ಹೆಚ್ಚುವರಿ ರೈಲು ಸಂಚಾರಕ್ಕೆ ಹಾಸನ ಹಳಿ ಸಾಮರ್ಥ್ಯ ಪುನರ್ ಪರಿಶೀಲನೆ ಕೋರಿಕೆ
ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ಹೆಚ್ಚಿನ ರೈಲು ಸಂಚಾರಕ್ಕೆ ಹಳಿ ಸಾಮರ್ಥ್ಯ ಪುನರ್ ಪರಿಶೀಲಿಸುವಂತೆ ರೇಲ್ವೆ ಸುರಕ್ಷಾ ಸಮಿತಿಯನ್ನು ಕೋರಲಾಗಿದೆ ಎಂದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ ಭಾನುವಾರ ಮಂಗಳೂರು ಸೆಂಟ್ರಲ್-ಮಡ್ಗಾಂವ್ ಇಂಟರ್ಸಿಟಿ ಎಕ್ಸ್ಪ್ರೆಸ್, ಮಂಗಳೂರು ಸೆಂಟ್ರಲ್-ಕಾಚಿಗುಡ ದ್ವಿ ಸಾಪ್ತಾಹಿಕ ಎಕ್ಸ್ಪ್ರೆಸ್ ಮತ್ತು ಮಂಗಳೂರು(ತೋಕೂರು)-ಭಟ್ಕಳ ಡೆಮು ರೈಲು ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಾಸನ ರೈಲು ಮಾರ್ಗದಲ್ಲಿ ಇನ್ನಷ್ಟು ಪ್ರಯಾಣಿಕರ ರೈಲು ಸಂಚರಿಸಲು ರೇಲ್ವೆ ಸುರಕ್ಷತಾ ಸಮಿತಿ ಅನುಮತಿ ನೀಡುತ್ತಿಲ್ಲ. ಘಾಟಿ ಪ್ರದೇಶದಲ್ಲಿ ಹಳಿಯಲ್ಲಿ ಸುಧಾರಣೆ ಮಾಡದೆ ಹೆಚ್ಚಿನ ರೈಲು ಸಂಚರಿಸುವುದು ಸಾಧ್ಯವಿಲ್ಲ ಎಂದು ವರದಿ ಸಲ್ಲಿಸಿದೆ. ಹಾಗಾಗಿ ವರದಿ ಮರುಪರಿಶೀಲಿಸುವಂತೆ ಕೋರಲಾಗಿದೆ ಎಂದರು.
ಕನ್ಯಾಕುಮಾರಿ-ವೈಷ್ಣೋದೇವಿ ನಡುವೆ ರೈಲು ಯಾನಕ್ಕೆ ಎರಡು ತಿಂಗಳಲ್ಲಿ ಚಾಲನೆ ನೀಡಲಾಗುವುದು. ಅಲ್ಲಿ ರೇಲ್ವೆ ಸೇತುವೆಯಲ್ಲಿ ನೀರು ನಿಲ್ಲುವುದರಿಂದ ಸುರಕ್ಷತಾ ಸಮಿತಿ ಅನುಮತಿ ನೀಡಿಲ್ಲ. ಹಾಗಾಗಿ ಹಳಿ ಸಿದ್ಧಗೊಂಡರೂ ಸಂಚಾರ ವಿಳಂಬವಾಗಿ ಶುರುವಾಗಲಿದೆ ಎಂದರು.
ಮಂಗಳೂರು ಸೇರಿದಂತೆ ಬೆಂಗಳೂರು, ತಮಿಳುನಾಡು, ಆಂಧ್ರ, ಜೈಪುರಕ್ಕೆ ವಯಾ ಅಜ್ಮೀರ್ ಮೂಲಕ ಪ್ರಮುಖ ನಗರಗಳ ಸಂಪರ್ಕಿಸಲು ರೈಲು ಸಂಚಾರ ಏರ್ಪಡಿಸಲಾಗುವುದು. ಇದಕ್ಕೆ ಬೇಕಾಗುವಷ್ಟು ಕೋಚ್, ಹಳಿ ವ್ಯವಸ್ಥೆ ಗಮನಿಸಿಯೇ ಈ ಬಾರಿ ದೇಶದಲ್ಲಿ 85 ಹೊಸ ರೈಲುಗಳ ಘೋಷಣೆ ಮಾಡಲಾಗಿದೆ. ದೇಶದಲ್ಲಿ ವಾರ್ಷಿಕ 800 ಕೋಟಿಗೂ ಅಧಿಕ ಮಂದಿ ರೈಲಿನಲ್ಲಿ ಸಂಚರಿಸುತ್ತಿದ್ದು, ನಿತ್ಯ 2.30 ಕೋಟಿ ಮಂದಿ ರೈಲಲ್ಲಿ ಪ್ರಯಾಣಿಸುತ್ತಾರೆ. ಭಾರತದಲ್ಲಿ ರೈಲು ವ್ಯವಸ್ಥೆಗೆ ಮೂರನೇ ಸ್ಥಾನ ಲಭಿಸಿದೆ ಎಂದರು. ಹಝರತ್ ನಿಜಾಮುದ್ದೀನ್ ರೈಲು ಕೊಟ್ಟಾಯಂಗೆ ವಯಾ ಕೊಂಕಣ ಮಾರ್ಗದಲ್ಲಿ ಹಾದುಹೋಗಲಿದೆ. ಮಂಗಳೂರು, ತ್ರಿವೆಂಡ್ರಂ, ಕೊಚ್ಚಿನ್, ಕ್ಯಾಲಿಕಟ್ ರೈಲು ನಿಲ್ದಾಣವನ್ನು ವಿಶ್ವದರ್ಜೆಗೆ ಏರಿಸುವ ಪ್ರಸ್ತಾಪ ಹಿಂದಿನ ರೈಲ್ವೆ ಬಜೆಟ್ನಲ್ಲಿ ಮಾಡಲಾಗಿದೆ. ಈ ವರ್ಷಾಂತ್ಯಕ್ಕೆ ಹಣಕಾಸು ಉಳಿಕೆಯಲ್ಲಿ ಆದ್ಯತೆ ಮೇರೆಗೆ ಮೊತ್ತ ಬಿಡುಗಡೆ ಮಾಡಲಾಗುವುದು ಎಂದರು. ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಎರಡು ಎಸ್ಕಲೇಟರ್, ಎರಡು ಲಿಫ್ಟ್ ವ್ಯವಸ್ಥೆ ಕಲ್ಪಿಸುವಂತೆ ರೇಲ್ವೆ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳೂರು ಪ್ರತ್ಯೇಕ ವಲಯವಾಗಲಿ: ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮಂಗಳೂರಿನ ಯಾವುದೇ ರೈಲಿನ ಬೇಡಿಕೆ ಈಡೇರಿಸಬೇಕಾದರೆ ಫಾಲ್ಘಾಟ್, ಕೊಂಕಣ ಹಾಗೂ ಮೈಸೂರು ವಿಭಾಗವನ್ನು ಸಂಪರ್ಕಿಸಬೇಕಾಗುತ್ತದೆ. ಇದಕ್ಕಾಗಿ ಮಂಗಳೂರನ್ನು ಪ್ರತ್ಯೇಕ ರೇಲ್ವೆ ವಲಯ ಎಂದು ಘೋಷಿಸಬೇಕು. ಇದು ಅಸಾಧ್ಯವಾದರೆ, ಫಾಲ್ಘಾಟ್ನಿಂದ ಮಂಗಳೂರನ್ನು ಪ್ರತ್ಯೇಕಿಸಿ ಮೈಸೂರು ಅಥವಾ ಕೊಂಕಣ್ ಮಾರ್ಗಕ್ಕೆ ಸೇರಿಸಬೇಕು. ವಿಶ್ವದರ್ಜೆ ನಿಲ್ದಾಣ ಘೋಷಣೆಯಾಗಿ 4 ವರ್ಷ ಕಳೆದರೂ ಕಾಮಗಾರಿ ಶುರುವಾಗಿಲ್ಲ ಎಂದು ಗಮನ ಸೆಳೆದರು. ಮಂಗಳೂರು-ಬೆಂಗಳೂರು ಮಧ್ಯೆ ಹೆಚ್ಚುವರಿ ರೈಲು ಒದಗಿಸಬೇಕು, ಕಾರವಾರ-ಮಂಗಳೂರು ಹಗಲು ರೈಲು ನಿತ್ಯ ಸಂಚರಿಸಬೇಕು, ಮಂಗಳೂರು-ಪುತ್ತೂರು, ಮಂಗಳೂರು-ಚೆರ್ವತ್ತೂರು ಪ್ಯಾಸೆಂಜರ್ನ್ನು ಮಂಗಳೂರು ಸೆಂಟ್ರಲ್ಗೆ ವಿಸ್ತರಿಸಬೇಕು, ಕಬಕ-ಪುತ್ತೂರು ಪ್ಯಾಸೆಂಜರ್ನ್ನು ಸುಬ್ರಹ್ಮಣ್ಯಕ್ಕೆ ವಿಸ್ತರಿಸಬೇಕು, ಮಂಗಳೂರು-ಸುಬ್ರಹ್ಮಣ್ಯ ಹಳಿಯನ್ನು ದ್ವಿಪಥಗೊಳಿಸಬೇಕು.,ನೇರಳಕಟ್ಟೆಯಲ್ಲಿ ಬೆಂಗಳೂರು ರೈಲಿಗೆ ನಿಲುಗಡೆ ಕಲ್ಪಿಸಬೇಕು, ರೇಲ್ವೆ ಮೇಲ್ಸೇತುವೆ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಉಡುಪಿ-ಚಿಕ್ಕಮಗಳೂರು ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಮಡ್ಗಾಂವ್ ಇಂಟರ್ಸಿಟಿ ರೈಲನ್ನು ವಾಸ್ಕೋವರೆಗೆ ವಿಸ್ತರಿಸಬೇಕು. ಡೆಮು ರೈಲನ್ನು ತೋಕೂರು ಬದಲು ಮಂಗಳೂರು ಸೆಂಟ್ರಲ್ಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಜೆ.ಆರ್.ಲೋಬೋ, ಮೊಯ್ದಿನ್ ಬಾವಾ, ಮೋನಪ್ಪ ಭಂಡಾರಿ, ದಕ್ಷಿಣ ರೇಲ್ವೆ ಜನರಲ್ ಮೆನೇಜರ್ ರಾಕೇಶ್ ಮಿಶ್ರಾ, ಫಾಲ್ಘಾಟ್ ರೇಲ್ವೆ ವಿಭಾಗೀಯ ವ್ಯವಸ್ಥಾಪಕ ಆನಂದ ಪ್ರಕಾಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

