ದಕ್ಷಿಣ ಕನ್ನಡ

ಬಂಟ್ವಾಳ: ಪುರಸಭೆಯೊಳಗೆ ಅಧಿಕಾರಿಗಳು, ಸಾರ್ವಜನಿಕರಿಗೆ ದಿಗ್ಬಂಧನ!

Published On :

ಬಂಟ್ವಾಳ: ಪುರಸಭಾ ಅಧ್ಯಕ್ಷರ ಸೂಚನೆಯಂತೆ ಇಲ್ಲಿನ ಪುರಸಭಾ ಕಚೇರಿಗೆ 5.30 ಕ್ಕೆ ಬೀಗ ಜಡಿದ ಕಾರಣದಿಂದ ಮುಖ್ಯಾಧಿಕಾರಿ, ಎಂಜಿನಿಯರ್‌ಗಳು ಸೇರಿದಂತೆ ಅಗತ್ಯ ಕೆಲಸಕ್ಕಾಗಿ ಬಂದಿದ್ದ ಕೆಲ ಸಾರ್ವಜನಿಕರು ಕಚೇರಿಯೊಳಗೆ ಅರ್ಧ ತಾಸು ದಿಗ್ಬಂಧನಕ್ಕೊಳಗಾದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಪುರಸಭೆಯ ನೂತನ ಆಡಳಿತ ಪಕ್ಷವಾದ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ನಿಗದಿತ ಸಂಜೆ 5.30 ರ ಹೊತ್ತಿಗೆ  ಕಚೇರಿಗೆ ಬೀಗ ಹಾಕುವುದು ವಾಡಿಕೆಯಾಗಿತ್ತು. ಈ ಬಗ್ಗೆ ನಾಮಫಲಕವನ್ನೂ ಅಳವಡಿಸಲಾಗಿದೆ. ತುರ್ತು ಕೆಲಸಕ್ಕೆಂದು ಹೊರತೆರಳಿದ್ದ ಮುಖ್ಯಾಧಿಕಾರಿ ಗಣೇಶ್ 5.15 ರ ಸುಮಾರಿಗೆ ಕಚೇರಿಗೆ ಆಗಮಿಸಿದ್ದರು. ಅವರ ಭೇಟಿಗೆಂದು ಕೆಲ ಸಾರ್ವಜನಿಕರು ಕಚೇರಿಯಲ್ಲಿ ಕಾದುಕುಳಿತಿದ್ದರು. ಎಂಜಿನಿಯರ್‌ಗಳೂ ಹಾಗೂ ಕೆಲ ಸಿಬ್ಬಂದಿ ಕೂಡ ಮುಖ್ಯಾಧಿಕಾರಿಯಲ್ಲಿ ಮಾತುಕತೆಗಾಗಿ ಕಾದು ನಿಂತಿದ್ದರು. 5.30 ರ ಸುಮಾರಿಗೆ ಬಿಜೆಪಿಯ ಮಾಜಿ ಸದಸ್ಯ ಸುರೇಶ್ ಕುಲಾಲ್ ಪುರಸಭಾ ಕಚೇರಿಗೆ ಆಗಮಿಸುತ್ತಿದ್ದಂತೆಯೇ, ಒಮ್ಮೆಲೇ ರೇಗಿ ಹೋದ ಅಧ್ಯಕ್ಷೆ ವಸಂತಿ, ತಕ್ಷಣ ಸಿಬ್ಬಂದಿಯನ್ನು ಕರೆದು ಮೂರು ಬಾಗಿಲಿರುವ ಪುರಸಭಾ ಕಚೇರಿಯ ಮುಂಬಾಗಿಲಿಗೆ ಬೀಗಹಾಕುವಂತೆ ಸೂಚಿಸಿ ತೆರಳಿದ್ದರು. ಅಧ್ಯಕ್ಷರ ಆದೇಶವನ್ನು ಯಥಾವತ್ತಾಗಿ ಪಾಲಿಸಿದ ಸಿಬ್ಬಂದಿ, ತಕ್ಷಣ ಮೂರು ಬಾಗಿಲಿಗೂ ಬೀಗ ಜಡಿದದ್ದೇ ಈ ಅವಾಂತರಕ್ಕೆ ಕಾರಣವಾಯಿತು. ಸುದ್ದಿ ತಿಳಿದ ಮಾಧ್ಯಮ ಪ್ರತಿನಿಧಿಗಳು ಪುರಸಭಾ ಕಚೇರಿಗೆ ಧಾವಿಸುತ್ತಿದ್ದಂತೆಯೇ ಕಚೇರಿಯೊಳಗೆ ಕುಳಿತಿದ್ದ ಮುಖ್ಯಾಧಿಕಾರಿ ಮುಜುಗರಕ್ಕೆ ಒಳಗಾದರು. ಕೂಡಲೇ ಸಿಬ್ಬಂದಿಯನ್ನು ಕರೆಸಿ ಬಾಗಿಲಿನ ಬೀಗ ತೆರಯುವಂತೆ ಸೂಚಿಸಿದರು. ಬೀಗ ತೆರೆಯಲ್ಪಡುತ್ತಿದ್ದಂತೆಯೇ ಮಾಧ್ಯಮದವರ ಕಣ್ತಪ್ಪಿಸಿಕೊಂಡು ಸಿಬ್ಬಂದಿ ಓಟಕ್ಕಿತ್ತ ಸನ್ನಿವೇಶವೂ ಕಂಡುಬಂತು.
ಪುರಸಭಾ ಅಧ್ಯಕ್ಷರ ಈ ಕ್ರಮವನ್ನು ಮಾಜಿ ಸದಸ್ಯ ಸುರೇಶ್ ಕುಲಾಲ್ ಖಂಡಿಸಿದ್ದಾರೆ. ವಿವರಣೆ ನೀಡಲು ಮುಖ್ಯಾಧಿಕಾರಿ ಗಣೇಶ್ ನಿರಾಕರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.