾಗಿ ಖಾತೆ ತೆರೆಯುವಂತಾಗಿದೆ.
ಇಷ್ಟಾದರೂ ಆರೋಗ್ಯ ಇಲಾಖೆಯಿಂದ ಮಾಸಿಕ ಪಿಂಚಣಿ ಪಾವತಿಯಾಗುವುದು ಯಾವುದಾದರೂ ಒಂದು ಬ್ಯಾಂಕ್ ಖಾತೆಗೆ. ಇಲಾಖೆ ಸಿಬ್ಬಂದಿ ಗೊಂದಲಮಯ ಕ್ರಮದಿಂದ ಎಂಡೋ ಸಂತ್ರಸ್ತರು ಹೊಸ ಖಾತೆ ತೆರೆಯಲು ಬ್ಯಾಂಕ್ ಎದುರು ಕ್ಯೂ ನಿಲ್ಲುವಂತಾಗಿದೆ.
ಈಗಾಗಲೇ ಎರಡು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ತನ್ನ ಖಾತೆ ಇದೆ. ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ದಾದಿಯರು ಇನ್ನೊಂದು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಹೊಸ ಖಾತೆ ತೆರೆಯುವಂತೆ ಹೇಳಿದ್ದಾರೆ. ತನ್ನ 14 ವರ್ಷದ ಪುತ್ರ ಅಕ್ಷತಾ ಮಲಗಿದಲ್ಲೇ ಇದ್ದು, ಆಕೆಯ ಹೆಸರಿನಲ್ಲಿ ಜಂಟಿ ಖಾತೆ ತೆರೆಯಲಾಗಿದೆ ಎನ್ನುತ್ತಾರೆ ಒಳಮೊಗ್ರಿನ ರಾಧಾ. ಇದೇ ರೀತಿಯ ಸಮಸ್ಯೆ ಕುಂಬ್ರದ ಕೇಶವ ಎಂಬವರಿಗೆ ಆಗಿದೆ. ನಾನು ಅಂಗವಿಕಲ. ಈವರೆಗೆ ತನಗೆ ಅಂಗವಿಕಲ ಮಾಸಿಕ ವೇತನ ಬರುತ್ತಿತ್ತು. ಇನ್ನು ನಿರ್ದಿಷ್ಟ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಹೇಳಿದ್ದಾರೆ. ಅದರಂತೆ ಮಾಡಿದ್ದೇನೆ ಎನ್ನುತ್ತಾರೆ.
ಇದೇ ಮಾದರಿಯ ಪ್ರಕರಣ ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಗಳಿಂದ ವರದಿಯಾಗಿದೆ. ಎಂಡೋ ಸಂತ್ರಸ್ತರಿಗೆ ಕೆಲವು ಕಡೆ ಬೇರೆ ಖಾತೆ ಬೇಡ ಎಂದರೆ, ಇನ್ನೂ ಕೆಲವರು ಹೊಸ ಖಾತೆಗೆ ಒತ್ತಡ ಹಾಕಿದ್ದಾರೆ. ಇದರಿಂದ ಕಳೆದ ಒಂದು ವಾರದಿಂದ ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿ ಎಂಡೋಸಂತ್ರಸ್ತರು ಕ್ಯೂ ನಿಂತು ಖಾತೆ ತೆರೆಯುವಂತಾಗಿದೆ.
ಅಂಚೆ ಕಚೇರಿ ಖಾತೆಗೆ ರವಾನೆಯಿಲ್ಲ: ಹೆಚ್ಚಿನ ಮಂದಿ ಸಂತ್ರಸ್ತರ ಖಾತೆ ಇರುವುದು ಅಂಚೆ ಕಚೇರಿಗಳಲ್ಲಿ. ಆದರೆ ಬ್ಯಾಂಕ್‌ಗಳ ಆರ್‌ಟಿಜಿಎಸ್ (ರಿಯಲ್ ಟರ್ಮ್ ಗ್ರೋಸ್ ಸೆಟ್ಲ್‌ಮೆಂಟ್) ನಿಯಮ ಪ್ರಕಾರ ನೇರ ನಗದು ರವಾನೆ ಕ್ರಮದಲ್ಲಿ ಅಂಚೆ ಕಚೇರಿ ಹಾಗೂ ಸೇವಾ ಸಹಕಾರಿ ಸಂಘಗಳು ಒಳಗೊಂಡಿಲ್ಲ. ಹಾಗಾಗಿ ಅಂಚೆ ಕಚೇರಿ ಬದಲು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಬೇಕು. ಆದರೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಈಗಾಗಲೇ ಖಾತೆ ಇರುವವರಿಗೆ ಇನ್ನೊಂದು ನಿರ್ದಿಷ್ಟ ಬ್ಯಾಂಕ್‌ನಲ್ಲಿ ಖಾತೆ ತೆರೆಯುವಂತೆ ದಾದಿಗಳು ಹೇಳುತ್ತಿದ್ದಾರೆ. ಇದು ಗೊಂದಲಕ್ಕೆ ಕಾರಣವಾಗಿದೆ.
ಆರೋಗ್ಯಾಧಿಕಾರಿ ನಿರಾಕರಣೆ: ಯಾವುದಾದರೂ ಒಂದು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಖಾತೆ ಇದ್ದರೆ ಸಾಕು. ಅದಕ್ಕೆ ಎಂಡೋ ಸಂತ್ರಸ್ತರ ಮಾಸಿಕ ಪಿಂಚಣಿ ನೇರವಾಗಿ ಪಾವತಿಸಲಾಗುವುದು. ಈ ವಿಚಾರದಲ್ಲಿ ಇಲಾಖೆ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಇದರಲ್ಲಿ ಗೊಂದಲ ಇದ್ದರೆ ಆಯಾ ತಾಲೂಕಿನ ಆರೋಗ್ಯಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಆದೇಶ ನೀಡಿಲ್ಲ: ಸಚಿವ ಖಾದರ್
ನಿರ್ದಿಷ್ಟ ಬ್ಯಾಂಕ್‌ನಲ್ಲಿ ಖಾತೆ ತೆರೆಯುವಂತೆ ಯಾವುದೇ ಆದೇಶ ನೀಡಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ವಿಚಾರಿಸುವುದಾಗಿ ಆರೋಗ್ಯ ಸಚಿವ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯಲ್ಲಿ 2,4790 ಮಂದಿ ಎಂಡೋ ಸಂತ್ರಸ್ತರನ್ನು ಗುರುತಿಸಿದ್ದು, ಅವರಲ್ಲಿ 1,815 ಮಂದಿ ಮಾಸಾಶನಕ್ಕೆ ಅರ್ಹತೆ ಪಡೆದಿದ್ದಾರೆ. ಅವರಿಗೆ ಗುರುತಿನ ಕಾರ್ಡ್ ನೀಡುವ ಕಾರ್ಯಕ್ರಮ ಅಂತಿಮ ಹಂತದಲ್ಲಿದೆ. ಉಳಿದ ಮಂದಿ ಸಣ್ಣ ಪುಟ್ಟ ನ್ಯೂನತೆ ಹೊಂದಿದ್ದು, ಅವರಿಗೆ ಮಾಸಾಶನ ಇರುವುದಿಲ್ಲ. ಅವರು ಗುರುತಿನ ಕಾರ್ಡ್ ಮುಖೇನ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.